ಶೀಘ್ರದಲ್ಲೇ ‘ಅವಿತಿಟ್ಟ ಅಂಬೇಡ್ಕರ್’ ನಾಟಕ ಕೃತಿ ಬಿಡುಗಡೆ
ಮೈಸೂರು

ಶೀಘ್ರದಲ್ಲೇ ‘ಅವಿತಿಟ್ಟ ಅಂಬೇಡ್ಕರ್’ ನಾಟಕ ಕೃತಿ ಬಿಡುಗಡೆ

April 12, 2021

ಮೈಸೂರು, ಏ.11(ಆರ್‍ಕೆಬಿ)- ಸುಶಿಕ್ಷಿತರಾದ ಮೇಲೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಎದುರಿಸಿದ ಸಮಸ್ಯೆಗಳ ಕುರಿತು ತಾವು ಬರೆದಿರುವ ‘ಅವಿತಿಟ್ಟ ಅಂಬೇಡ್ಕರ್’ ನಾಟಕದ ಕೃತಿ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಎಂದು ಲೇಖಕ ಡಾ.ಸುಧಾಕರ ಹೊಸಳ್ಳಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಚಿಂತನೆ ಬಹುಪಾಲು ಯುವಜನರಿಗೆ ಆದರ್ಶಪ್ರಾಯವಾಗಿವೆ. ಆದರೆ, ಇಂದು ಅಂಬೇಡ್ಕರ್ ಅವರ ಸಂವಿಧಾನವನ್ನಷ್ಟೇ ನೋಡು ತ್ತಿದ್ದು, ಆದರೆ ರಚನೆ ವೇಳೆ ಅವರು ಎದುರಿಸಿದ ಸವಾಲುಗಳು ಬಹಳಷ್ಟು ಜನರಿಗೆ ತಿಳಿಯದಾಗಿದೆ. ದೇಶ ಪ್ರೇಮಿಯೂ ಆಗಿದ್ದ ಅವರು, ಭಾರತ ಎನ್ನುವುದು ಒಂದು ಪ್ರಕೃತಿದತ್ತವಾದ ಅಖಂಡ ಭಾರತ ಎಂದು ಹೇಳಿದ್ದನ್ನು ಇಂದು ಯಾರಿಗೂ ತಿಳಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲ್ಯದಲ್ಲಿ ಅಂಬೇಡ್ಕರ್ ಅನುಭವಿಸಿದ ಅವಮಾನಗಳನ್ನು ಎಲ್ಲರೂ ಓದಿದ್ದಾರೆ. ಆದರೆ, ಶಿಕ್ಷಣ ಪಡೆದ ಬಳಿಕ ಮತ್ತು ಸಂವಿಧಾನ ರಚನಾ ಸಮಿತಿ ಸಭೆಯಲ್ಲಿ ಅಸ್ಪøಶ್ಯತೆಯನ್ನು ಅನುಭವಿಸಿದ್ದರು. ಇದ್ಯಾವುದನ್ನೂ ಹೆಚ್ಚಿನ ಜನರಿಗೆ ತಿಳಿಸುವುದನ್ನು ಬೇಕೆಂದೇ ಅವಿತಿಡಲಾಗಿದೆ ಎಂದರು. ಬ್ರಿಟಿಷರು ನಿಮಗೆ ಜೈಲಿನಲ್ಲಿರುವ ಅವಕಾಶ ನೀಡದೇ ಇರಬಹುದು, ಆದರೆ, ನಿಮ್ಮ ಕೈಯಾರೆ ರಚಿಸಿರುವ ಸಂವಿಧಾನವೇ ನಿಮಗೆ ಜೈಲು ಸೇರುವ ಅವಕಾಶವನ್ನು ಖಂಡಿತ ಒದಗಿಸುತ್ತದೆ ಎನ್ನುವ ಪರೋಕ್ಷ ಬೆದರಿಕೆಗಳು ಅಂದಿನ ಅಧಿಕಾರಾರೂಢ ನಾಯಕರುಗಳಿಂದ ಅವರಿಗೆ ಬಂದಿತ್ತು. ಇವೆಲ್ಲವೂ ಸೇರಿದಂತೆ ಸಂವಿಧಾನ ರಚನೆ ವೇಳೆ ಹಾಗೂ ನಂತರ ಅವರು ಎದುರಿಸಿದ ಸಂಕಷ್ಟವನ್ನು ಪುಸ್ತಕದಲ್ಲಿ ವಿವರಿಸಿರುವುದಾಗಿ ತಿಳಿಸಿದರು.
ರಾಜ್ಯ ಆಹಾರ ನಿಗಮದ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಮಾ. ವೆಂಕಟರಾಮ್ ಮಾತನಾಡಿ, ನಾಟಕವು ಸಂಶೋಧನಾತ್ಮಕವಾಗಿದೆ. ಅಂಬೇಡ್ಕರ್ ಅವರನ್ನು ಓರ್ವ ಜಾತೀಯ ವ್ಯಕ್ತಿ ಎಂದೇ ಗುರುತಿಸಲಾಗುತ್ತಿದೆ. ಆದರೆ ಅವರನ್ನು ಗಾಂಧೀಜಿ, ವಲ್ಲಭಬಾಯಿ ಪಟೇಲ್‍ರಂತೆಯೇ ಕಾಣಬೇಕಾಗಿದೆ ಎಂದು ಹೇಳಿದರು. ಮತ್ತೊಬ್ಬ ಲೇಖಕ ಪ್ರವೀಣ್‍ಕುಮಾರ್ ಮಾವಿನಕಾಡು ಉಪಸ್ಥಿತರಿದ್ದರು.

Translate »