ಕಾವೇರಿ ತೀರ್ಥೋದ್ಭವದ ಗೊಂದಲ ನಿವಾರಣೆಗೆ ಜಿಲ್ಲಾಡಳಿತಕ್ಕೆ ಮನವಿ
ಕೊಡಗು

ಕಾವೇರಿ ತೀರ್ಥೋದ್ಭವದ ಗೊಂದಲ ನಿವಾರಣೆಗೆ ಜಿಲ್ಲಾಡಳಿತಕ್ಕೆ ಮನವಿ

September 28, 2021

ಮಡಿಕೇರಿ, ಸೆ.27- ಕಳೆದ ಕೆಲ ವರ್ಷಗಳಿಂದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಸಂದರ್ಭ ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಜಿಲ್ಲಾಡಳಿತದ ನಿರ್ಬಂಧಗಳಿಂದ ಕೊಡವರು ಹಾಗೂ ಕೊಡಗಿನ ಮೂಲ ನಿವಾಸಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಈ ಬಾರಿ ಕಾವೇರಿ ತುಲಾ ಸಂಕ್ರಮಣ ಅಧಿಕಾರಿಗಳ ಹಬ್ಬವಾಗಿರದೆ, ಭಕ್ತರ ಭಾವನೆಗಳಿಗೆ ಪೂರಕವಾಗಿರಲಿ ಎಂದು ಅಖಿಲ ಕೊಡವ ಸಮಾಜ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ತೀರ್ಥೋದ್ಭವದ ದಿನದಲ್ಲಿ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗದಂತೆ ಜಿಲ್ಲಾಡಳಿತ ನಿಯಮ ರೂಪಿಸಬೇಕು. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಪ್ರವಾಸಿಗರ ಆಗಮನಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಕೋವಿಡ್ ನಿಯಮದ ನೆಪದಲ್ಲಿ ಕೊಡಗಿನ ಭಕ್ತರಿಗೆ ತಲಕಾವೇರಿಯಲ್ಲಿ ಅಡಚಣೆ ಉಂಟು ಮಾಡಬಾರದು. ಅ.1ರಿಂದ ಕಿರು ಸಂಕ್ರಮಣದವರೆಗೆ ಪ್ರವಾಸಿಗರಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದು, ತೀರ್ಥೋದ್ಭವದ ದಿನ ಸ್ಥಳೀಯ ನಿವಾಸಿಗಳೇ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎನ್ನುವ ವಾದ ಸರಿಯಲ್ಲ. ಪವಿತ್ರ ಕ್ಷೇತ್ರದಲ್ಲಿ ಹೆಸರಿಗಾಗಿ ಸೇವೆ ಮಾಡಬಾರದು, ಭಕ್ತಿಯಿಂದ ಭಕ್ತರು ಮಾಡುವ ಸೇವೆ ಇಲ್ಲಿರಬೇಕು. ಗೊಂದಲ ಸೃಷ್ಟಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಮಾತೆ ಕಾವೇರಿಯ ಸೇವೆ ಮಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

ತಲಕಾವೇರಿ ಮತ್ತು ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ವಿಸರ್ಜನೆಗೊಂಡು ಬಹಳಷ್ಟ್ಟು ಸಮಯವಾಗಿದೆ. ತಕ್ಷಣ ನೂತನ ಸಮಿತಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮೊಣ್ಣಪ್ಪ ಒತ್ತಾಯಿಸಿದ್ದಾರೆ.

Translate »