ಕಿರುತೆರೆಯಲ್ಲೀಗ ಕಾದಂಬರಿ ಆಧಾರಿತ ಕಥೆಗಳ ಗುಚ್ಛ
ಸಿನಿಮಾ

ಕಿರುತೆರೆಯಲ್ಲೀಗ ಕಾದಂಬರಿ ಆಧಾರಿತ ಕಥೆಗಳ ಗುಚ್ಛ

July 3, 2020

ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಕನ್ನಡಿಗರದೇ ಆದ ವಾಹಿನಿಗಳು ಬೆರಳೆಣಿಕೆಯಷ್ಟು ಮಾತ್ರವೇ ಇವೆ. ಅಂಥವುಗಳಲ್ಲಿ ಸಿರಿಕನ್ನಡ ವಾಹಿನಿ ಕೂಡ ಒಂದು. ಇದು ಬರೀ ಕನ್ನಡಿಗರ ವಾಹಿನಿ ಮಾತ್ರವಲ್ಲ. ಈವರೆಗೆ ಯಾವುದೇ ರೀಮೇಕ್ ಅಥವಾ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡದೆ ಅಪ್ಪಟ ಕನ್ನಡದ ಸೊಗಡಿನ ಧಾರಾವಾಹಿಗಳನ್ನು ಮಾತ್ರವೇ ಪ್ರಸಾರ ಮಾಡುತ್ತಿದೆ. ಒಂದೂವರೆ ವರ್ಷದ ಹಿಂದಷ್ಟೇ ಕನ್ನಡಿಗರಿಂದ, ಕನ್ನಡಿಗರಿಗಾಗಿಯೇ ತನ್ನ ಪ್ರಸಾರ ಆರಂಭಿಸಿದ ಸಿರಿಕನ್ನಡ ವಾಹಿನಿಯು ಹಲವಾರು ಯಶಸ್ವಿ ಚಿತ್ರಗಳು ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವ ಮೂಲಕ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಈಗ ವಾಹಿನಿಯು ಮನರಂಜನೆಯ ಮತ್ತೊಂದು ಹಂತಕ್ಕೆ ತನ್ನ ಹೆಜ್ಜೆ ಇಡುತ್ತಿದೆ. ಇದರ ಫಲವಾಗಿ ರಾತ್ರಿ 7.30ರಿಂದ 9.30ರವರೆಗೆ ವಿಭಿನ್ನ ಕತೆಯ ಹೊಚ್ಚ ಹೊಸ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಲು ಮುಂದಾಗಿದೆ. ಅದರಲ್ಲೂ ಕಾದಂಬರಿ ಆಧಾರಿತ ಸೀರಿಯಲ್‍ಗಳನ್ನು ನೀಡುವತ್ತ ಹೆಜ್ಜೆ ಇಟ್ಟಿದೆ. ರಾತ್ರಿ 7:30ಕ್ಕೆ ಪ್ರಸಾರವಾಗುವ ಅಗ್ನಿನಕ್ಷತ್ರ ಧಾರಾವಾಹಿ ಪ್ರೀತಿಯ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತಾ ಸಾಗಿದರೆ, ಎಂಟು ಗಂಟೆಗೆ ಬರುವ ತರಂಗಿಣಿ ಧಾರಾವಾಹಿಯು ಮೂವರು ಗೆಳತಿಯರ ಜೀವನ ಸಂಘರ್ಷದ ಕಥೆಯನ್ನು ಹೊಂದಿದೆ. ಇನ್ನು 8:30ಕ್ಕೆ ಪ್ರಸಾರವಾಗುವ ಜಗದೇಕವೀರ ಜೊತೆಯಲಿ ಸುಂದರಿ ವಿಶಿಷ್ಟ ಸೋಷಿಯೋ ಫ್ಯಾಂಟಸಿ ಕಥಾಹಂದರವನ್ನು ಒಳಗೊಂಡಿದೆ. ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಗೊಂಬೆಮನೆ ಧಾರಾವಾಹಿಯಲ್ಲಿ ಅಕ್ಕ-ತಂಗಿಯರ ನಡುವಿನ ಪ್ರೀತಿ-ವಾತ್ಸಲ್ಯದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಸಿರಿಕನ್ನಡದ ಮುಖ್ಯಸ್ಥ ಸಂಜಯ್ ಶಿಂಧೆ ಮಾತನಾಡುತ್ತ ಈಗ ಪ್ರಸಾರವಾಗುವ ಸೀರಿಯಲ್‍ಗಳಲ್ಲಿ ಉತ್ತಮ ಕಥಾನಕ ಮತ್ತು ಮನರಂಜನಾತ್ಮಕ ಅಂಶಗಳನ್ನು ಪ್ರಮುಖವಾಗಿ ಹೇಳುವ ಮೂಲಕ ಹಿರಿಯ, ಕಿರಿಯರೆನ್ನದೆ ಎಲ್ಲಾ ವರ್ಗದ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

ಇದಲ್ಲದೆ ಕನ್ನಡದ ಹೆಸರಾಂತ ಲೇಖಕರ ದೇಸೀ ಕಾದಂಬರಿಗಳನ್ನು ಧಾರಾವಾಹಿಯ ರೂಪದಲ್ಲಿ ತರುವ ಆಶಯವನ್ನು ನಾವು ಹೊಂದಿದ್ದು, ಆ ನಿಟ್ಟಿನಲ್ಲಿ ನಮ್ಮ ಕ್ರಿಯೇಟಿವ್ ತಂಡವು ಕಾರ್ಯನಿರತವಾಗಿದೆ ಎನ್ನುತ್ತಾರೆ.

Translate »