ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ, ಶಿಕ್ಷಕರು ಸೇರಿ 25 ಮಂದಿಗೆ ಗಾಯ
ಮೈಸೂರು

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ, ಶಿಕ್ಷಕರು ಸೇರಿ 25 ಮಂದಿಗೆ ಗಾಯ

December 16, 2022

ಹುಣಸೂರು, ಡಿ.15- ಹುಣಸೂರು ತಾಲೂಕಿನ ಧರ್ಮಾಪುರದಿಂದ ಶಿವಮೊಗ್ಗ ಜಿಲ್ಲೆಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿ ಐವರು ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿ ರುವ ಘಟನೆ ಶಿವಮೊಗ್ಗ ಜಿಲ್ಲೆಯ ವಕ್ಕೋಡು ಕ್ರಾಸ್(ತುಮರಿ ಬಳಿಯಲ್ಲಿ)ನಲ್ಲಿ ನಡೆದಿದೆ.

ತಾಲೂಕಿನ ಧರ್ಮಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವರುದ್ರಪ್ಪ, ಶಿಕ್ಷಕರಾದ ಕೀರ್ತಿಕುಮಾರಿ, ರವಿ ಕೈಮೂಳೆ ಮುರಿದಿದ್ದು, ವಿದ್ಯಾರ್ಥಿಗಳಾದ ರಾಜೇಶ್, ದಿವ್ಯ ಅವರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿ.13ರಂದು 47 ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಗೆ ಶೈಕ್ಷಣಿಕ ಪ್ರವಾಸ ಹೊರಟಿದ್ದು, ಡಿ.15, ಗುರುವಾರ ಮುಂಜಾನೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಮಾರ್ಗದಲ್ಲಿ ಚಲಿಸುತ್ತಿದ್ದ ವಾಹನ ಸವಾರರು, ಸ್ಥಳೀಯರ ನೆರವಿನೊಂದಿಗೆ ಸಾಗರ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಶಾಸಕರ ಸ್ಪಂದನೆ: ವಿಷಯ ತಿಳಿಯುತ್ತಿದ್ದಂತೆ ಶಾಸಕ ಹೆಚ್.ಪಿ.ಮಂಜುನಾಥ್ ಅವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಗರ ತಾಲೂಕಿನ ಶಾಸಕ ಹರತಾಳು ಹಾಲಪ್ಪರಿಗೆ ಮಾಹಿತಿ ನೀಡಿದ ಮೇರೆಗೆ ತಕ್ಷಣವೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಇತರೆ ಮುಖಂಡರು, ಶಿವಮೊಗ್ಗ ಶಿಕ್ಷಣ ಇಲಾಖೆ ಅಧಿಕಾರಿ ಗಳು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಡಾ.ಪರಪ್ಪ ಬೋನಸ್ ನೇತೃತ್ವದಲ್ಲಿ ಎಲ್ಲಾ ಗಾಯಾಳು ಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದೆ, ಬೆಳಗ್ಗೆ ವಾಪಸ್ ಬರಲಿದ್ದಾರೆ. ಶಾಸಕ ಎಚ್.ಪಿ.ಮಂಜುನಾಥ್ ಮತ್ತು ತಾವು ಶಿವಮೊಗ್ಗ ವೈದ್ಯ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಬಿಇಓ ರೇವಣ್ಣ ತಿಳಿಸಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆದಿದ್ದು, ಮಾಜಿ ಸಚಿವರು ಹಾಗೂ ಅಲ್ಲಿನ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಒಂದು ಕೆಎಸ್‍ಆರ್‍ಟಿಸಿಬಸ್ ಹಾಗೂ ಎರಡು ಟಿಟಿ ವಾಹನ ವ್ಯವಸ್ಥೆ ಕಲ್ಪಿಸಿ ಎಲ್ಲರನ್ನೂ ಹುಣಸೂರಿಗೆ ಕಳುಹಿಸಿಕೊಟ್ಟಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಾಳೆ(ಡಿ.16) ಬೆಳಗ್ಗೆ ಸುರಕ್ಷಿತವಾಗಿ ಹುಣಸೂರಿಗೆ ಆಗಮಿಸಲಿದ್ದಾರೆ ಎಂದು ಬಿಇಓ ರೇವಣ್ಣ ತಿಳಿಸಿದರು.

Translate »