ಕಡಕೊಳ ಬಳಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಕುಟುಂಬ ಸದಸ್ಯರಿದ್ದ ಕಾರು ಅಪಘಾತ
ಮೈಸೂರು

ಕಡಕೊಳ ಬಳಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಕುಟುಂಬ ಸದಸ್ಯರಿದ್ದ ಕಾರು ಅಪಘಾತ

December 28, 2022

ಮೈಸೂರು, ಡಿ.27(ಆರ್‍ಕೆ)-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಬಾಯ್ ದಾಮೋದರ್ ದಾಸ್ ಮೋದಿ ಹಾಗೂ ಅವರ ಪುತ್ರ, ಸೊಸೆ, ಮೊಮ್ಮಗ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆನ್ಜ್ ಕಾರು ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಡಕೊಳ ಬಳಿ ಇಂದು (ಮಂಗಳವಾರ) ಮಧ್ಯಾಹ್ನ ಅಪಘಾತಕ್ಕೀಡಾಗಿದೆ.

ಘಟನೆಯಲ್ಲಿ ಪ್ರಹ್ಲಾದ್ ಬಾಯ್ ದಾಮೋದರ್ ದಾಸ್ ಮೋದಿ(70), ಮಗ ಮೆಹುಲ್ ಪ್ರಹ್ಲಾದ್ ಬಾಯ್ ಮೋದಿ(40), ಸೊಸೆ ಜಿನಲ್ ಮೋದಿ(35), ಮೊಮ್ಮಗ ಮಹಾರ್ಥ್ ಮೆಹುಲ್ ಮೋದಿ(6) ಹಾಗೂ ಕಾರು ಚಾಲಕ ಸತ್ಯನಾರಾಯಣ(46) ಗಾಯಗೊಂಡಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಅಹಮದಾಬಾದ್‍ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರಹ್ಲಾದ್ ಮೋದಿ ಅವರ ಕುಟುಂಬ ಸದಸ್ಯರು, ಬೆನ್ಜ್ (ಕೆಎ 51 ಎಂ.ಎನ್. 5678) ಸೇರಿದಂತೆ ಎರಡು ಕಾರುಗಳಲ್ಲಿ ಇಂದು ಬೆಂಗಳೂರಿನಿಂದ ಮೈಸೂರು ಮಾರ್ಗ ಬಂಡೀ ಪುರಕ್ಕೆ ಪ್ರಯಾಣಿಸುತ್ತಿದ್ದರು.
ಮುಂದೆ ಪೈಲಟ್ ಮತ್ತು ಹಿಂದೆ ಎಸ್ಕಾರ್ಟ್ ವಾಹನದ ಮಧ್ಯೆ ತೆರಳುತ್ತಿದ್ದ ಬೆನ್ಜ್ ಕಾರು, ಬೆಂಗಳೂರು-ನೀಲಗಿರಿ ಹೆದ್ದಾರಿಯಲ್ಲಿ ಕಡಕೊಳ ಬಳಿ ಮಧ್ಯಾಹ್ನ 1.30ರಲ್ಲಿ ರಸ್ತೆ ವಿಭಜಕ (ಮೀಡಿಯನ್)ಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂದಿನ ಸೀಟಿನಲ್ಲಿದ್ದ ಪ್ರಹ್ಲಾದ್ ಮೋದಿ, ಹಿಂದೆ ಕುಳಿತಿದ್ದ ಮಗ ಮೆಹುಲ್ ಪ್ರಹ್ಲಾದ್ ಮೋದಿ, ಸೊಸೆ ಜಿಲಾಲ್ ಮೋದಿ, ಮೊಮ್ಮಗ ಮಹಾರ್ಥ್ ಮೆಹುಲ್ ಮೋದಿ ಹಾಗೂ ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಸತ್ಯನಾರಾಯಣ ಅವರು ಗಾಯಗೊಂಡರು.

ಮೆಹುಲ್ ಮೋದಿ ಅವರಿಗೆ ತರಚಿದ ಗಾಯಗಳಾಗಿದ್ದು, ಜಿಲಾಲ್ ಅವರಿಗೆ ಕಣ್ಣಿನ ಬಳಿ ಗಾಯಗಳಾಗಿವೆ. ಆದರೆ ಮಹಾರ್ಥ್ ಮೆಹುಲ್ ಮೋದಿಯ ಎಡ ಮೊಣಕಾಲಿನ ಮೂಳೆ ಮುರಿದಿದೆ. ಉಳಿದಂತೆ ಪ್ರಹ್ಲಾದ್ ಮೋದಿ ಮತ್ತು ಚಾಲಕ ಸತ್ಯನಾರಾಯಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ಪಿ ನಂದಿನಿ, ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಮೋದಿ ಕುಟುಂಬದ ಸದಸ್ಯರನ್ನು ಆಂಬುಲೆನ್ಸ್‍ನಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಕರೆತಂದು, ದಾಖಲು ಮಾಡಿದರು.

ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಮಾಜಿ ಶಾಸಕ ಬಾಲರಾಜ್ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ತೆರಳಿ ಪ್ರಹ್ಲಾದ್ ಮೋದಿ ಕುಟುಂಬದವರ ಆರೋಗ್ಯ ವಿಚಾರಿಸಿದರು.

ಅಪಘಾತಕ್ಕೀಡಾದ ಬೆನ್ಜ್ ಕಾರಿನ ಎಲ್ಲಾ ಏರ್ ಬ್ಯಾಗ್‍ಗಳು ತೆರೆದುಕೊಂಡಿದ್ದರಿಂದ ಪ್ರಯಾಣಿಸುತ್ತಿದ್ದವರೆಲ್ಲರೂ ಪಾರಾಗಿದ್ದಾರೆ. ಅಪಘಾತಕ್ಕೀಡಾದ ಬೆನ್ಜ್ ಕಾರಿಗೆ ಹಿಂದೆ ಬರುತ್ತಿದ್ದ ಕಿಯಾ ಕಾರು ಡಿಕ್ಕಿ ಹೊಡೆದು ಅದರ ಮುಂಭಾಗವೂ ಸ್ವಲ್ಪ ಜಖಂಗೊಂಡಿದೆ. ಇದರಲ್ಲಿ ಪ್ರಹ್ಲಾದ್ ಮೋದಿ ಅವರ ಮಗಳು, ಅಳಿಯ ಇದ್ದರೆಂದು ಹೇಳಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ.

ನಿದ್ರೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ಮೀಡಿಯನ್‍ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದ್ದರೂ, ಘಟನೆ ಹೇಗಾಯಿತು ಎಂಬುದೇ ತಿಳಿಯುತ್ತಿಲ್ಲ ಎಂದು ಕಾರು ಚಾಲಕ ಸತ್ಯನಾರಾಯಣ ಅವರು ಆಸ್ಪತ್ರೆಯಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಶಶಿಕುಮಾರ್ ಘಟನಾ ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತ ಸಂಭವಿಸಿರುವುದು ಗಣ್ಯರ ವಾಹನ ಎಂದು ತಿಳಿಯುತ್ತಿದ್ದಂತೆಯೇ ಕಡಕೊಳ ಬಳಿ ಸಾರ್ವಜನಿಕರು ಜಮಾಯಿಸಲೆತ್ನಿಸಿದಾಗ ಪೊಲೀಸರು ಅವರನ್ನು ಚದುರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಎಂ.ಮುತ್ತುರಾಜ್, ಎಂ.ಎಸ್.ಗೀತಾ ಪ್ರಸನ್ನ, ಕೆ.ಆರ್. ಉಪ ವಿಭಾಗದ ಎಸಿಪಿ ಎಸ್.ಇ.ಗಂಗಾಧರಸ್ವಾಮಿ, ಕೆ.ಆರ್. ಠಾಣೆ ಇನ್ಸ್‍ಪೆಕ್ಟರ್ ಮಹೇಶ್, ಕೆ.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಹಾಗೂ ಇತರ ಅಧಿಕಾರಿಗಳು ಜೆಎಸ್‍ಎಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಮುಂಜಾಗ್ರತಾ ಕ್ರಮವಾಗಿ ಜೆಎಸ್‍ಎಸ್ ಆಸ್ಪತ್ರೆ ಬಳಿ ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಭದ್ರತೆ ಒದಗಿಸಲಾಗಿದೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಸುತ್ತೂರು ಶ್ರೀಗಳು, ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಎಲ್ಲರೂ ದೈವವಶಾತ್ ಪಾರಾಗಿದ್ದಾರೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್ ಆಗಬಹುದು ಎಂದು ತಿಳಿಸಿದರು.

Translate »