ಸಹೋದರನಿಗೆ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಣೆ
ಮೈಸೂರು

ಸಹೋದರನಿಗೆ ಪ್ರಧಾನಿ ಮೋದಿ ಕರೆ ಮಾಡಿ ಆರೋಗ್ಯ ವಿಚಾರಣೆ

December 29, 2022

ಮೈಸೂರು, ಡಿ. 28(ಆರ್‍ಕೆ)- ಬೆಂಗಳೂರು-ನೀಲಗಿರಿ ರಸ್ತೆಯ ಕಡಕೊಳ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡು, ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಹ್ಲಾದ್ ಮೋದಿ ಹಾಗೂ ಕುಟುಂಬದವರು ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ನಡೆದ ತಕ್ಷಣ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆಯೇ ದೂರವಾಣಿ ಕರೆ ಮಾಡಿ ಸಹೋದರ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಹ್ಲಾದ್ ಮೋದಿ ಅವರು, ನನ್ನ ಸಹೋದರ ರಾದ, ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಮೊಬೈಲ್ ಮೂಲಕ ಕರೆ ಮಾಡಿ ನಮ್ಮ ಆರೋಗ್ಯ ಸ್ಥಿತಿ, ಯೋಗಕ್ಷೇಮ ವಿಚಾರಿಸಿದರು, ಘಟನೆ ಬಗ್ಗೆ ವಿವರಿಸಿ, ನಾವೆಲ್ಲರೂ ಕ್ಷೇಮ ವಾಗಿದ್ದೇವೆ, ಗುಣಮುಖರಾಗಿ ಗುಜರಾತ್‍ಗೆ ಮರಳುತ್ತಿರುವುದಾಗಿ ತಿಳಿಸಿದೆ ಎಂದರು.

ಬೆಂಗಳೂರಿನಿಂದ ಸ್ನೇಹಿತ ರಾಜಶೇಖರ ಅವರ ಕಾರಿನಲ್ಲಿ ಮಂಗಳವಾರ ನಾನು ಮತ್ತು ನಮ್ಮ ಕುಟುಂಬದವರು ಮೈಸೂರು ಮೂಲಕ ಬಂಡಿಪುರಕ್ಕೆ ತೆರಳುತ್ತಿದ್ದೆವು. ಆ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಮೊಮ್ಮಗನ ಎಡಕಾಲಿನ ಮೂಳೆ ಮುರಿದಿರುವುದನ್ನು ಹೊರತುಪಡಿಸಿದರೆ,
ದೇವರ ದಯೆಯಿಂದ ಎಲ್ಲರೂ ಚೆನ್ನಾಗಿದ್ದೇವೆ. ಅಪಘಾತವಾದಾಗ ಜೊತೆ ಯಲ್ಲಿದ್ದ ಪೈಲಟ್, ಪ್ರೋಟೋಕಾಲ್, ಎಸ್ಕಾರ್ಟ್ ವಾಹನಗಳ ಪೊಲೀಸರು ನಮ್ಮನ್ನು ತಕ್ಷಣ ಆಸ್ಪತ್ರೆಗೆ ಕರೆತಂದರು ಎಂದು ಪ್ರಹ್ಲಾದ್ ಮೋದಿ ನುಡಿದರು. ಆಸ್ಪತ್ರೆಗೆ ಬಂದಾಗ ಇಲ್ಲಿನ ವೈದ್ಯರು, ಸಿಬ್ಬಂದಿ ತ್ವರಿತವಾಗಿ ಚಿಕಿತ್ಸೆ ನೀಡಿ, ಪ್ರಯೋಗಾಲಯದಲ್ಲಿ ಎಲ್ಲಾ ಬಗೆಯ ಪರೀಕ್ಷೆ ಮಾಡಿದರು. ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಬಂದು ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಆಶೀರ್ವದಿಸಿದರು. ಅವರ ಪ್ರೀತಿಯಿಂದ ನಮಗೆ ಆತ್ಮಸ್ಥೈರ್ಯ ಬಂದಿದೆ ಎಂದು ನುಡಿದರು. ಘಟನೆ ನಡೆದಾಗ ಸ್ಥಳದಲ್ಲಿದ್ದ ಜನರು ನಮ್ಮನ್ನು ಆಸ್ಪತ್ರೆಗೆ ಕರೆತರಲು ನೀಡಿದ ನೆರವು, ಆಸ್ಪತ್ರೆಯಲ್ಲಿ ನಮ್ಮನ್ನು ಮನೆಯವರಂತೆ ನೋಡಿಕೊಂಡು ಚಿಕಿತ್ಸೆ, ಆರೈಕೆ ಮಾಡಿದ ವೈದ್ಯರು, ಇತರ ಸಿಬ್ಬಂದಿ, ಬಿಜೆಪಿ ನಾಯಕರಲ್ಲದೆ ವಿರೋಧ ಪಕ್ಷಗಳ ಮುಖಂಡರೂ ಬಂದು ನಮ್ಮೆಲ್ಲರ ಆರೋಗ್ಯ ವಿಚಾರಿಸಿದ್ದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಸರ್ಕಾರ ಮತ್ತು ಕರ್ನಾಟಕದ ಜನರು ನಮ್ಮವರೆಂಬ ಭಾವನೆ ಮೂಡಿದೆ. ಅವರೆಲ್ಲರಿಗೂ ನಮ್ಮ ಕುಟುಂಬ ಕೃತಜ್ಞತೆ ಸಲ್ಲಿಸುತ್ತದೆ ಎಂದು ಪ್ರಹ್ಲಾದ್ ಮೋದಿ ಅವರು ಇದೇ ಸಂದರ್ಭ ನುಡಿದರು. ಪೈಲಟ್, ಬೆಂಗಾವಲು ವಾಹನಗಳಿದ್ದರಿಂದ ನಾವು ಪ್ರಯಾಣಿ ಸುತ್ತಿದ್ದ ಕಾರೇನು ಅತೀ ವೇಗವಾಗಿ ಚಲಿಸುತ್ತಿರ ಲಿಲ್ಲ. ಚಾಲಕನ ನಿರ್ಲಕ್ಷ್ಯ ಎಂದೂ ಹೇಳಲಾಗದು. ಅದೊಂದು ಆಕಸ್ಮಿಕ ಅಷ್ಟೇ.

ದೇವರ ದಯೆ, ಕರ್ನಾಟಕದ ಜನರ ಪ್ರೀತಿಯಿಂದಾಗಿ ಯಾವುದೇ ತೊಂದರೆ ಆಗಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ. ಸಂಕಷ್ಟ ಸ್ಥಿತಿಯಲ್ಲಿ ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ನುಡಿದರು. ಸೀಟ್ ಬೆಲ್ಟ್ ಧರಿಸಿದ್ದರಿಂದ, ಕಾರಿನ ಎಲ್ಲಾ ಏರ್‍ಬ್ಯಾಗ್‍ಗಳೂ ತೆರೆದುಕೊಂಡ ಕಾರಣ ನಾವೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಎಲ್ಲರೂ ಸೀಟ್ ಬೆಲ್ಟ್ ಧರಿಸುವುದೂ ಸೇರಿದಂತೆ ಎಲ್ಲಾ ಸಂಚಾರ ನಿಯಮಗಳನ್ನೂ ಪಾಲಿಸಬೇಕೆಂದ ಅವರು, ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಕಾರಿನಲ್ಲಿ ಇಂತಹ ಸುರಕ್ಷಾ ವ್ಯವಸ್ಥೆ ನಮಗೆ ಲಭ್ಯವಾಗಿದೆ ಎಂದರು.

ಜೆಎಸ್‍ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಮಧು ಮಾತನಾಡಿ, ಅಪಘಾತ ಕ್ಕೀಡಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಹಾಗೂ ಕುಟುಂಬದವರು ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಆಸ್ಪತ್ರೆಗೆ ಬಂದರು. ತಕ್ಷಣ ನಾವು ಅವರಿಗೆ ಎಲ್ಲಾ ರೀತಿಯ ಪರೀಕ್ಷೆ ನಡೆಸಿದೆವು. ಸಣ್ಣಪುಟ್ಟ ಗಾಯಗಳಾಗಿದ್ದು, ಆತಂಕದ ಪರಿಸ್ಥಿತಿ ಇರಲಿಲ್ಲ ಎಂದರು.

ಮೊಮ್ಮಗನ ಎಡ ಮೊಣಕಾಲಿನ ಮೂಳೆ ಮುರಿದಿದೆ. ಮೂಳೆ ತಜ್ಞರು ಚಿಕಿತ್ಸೆ ನೀಡಿ ಪ್ಲಾಸ್ಟರ್ ಮಾಡಿರುವುದರಿಂದ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ನಿನ್ನೆ ಸಂಜೆಯೇ ವಿಶೇಷ ತಜ್ಞರನ್ನು ಕರೆಸಿ ಅವರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ ಎಂದರು. ಶಾಸಕ ಎಸ್.ಎ.ರಾಮದಾಸ್, ಪ್ರಹಲ್ಲಾದ ಮೋದಿ ಅವರ ಮಗ ಮೆಹುಲ್ ಮೋದಿ, ಜೆಎಸ್‍ಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಹೆಚ್. ಬಸವನಗೌಡಪ್ಪ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »