ಒಮ್ಮೆಗೆ ನೀರಿನ ಬಿಲ್ ಪಾವತಿಗೆ ನೀರಸ ಪ್ರತಿಕ್ರಿಯೆ
ಮೈಸೂರು

ಒಮ್ಮೆಗೆ ನೀರಿನ ಬಿಲ್ ಪಾವತಿಗೆ ನೀರಸ ಪ್ರತಿಕ್ರಿಯೆ

December 6, 2022

ಮೈಸೂರು, ಡಿ.5(ಆರ್‍ಕೆ)- ಬಾಕಿ ಉಳಿಸಿಕೊಂಡಿರುವ ನೀರಿನ ತೆರಿಗೆಯನ್ನು ಒಂದೇ ಬಾರಿ ಪಾವತಿಸಲು ಮೈಸೂರು ನಾಗರಿಕರು ಹಿಂದೇಟು ಹಾಕುತ್ತಿದ್ದು, ಈ ಮೂಲಕ ನೀರಿನ ಬಾಕಿ ತೆರಿಗೆ ಸಂಗ್ರಹಕ್ಕೆ ಮೈಸೂರು ಮಹಾನಗರ ಪಾಲಿಕೆ ರೂಪಿಸಿರುವ ಯೋಜನೆಗೆ ಹಿನ್ನಡೆಯಾದಂತಾಗಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ಕೋಟಿ ರೂ.ಗೂ ಹೆಚ್ಚು ನೀರಿನ ತೆರಿಗೆ ಬಾಕಿ ಉಳಿದಿದೆ. ಇದನ್ನು ಹೇಗಾ ದರೂ ಸಂಗ್ರಹಿಸಬೇಕೆಂಬ ನಿಟ್ಟಿನಲ್ಲಿ ಗ್ರಾಹಕರಿಗೊಂದು ವಿಶೇಷ ಆಫರ್ ನೀಡಲಾಗಿತ್ತು. ನೀರಿನ ತೆರಿಗೆ ಒಟ್ಟು ಮೊತ್ತದಲ್ಲಿ ಅಸಲನ್ನು ಸಂಪೂರ್ಣವಾಗಿ ಪಾವತಿಸಿದರೆ ಕಠಿಣ ಕ್ರಮದಿಂದ ಪಾರಾಗಬಹುದು ಎಂಬ ಸೂಚನೆ ಯೊಂದಿಗೆ `ಒಂದೇ ಬಾರಿ ನೀರಿನ ತೆರಿಗೆ ಪಾವತಿ’ಗೆ ಅವಕಾಶ ನೀಡಲಾಗಿತ್ತು. ಆದರೆ ಇದಕ್ಕೆ ಬಳಕೆದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರೀಕ್ಷೆಯಷ್ಟು ತೆರಿಗೆ ಸಂಗ್ರಹವಾಗಿಲ್ಲ.

ಮೈಸೂರು ನಗರದಲ್ಲಿ ಕುಡಿಯುವ ನೀರಿನ ತೆರಿಗೆ ಸುಮಾರು 220 ಕೋಟಿ ರೂ. ಬಾಕಿ ಉಳಿದಿದ್ದರೂ ಅದರ ಲ್ಲಿನ ಬಡ್ಡಿ ಸ್ಥಿರೀಕರಣಗೊಳಿಸಿ (ಂbeಥಿಚಿಟಿಛಿe Sಛಿheme) ಕೇವಲ ಬಾಕಿ ಅಸಲು ಪಾವತಿಗೆ ಅವಕಾಶ ನೀಡಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ನಂತರ ಜಾರಿಗೊಳಿ ಸಲಾಗಿತ್ತು. ಆದರೆ ಪ್ರಸಕ್ತ ವರ್ಷದ ಜುಲೈನಿಂದ ನವೆಂಬರ್ ಮಾಹೆವರೆಗೆ 1,674 ಗ್ರಾಹಕರು ಮಾತ್ರ ಈ ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

5 ತಿಂಗಳಲ್ಲಿ 4 ಕೋಟಿ: ಜುಲೈ ತಿಂಗಳಲ್ಲಿ 36 ನೀರಿನ ಬಳಕೆದಾರರು 6,80,724 ರೂ., ಆಗಸ್ಟ್‍ನಲ್ಲಿ 123 ಮಂದಿ 22,93,973 ರೂ., ಸೆಪ್ಟೆಂಬರ್‍ನಲ್ಲಿ 366 ಮಂದಿ 84,34,063 ರೂ., ಅಕ್ಟೋಬರ್‍ನಲ್ಲಿ 491 ಮಂದಿ 1,21,05,813 ರೂ. ಹಾಗೂ ನವೆಂಬರ್ ಮಾಹೆಯಲ್ಲಿ 658 ಮಂದಿ 1,65,46,294 ರೂ.ಗಳ ಬಾಕಿ ನೀರಿನ ತೆರಿಗೆಯ ಅಸಲನ್ನು `ಒನ್ ಟೈಮ್ ಸೆಟಲ್‍ಮೆಂಟ್’ನಡಿ ಪಾವತಿಸಿದ್ದಾರೆ. ಅಂದರೆ ಕಳೆದ 5 ತಿಂಗಳಲ್ಜಿ ಒಟ್ಟು 1,674 ನೀರು ಬಳಕೆದಾರರಿಂದ ಒಟ್ಟು 4,00,60,867 ರೂ. ಪಾವತಿಯಾಗಿದೆ. ಇದಕ್ಕೆ ಸಂಬಂಧಿಸಿದ ಒಟ್ಟು 2,01,83,381 ರೂ. ಬಡ್ಡಿ ಹಣ ಬೆಯನ್ಸ್‍ನಲ್ಲಿ ಉಳಿದಿದೆ ಎಂದು ವಿವರಿಸಿದರು.

ಸರ್ಕಾರ ತೀರ್ಮಾನ: ಕೈಗಾರಿಕೆ ಮತ್ತು ವಾಣಿಜ್ಯ ಸಂಪರ್ಕ ಹೊರತುಪಡಿಸಿ ಕೇವಲ ಗೃಹಬಳಕೆ ನೀರಿನ ಸಂಪರ್ಕ ಹೊಂದಿರುವವರಿಗೆ ಮಾತ್ರ ಬಡ್ಡಿ ಸ್ಥಿರೀಕರಣದೊಂದಿಗೆ ಒಂದೇ ಬಾರಿ ಬಿಲ್ ಪಾವತಿಸುವ ಅವಕಾಶ ಒದಗಿಸಲಾಗಿದೆ. ಆದರೆ ಬಡ್ಡಿ ಮನ್ನಾ ಮಾಡುವ ಅಥವಾ ರಿಯಾಯ್ತಿ ನೀಡುವ ಸಂಬಂಧ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಂಡು ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿ ಸರ್ಕಾರ ತೀರ್ಮಾನಿಸುವವರೆಗೆ ನೀರಿನ ತೆರಿಗೆ ಬಾಕಿ ಮೇಲೆ ವಿಧಿಸಿರುವ ಬಡ್ಡಿ ಹೊರತುಪಡಿಸಿ ಅಸಲು ಹಣ ಪಾವತಿಸುವಂತೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
74 ಕೋಟಿ ರೂ.ಬಡ್ಡಿ: ಒಟ್ಟು 220 ಕೋಟಿ ರೂ. ಬಾಕಿಯಲ್ಲಿ 146 ಕೋಟಿ ರೂ. ನೀರಿನ ಮೂಲ ತೆರಿಗೆಯಾಗಿದ್ದು ಇನ್ನುಳಿದ 74 ಕೋಟಿ ರೂ. ಬಾಕಿ ಮೇಲೆ ವಿಧಿಸಿರುವ ಬಡ್ಡಿಯಾಗಿದೆ. ಗೃಹ ಬಳಕೆದಾರರ ಸುಮಾರು 108 ಕೋಟಿ ರೂ. ಬಾಕಿಯ ಮೇಲಿನ ಬಡ್ಡಿ ಮನ್ನಾ ಮಾಡುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

110 ಎಂಎಲ್‍ಡಿ ಲೆಕ್ಕವಿಲ್ಲ: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1,80,000 ನೀರಿನ ಸಂಪರ್ಕ ಇವೆ. ಇದರಲ್ಲಿ 40,000 ಅನಧಿಕೃತ ಸಂಪರ್ಕವಾಗಿದ್ದು, 12,000 ದೋಷಪೂರಿತ ಮೀಟರ್ ಪತ್ತೆಯಾಗಿವೆ. ಇದರಿಂದ ನೀರಿನ ಸೋರಿಕೆ ಜೊತೆಗೆ ಪಾಲಿಕೆ ಆದಾಯಕ್ಕೂ ಖೋತಾ ಆಗಿ ನಗರ ನಿರ್ವಹಣೆಗೆ ಸಮಸ್ಯೆಯಾಗಿದೆ. ನಿತ್ಯ 270 ಮಿಲಿಯನ್ ಲೀಟರ್(ಎಂಎಲ್‍ಡಿ) ನೀರು ಮೈಸೂರು ನಗರಕ್ಕೆ ಸರಬರಾಜಾಗುತ್ತಿದ್ದು, ಅದರಲ್ಲಿ 160 ಮಿಲಿಯನ್ ಲೀಟರ್ ಲೆಕ್ಕ ಮಾತ್ರ ಸಿಗುತ್ತಿದೆ. ಉಳಿದ ನೀರು ಅನಧಿಕೃತವಾಗಿ ಬಳಸಲಾಗುತ್ತಿದೆ. ನೀರನ್ನು ಮಿತವಾಗಿ ಬಳಸುವುದರ ಜೊತೆಗೆ ಸರಿಯಾಗಿ ತೆರಿಗೆ ಪಾವತಿಸಿದರೆ ಮಾತ್ರ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಮೈಸೂರು ಮಹಾನಗರ ಪಾಲಿಕೆಗೆ ಸಾಧ್ಯವಾಗುತ್ತದೆ ಎಂದು ಮೇಯರ್ ಶಿವಕುಮಾರ್ ಮತ್ತು ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

Translate »