ಈ ಮಾಸಾಂತ್ಯಕ್ಕೆ ಹಿಂದುಳಿದ ಸಮುದಾಯಗಳ ವಿಶೇಷ ಅಧಿವೇಶನ
ಮೈಸೂರು

ಈ ಮಾಸಾಂತ್ಯಕ್ಕೆ ಹಿಂದುಳಿದ ಸಮುದಾಯಗಳ ವಿಶೇಷ ಅಧಿವೇಶನ

December 6, 2022

ಮೈಸೂರು,ಡಿ.5(ಎಂಟಿವೈ)- ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಡಿಸೆಂಬರ್ ಅಂತ್ಯದ ವೇಳೆಗೆ ಹಿಂದುಳಿದ ಸಮುದಾಯಗಳ ವಿಶೇಷ ಅಧಿವೇಶನ ನಡೆಸಲು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶೋಷಿತ ಸಮುದಾಯಗಳ ಹಿತಕಾಯಲು ಶ್ರಮಿಸುತ್ತಿರುವ `ರಾಜಕೀಯ ಶಕ್ತಿ’ ಬೆಂಬಲಿಸಲು ಹಿಂದುಳಿದ ಸಮುದಾಯಗಳ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಸಭಾಂಗ ಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತಾ ಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ `ಹಿಂದು ಳಿದ ವರ್ಗಗಳ ದುಂಡು ಮೇಜಿನ ಸಭೆ’ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಂಡಿತು.

ಸಭೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಮೇಲ್ವರ್ಗದ ದಬ್ಬಾಳಿಕೆಯಿಂದಾಗಿ ಶೋಷಿತ ಸಮುದಾಯಗಳು ಶತಮಾನಗಳಿಂದಲೂ ದೌರ್ಜನ್ಯಕ್ಕೆ ತುತ್ತಾಗಿವೆ. ಸಮಾಜದ ಎಲ್ಲಾ ಕ್ಷೇತ್ರ ಗಳಲ್ಲೂ ಶೋಷಿತ ಸಮುದಾಯಗಳು ತೊಂದರೆ ಅನುಭವಿಸಿವೆ. ಇದನ್ನು ಮನಗಂಡು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ 1925ರಲ್ಲೇ ಶೋಷಿತ ಸಮುದಾಯಕ್ಕೆ ಶೇ.75ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದರು. ನಂತರ ಮಾಜಿ ಸಿಎಂ ದೇವರಾಜ ಅರಸ್ ಅವರ ಕಾಲದಲ್ಲಿ ಶೋಷಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಮುಂದುವರೆಸಲಾಯಿತು. ದೇವರಾಜ ಅರಸ್ ಅವರ ಕಾಲದಲ್ಲಿ ನಿಗದಿಯಾ ಗಿದ್ದ ಮೀಸಲಾತಿ ಪ್ರಮಾಣ ಇಂದಿಗೂ ಅಷ್ಟೇ ಇದೆ. ಅಂದಿನಿಂದ ಇಂದಿನವರೆಗೂ ಜನಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ ಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂವಿಧಾನದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡಿಲ್ಲ. ಆದರೂ, ಮೇಲ್ವರ್ಗದ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಜನಸಂಖ್ಯೆಯಲ್ಲಿ ಶೇ.3-4ರಷ್ಟು ಜನ ಇರುವ ಈ ವರ್ಗಕ್ಕೆ ಮೀಸಲಾತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶೇ.60ರಷ್ಟು ಇರುವ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶೇ.15ರಷ್ಟು ಮೀಸಲಾತಿ ನೀಡಲಾಗಿದೆ. 200ಕ್ಕೂ ಹೆಚ್ಚು ಜಾತಿ ಇರುವ ಈ ವರ್ಗಗಳಿಗೆ ಇದು ಸಾಲುವುದಿಲ್ಲ. ಈ ಹಿಂದೆಯೇ ಮಂಡಲ್ ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ. ಪ್ರವರ್ಗ 1ರ ಸಮುದಾಯಗಳಿಗೆ ನೀಡಿರುವ ಶೇ.4ರ ಮೀಸಲಾತಿ ಸೌಲಭ್ಯವನ್ನು ಶೇ.9ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರವರ್ಗ 2 `ಎ’ಗೆ ಪಂಚಮಸಾಲಿ ಸೇರಿಸಲು ವಿರೋಧ: ಪಂಚಮಸಾಲಿ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ಇದನ್ನು ಪ್ರವರ್ಗ 2`ಎ’ಗೆ ಸೇರಿಸುವಂತೆ ಕೇಳುವುದಕ್ಕೆ ನಮ್ಮ ವಿರೋಧವಿದೆ. ಆದರೆ, ಅವರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಗೆ ಹೋರಾಟ ನಡೆಸಿದರೆ ಅದಕ್ಕೆ ನಮ್ಮ ಸಹಮತವಿದೆ. ಪ್ರಭಾವಿ ಸಮುದಾಯಗಳು ಮೀಸಲಾತಿ ಕೇಳೋದು ಸಂವಿಧಾನದ ಆಶಯಕ್ಕೆ ಧಕ್ಕೆಯುಂಟು ಮಾಡುವಂತಿದೆ. ಹಿಂದುಳಿದ ವರ್ಗಗಳಲ್ಲಿ ಸಣ್ಣ ಪುಟ್ಟ ಸಮುದಾಯಗಳು ಇಂದಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗದೇ ಸಂಕಷ್ಟದ ಸ್ಥಿತಿಯಲ್ಲಿವೆ. ಇದುವರೆಗೆ ಗ್ರಾ.ಪಂ ಸದಸ್ಯರಾಗಿಯೂ ಆಯ್ಕೆಯಾಗಿಲ್ಲದ ಹಲವು ಸಮುದಾಯಗಳಿವೆ. ಪರಿಸ್ಥಿತಿ ಹೀಗಿದ್ದರೂ ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿಯನ್ನು ಪ್ರಭಾವಿ ಸಮುದಾಯಕ್ಕೆ ಹಂಚಿಕೆ ಮಾಡುವುದು ಸರಿಯಲ್ಲ. ಸವಿತ, ಮಡಿವಾಳ ಸಮುದಾಯಗಳು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಸಾಕಷ್ಟು ಹೋರಾಟ ಮಾಡುತ್ತಿವೆÉ. ಅದಕ್ಕೆ ಸಮಿತಿ ರಚಿಸಿ, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಅವಕಾಶ ಕಸಿಯುವ ಸಂಚು ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಮೀಸಲಾತಿ ರದ್ದುಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ಇದು ಆರ್‍ಎಸ್‍ಎಸ್s ಅಜೆಂಡಾವಾಗಿದ್ದು, ವರ್ಗ ಸಂಘರ್ಷ ಉಂಟು ಮಾಡಿ ಮೀಸಲಾತಿಯನ್ನೇ ರದ್ದು ಮಾಡಲು ಸದ್ದಿಲ್ಲದೆ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಶತಮಾನಗಳಿಂದಲೂ ಅಸಮಾನತೆ ಶೋಷಿತ ಸಮುದಾಯವನ್ನು ಕಾಡುತ್ತಿದೆ. ಇಂದಿಗೂ ಹಲವೆಡೆ ಶೋಷಿತ ಸಮುದಾಯ ದವರನ್ನು ದೇವಾಲಯಕ್ಕೆ ಸೇರಿಸುತ್ತಿಲ್ಲ. ಮಡೆಸ್ನಾನ, ಎಡೆಸ್ನಾನ, ಪಂಕ್ತಿಭೇದ ಮಾಡಲಾಗುತ್ತಿದೆ. ದಲಿತ ಮಹಿಳೆ ನೀರು ಕುಡಿದರೆ ತೊಂಬೆಯನ್ನು ಗಂಜಲ ಹಾಕಿ ಶುದ್ಧೀಕರಿಸಲಾಗಿದೆ. ಪಾನಿಪುರಿ ತಿಂದ ಕಾರಣಕ್ಕೆ ದಲಿತ ಯುವಕನನ್ನು ಕೊಲೆ ಮಾಡಲಾಗಿದೆ. ಗುಲಾಮಗಿರಿ ಪದ್ಧತಿ ಜಾರಿಗೊಳಿಸುವ ಸಂಚನ್ನು ಆರ್‍ಎಸ್‍ಎಸ್ ಬಯಸುತ್ತಿದೆ. ಎಸ್‍ಸಿ, ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಒಮ್ಮೆ ವಿದ್ಯಾರ್ಥಿನಿಲಯದ ಸೌಲಭ್ಯ ಪಡೆದವರಿಗೆ ಮತ್ತೊಂದು ಪದವಿ ಮಾಡಲು ಸೌಲಭ್ಯ ನಿರಾಕರಿಸುವ ಆದೇಶ ಮಾಡಲಾಗಿದೆ ಎಂದು ದೂರಿದರು.

ವಿಧಾನಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಗಟ್ಟಿಯಾಗಿ ಮಾತನಾಡುವ ಏಕೈಕ ವ್ಯಕ್ತಿ ಎಂದರೆ ಸಿದ್ದರಾಮಯ್ಯನವರೇ ಆಗಿದ್ದಾರೆ. ಎಲ್ಲೆಡೆ ಸಿದ್ದರಾಮಯ್ಯ ಅವರಿಗೆ ಜನಮನ್ನಣೆ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಶಕ್ತಿ ಕುಗ್ಗಿಸಿದರೆ ಅಹಿಂದ ಧ್ವನಿ ಕುಗ್ಗುತ್ತದೆ ಎಂದು ಭಾವಿಸಿ ಸಂಚು ನಡೆಸಲಾಗುತ್ತಿದೆ. ಇದನ್ನು ಹಿಂದುಳಿದ ವರ್ಗ, ಶೋಷಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಜಿ ಮೇಯರ್ ಅನಂತು ಮಾತನಾಡಿ, ಮಾರಕ ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದರೂ ಹಿಂದುಳಿದ ವರ್ಗಗಳನ್ನು ಸಮಾಧಾನ ಮಾಡಬಹುದು ಎಂದು ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರು ತಿಳಿದುಕೊಂಡಿದ್ದಾರೆ. ಈ ಮೂಲಕ ನಮ್ಮ ಹೋರಾಟಗಳನ್ನು ಸಾಯಿಸುತ್ತಿದ್ದಾರೆ. ಈ ಹಿಂದೆ ನಾನು ಕೂಡ ಆರ್‍ಎಸ್‍ಎಸ್‍ನಲ್ಲಿದ್ದೆ. ನಮ್ಮನ್ನು ಗಲಾಟೆಗೆ, ಕಲ್ಲು ತೂರಾಟಕ್ಕೆ ಪ್ರಚೋದಿಸುತ್ತಿದ್ದರು. ಇದರಿಂದ ಸಾಕಷ್ಟು ಕೇಸ್ ನಮ್ಮ ಮೇಲಿದೆ. ಹಿಂದುಳಿದ ವರ್ಗಗಳಲ್ಲಿ ಒಗ್ಗಟ್ಟಿಲ್ಲ. ಅದರ ಫಲ ಬಿಜೆಪಿಗೆ ಸಿಕ್ಕುತ್ತಿದೆ. ಹಿಂದುಳಿದ ವರ್ಗಗಳ ಏಕೈಕ ನಾಯಕ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಒಗ್ಗಟ್ಟು ತೋರಿಸಬೇಕು. 2023ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗದಿದ್ದರೆ ಇನ್ನು ಶೋಷಿತ ಸಮುದಾಯ ಶಾಶ್ವತವಾಗಿ ತಲೆತಗ್ಗಿಸಿಕೊಂಡು ಇರಬೇಕಾದ ದುಸ್ಥಿತಿ ಎದುರಾಗಲಿದೆ ಎಂದು ವಿಷಾದಿಸಿದರು.

ಪಾಲಿಕೆಯ ಮಾಜಿ ಸದಸ್ಯ ಡಿ.ನಾಗಭೂಷಣ್ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ಹೆಚ್ಚಳಕ್ಕೆ ಆಗ್ರಹಿಸಿ ಸಮಾವೇಶ ಮಾಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಅದನ್ನು ಬಿಜೆಪಿಯ ಹಿಂದುಳಿದ ವರ್ಗದ ನಾಯಕರೊಬ್ಬರು ತಡೆದರು. ಈಗ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಎಸ್‍ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಹಿಂದುಳಿದ ವರ್ಗ ಸಂಘಟಿತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ ಮಾತನಾಡಿ, ಈ ಹಿಂದೆ ಗೂಡ್ಸೆ, ಮಹಾತ್ಮ ಗಾಂಧೀಜಿ ಅವರ ಕಾಲಿಗೆ ಬಿದ್ದು, ನಂತರ ಮೇಲೆದ್ದು ಗುಂಡು ಹಾರಿಸಿದರು. ಈಗ ಪ್ರಧಾನಿ ಮೋದಿ ಸಂವಿಧಾನದ ಪ್ರತಿಗೆ ನಮಸ್ಕರಿಸಿ, ನಂತರ ಸಂವಿಧಾನದ ಆಶಯಕ್ಕೆ ಗುಂಡು ಹೊಡೆಯುತ್ತಿದ್ದಾರೆ. ಬಿಜೆಪಿಯೇತರರೂ ಯಾವುದೇ ಹುದ್ದೆಯಲ್ಲಿದ್ದರೂ ಬಿಜೆಪಿ ಸರ್ಕಾರದಲ್ಲಿ ಏನೂ ಅಲುಗಾಡಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಮಾತನಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ಯಾವುದೇ ಸಮುದಾಯಕ್ಕೆ ಅನ್ಯಾಯ, ದೌರ್ಜನ್ಯವಾದರೂ ಅದಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘ ಸ್ಪಂದಿಸಿ ನ್ಯಾಯ ಕೇಳುವ ಹೋರಾಟದಲ್ಲಿ ಭಾಗಿಯಾಗಲಿದೆ. ಪ್ರಸ್ತುತ ಸಂದರ್ಭದಲ್ಲಿ ಶೋಷಿತ ಸಮುದಾಯಗಳ ಸ್ಥಿತಿಗತಿಯನ್ನು ಅವಲೋಕಿಸಬೇಕು. ದೇಶದಲ್ಲಿ 8-9 ವರ್ಷದ ಹಿಂದೆ ಶೋಷಿತ ಸಮುದಾಯದ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ ಎಂದು ಅವಲೋಕಿಸಬೇಕು. ಹಿಂದುಳಿದ ವರ್ಗಗಳ ಹಿತ ಯಾರು ಕಾಪಾಡುತ್ತಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ಸ್ವಾಭಿಮಾನಿ ಬದುಕು ಹಾಗೂ ಗೌರವದಿಂದ ಬದುಕಲು ಯಾವ ಪಕ್ಷ ಕಾರ್ಯಕ್ರಮ ರೂಪಿಸುತ್ತದೆ ಎಂದು ಅರಿತುಕೊಳ್ಳಬೇಕು. 2023ರ ಚುನಾವಣೆ ಹಿಂದುಳಿದ ವರ್ಗ, ಶೋಷಿತ ಸಮುದಾಯಕ್ಕೆ ಅಗ್ನಿಪರೀಕ್ಷೆ. ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿರುವವರಿಗೆ ತಕ್ಕ ಉತ್ತರ ನೀಡಲು ಮುಂದಿನ ಚುನಾವಣೆ ಉತ್ತಮ ವೇದಿಕೆಯಾಗಿದೆ. ಪಕ್ಷಭೇದ ಮರೆತು ಹಿಂದುಳಿದ ವರ್ಗ ಮತ್ತು ಶೋಷಿತ ಸಮುದಾಯದ ಹಿತಕಾಯಲು ಬದ್ಧವಾಗಿರುವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರಾದ ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಶ್ರೀನಿವಾಸ್, ಸಂದೇಶ್, ಛಾಯಾ, ಮಹೇಂದ್ರ ಕಾಗಿನೆಲೆ, ಎಸ್.ಆರ್.ರವಿ, ಎನ್.ಆರ್.ನಾಗೇಶ್, ಯೋಗೇಶ್ ಉಪ್ಪಾರ್, ಹೆಚ್.ಎಸ್.ಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »