ಗ್ರಾಮಕ್ಕೆ ದಿಢೀರ್ ನುಗ್ಗಿದ ಕಾಡಾನೆಗೆ ರೈತ ಮಹಿಳೆ ಬಲಿ
ಮೈಸೂರು

ಗ್ರಾಮಕ್ಕೆ ದಿಢೀರ್ ನುಗ್ಗಿದ ಕಾಡಾನೆಗೆ ರೈತ ಮಹಿಳೆ ಬಲಿ

December 31, 2022

ಬಿಳಿಕೆರೆ (ಹುಣಸೂರು ತಾಲೂಕು), ಡಿ. 30(ಎಂಟಿವೈ)- ಶುಕ್ರವಾರ ಬೆಳ್ಳಂಬೆಳಗ್ಗೆ ಹುಣಸೂರು ತಾಲೂಕು ಬಿಳಿಕೆರೆ ಬಳಿಯ ಚಿಕ್ಕಬೀಚನಹಳ್ಳಿ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ರೈತ ಮಹಿಳೆ ಯನ್ನು ಕೊಂದು, ಇಬ್ಬರು ಯುವಕರನ್ನು ಗಾಯಗೊಳಿಸುವ ಮೂಲಕ ಪುಂಡಾಟ ಮೆರೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪುಂಡಾನೆಯನ್ನು ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ. ಚಿಕ್ಕಬೀಚನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವರ ಪತ್ನಿ ಚಿಕ್ಕಮ್ಮ(55) ಕಾಡಾನೆ ದಾಳಿಯಿಂದ ಮೃತಪಟ್ಟವರಾಗಿದ್ದು, ಬಿಳಿಕೆರೆ ಗ್ರಾಮದ ರವಿ ಮತ್ತು ದೊಡ್ಡಬೀಚನ ಹಳ್ಳಿಯ ರಂಜನ್ ಅಲಿಯಾಸ್ ರಂಜು ಕಾಡಾನೆ ದಾಳಿಗೆ ತೀವ್ರ ವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿವರ: ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಚಿಕ್ಕಬೀಚನಹಳ್ಳಿ ಗ್ರಾಮದ ಹೊರವಲಯದ ರಸ್ತೆಯಲ್ಲಿ ಹುರುಳಿಸತ್ತೆಯನ್ನು ಒಕ್ಕಣೆ ಮಾಡಲು ಸಿದ್ದೇಗೌಡ ಮತ್ತು ಅವರ ಪತ್ನಿ ರಸ್ತೆಯಲ್ಲಿ ಹಾಸುತ್ತಿ ದ್ದಾಗ ಪೊದೆಯ ಮರೆಯಿಂದ ಒಂಟಿಸಲಗ ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ಸಿದ್ದೇಗೌಡರು ಎದ್ದು
ಓಡಿಹೋಗಿ ಪಾರಾದರೆ, ಕುಳಿತು ಹುರುಳಿಸತ್ತೆ ಹಾಸುತ್ತಿದ್ದ ಚಿಕ್ಕಮ್ಮ ಅವರಿಗೆ ತಕ್ಷಣಕ್ಕೆ ಮೇಲೇಳಲು ಸಾಧ್ಯವಾಗಿಲ್ಲ. ಆಗ ಅವರ ಮೇಲೆ ದಾಳಿ ನಡೆಸಿದ ಸಲಗ ಅವರನ್ನು ಸೊಂಡಲಿನಿಂದ ಎತ್ತಿ ಬಿಸಾಕಿ ಕೊಂದಿದೆ. ನಂತರ ದೊಡ್ಡಬೀಚನಹಳ್ಳಿ-ಬಿಳಿಕೆರೆ ರಸ್ತೆಯಲ್ಲಿ ಸಾಗಿದ ಸಲಗ, ಬಿಳಿಕೆರೆಯಿಂದ ಎಲಚವಾಡಿಗೆ ಹೋಗುತ್ತಿದ್ದ ರವಿ ಎಂಬ ಯುವಕನ ಮೇಲೆ ದಾಳಿ ನಡೆಸಿದೆ. ಕೆಲ ದೂರ ಹೋದ ನಂತರ ರಸ್ತೆಯಲ್ಲಿ ಫೋಟೋ ತೆಗೆಯುತ್ತಿದ್ದ ದೊಡ್ಡಬೀಚನಹಳ್ಳಿ ಗ್ರಾಮದ ರಂಜನ್ ಅಲಿಯಾಸ್ ರಂಜು ಎಂಬ ಯುವಕನನ್ನು ಸೊಂಡಿಲಿನಿಂದ ಸೆಳೆದು ಎಸೆದಿದೆ. ರಂಜನ್‍ಗೆ ಕೈ ಮೂಳೆ ಮುರಿದಿದ್ದು, ರವಿ ಸ್ಥಿತಿ ಗಂಭೀರವಾಗಿದೆ. ಇಬ್ಬರೂ ಯುವಕರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಸ್ತೆಗೆ ಬಾರದಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಒಂಟಿಸಲಗವನ್ನು ಕಾಡಿಗೆ ಅಟ್ಟಿ, ಅದರ ಚಲನವಲನಗಳ ಬಗ್ಗೆ ನಿಗಾ ವಹಿಸುತ್ತಾ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದೆ. ಹುಣಸೂರು ಉಪವಿಭಾಗ ಹಾಗೂ ಮೈಸೂರು ವಿಭಾಗದ ನುರಿತ ಸಿಬ್ಬಂದಿ, ಪಶುವೈದ್ಯರುಗಳಾದ ಡಾ. ರಮೇಶ್, ಡಾ. ಮುಜೀಬ್, ಡಾ. ವಾಸೀಂ ಮಿರ್ಜಾ, ಗುರಿಕಾರ ಅಕ್ರಂ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈ ಭಾಗದಲ್ಲಿ ನಿಯೋಜಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳಾದ ಅಭಿಮನ್ಯು, ಭೀಮಾ, ಮಹೇಂದ್ರ, ಪ್ರಶಾಂತ್ ಹಾಗೂ ಗಣೇಶನನ್ನು ಕರೆಸಿಕೊಂಡು ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.

ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಅಭಿಮನ್ಯು ಮೇಲೆ ಕುಳಿತಿದ್ದ ಗುರಿಕಾರ ಅಕ್ರಂ ಪುಂಡಾನೆಗೆ ಅರವಳಿಕೆ ಮದ್ದನ್ನು ಡಾಟ್ ಮಾಡಿದರಾದರೂ ಸುಮಾರು ಒಂದು ಗಂಟೆ ಕಾಲ ಈ ಸಲಗ ಕಾಡಿನಲ್ಲಿ ಓಡಾಡುತ್ತಲೇ ಇತ್ತು. 1.30ರ ಸುಮಾರಿಗೆ ಮಂಪರಿನಿಂದ ನೆಲಕ್ಕೆ ಒರಗಿದ ಒಂಟಿ ಸಲಗವನ್ನು ಸಾಕಾನೆ ಸಹಕಾರದಿಂದ ಲಾರಿಗೆ ಹತ್ತಿಸಿ ದುಬಾರೆ ಶಿಬಿರಕ್ಕೆ ಕೊಂಡೊಯ್ಯಲಾಯಿತು. ಕಾಡಾನೆ ದಾಳಿಯಿಂದ ಮೃತಪಟ್ಟ ಚಿಕ್ಕಮ್ಮ ದೇಹವನ್ನು ಬಿಳಿಕೆರೆ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹವನ್ನು ವಾರಸುದಾರರಿಗೆ ನೀಡಲಾಯಿತು. ಮೈಸೂರು ವೃತ್ತದ ಸಿಎಫ್ ಡಾ. ಮಾಲತಿ ಪ್ರಿಯಾ ಅವರು ಚಿಕ್ಕಮ್ಮ ವಾರಸುದಾರರಿಗೆ 2.50 ಲಕ್ಷ ರೂ. ತಾತ್ಕಾಲಿಕ ಪರಿಹಾರದ ಚೆಕ್ ಅನ್ನು ನೀಡಿ, ಇನ್ನುಳಿದ ಮೊತ್ತವನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಲ್ಲದೇ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಸಂಜೆ ವೇಳೆಗೆ ಚಿಕ್ಕಮ್ಮ ಅಂತ್ಯಕ್ರಿಯೆಯನ್ನು ಅವರ ಜಮೀನಿನಲ್ಲಿ ನೆರವೇರಿಸಲಾಯಿತು.
ಜಿಟಿಡಿ ಸಾಂತ್ವನ: ವಿಷಯ ತಿಳಿಯುತ್ತಿದ್ದಂತೆಯೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಧಾವಿಸಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರವಿ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ನಂತರ ಬಿಳಿಕೆರೆ ಆಸ್ಪತ್ರೆಗೆ ತೆರಳಿದ ಅವರು, ಆನೆ ದಾಳಿಯಿಂದ ಮೃತಪಟ್ಟ ಚಿಕ್ಕಮ್ಮ ಅವರ ಅಂತಿಮ ದರ್ಶನ ಪಡೆದು, ಪತಿ ಸಿದ್ದೇಗೌಡರಿಗೆ ಸಾಂತ್ವನ ಹೇಳಿದರು. ಜೊತೆಗೆ ಜಿ.ಟಿ. ದೇವೇಗೌಡರು ಚಿಕ್ಕಬೀಚನಹಳ್ಳಿ ಗ್ರಾಮಕ್ಕೆ ತೆರಳಿ ಕಾಡಾನೆ ಸೆರೆ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇಂದು ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಿಎಫ್ ಡಾ. ಮಾಲತಿ ಪ್ರಿಯಾ, ಹುಣಸೂರು ವಿಭಾಗದ ಡಿಸಿಎಫ್ ಹಾಗೂ ಎಲಿಫೆಂಟ್ ಟಾಸ್ಕ್‍ಫೋರ್ಸ್ ಇನ್‍ಚಾರ್ಜ್ ಪಿ.ಎ. ಸೀಮಾ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Translate »