ಬೆಸ್ಕಾಂ, ಮೆಸ್ಕಾಂ ವ್ಯಾಪ್ತಿ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 35 ರಿಂದ 37 ಪೈಸೆ ವಿದ್ಯುತ್ ದರ ಕಡಿತ
News

ಬೆಸ್ಕಾಂ, ಮೆಸ್ಕಾಂ ವ್ಯಾಪ್ತಿ ಗ್ರಾಹಕರಿಗೆ ಪ್ರತಿ ಯೂನಿಟ್‍ಗೆ 35 ರಿಂದ 37 ಪೈಸೆ ವಿದ್ಯುತ್ ದರ ಕಡಿತ

December 31, 2022

ಬೆಂಗಳೂರು, ಡಿ.30(ಕೆಎಂಶಿ)- ಪ್ರತಿ ಯೂನಿಟ್‍ಗೆ 35 ರಿಂದ 37 ಪೈಸೆ ವಿದ್ಯುತ್ ದರ ಇಳಿಕೆ ಮಾಡಿರುವ ಸರ್ಕಾರ, ಇಳಿಕೆಯಲ್ಲೂ ರಾಜ್ಯದ ತನ್ನ ಗ್ರಾಹಕರಿಗೆ ತಾರತಮ್ಯ ಮಾಡಿದೆ.

ಬೆಂಗಳೂರು ಹಾಗೂ ಮಂಗಳೂರು ವಿದ್ಯುತ್ ಪ್ರಸರಣ ಕಂಪನಿ ಅಡಿಯಲ್ಲಿ ಬರುವ ಗ್ರಾಹಕ ರಿಗೆ ಮಾತ್ರ ದರ ಕಡಿತ ಅನ್ವಯವಾಗಲಿದೆ ಎಂದು ಇಂಧನ ಖಾತೆ ಸಚಿವ ಸುನಿಲ್‍ಕುಮಾರ್ ಟ್ವೀಟ್ ಮಾಡಿದ್ದಾರೆ. ಚಾಮುಂಡೇಶ್ವರಿ (ಮೈಸೂರು) ಹುಬ್ಬಳ್ಳಿ-ಧಾರವಾಡ (ಹೆಸ್ಕಾಂ) ಕಲಬುರಗಿ (ಜೆಸ್ಕಾಂ) ಪ್ರಸರಣ ಕಂಪನಿ ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಇದರ ಲಾಭ ಇರುವುದಿಲ್ಲ. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಯುನಿಟ್‍ಗೆ ಒಂದು ರೂ.ನಿಂದ ಎರಡು ರೂ ವರೆಗೆ ದರ ಇಳಿಕೆ ಮಾಡುವ ನಿರ್ಧಾರವನ್ನು ಹಿಂದೆ ಸಚಿವರು ತೆಗೆದುಕೊಂಡಿದ್ದರು. ಹೊಸ ವರ್ಷಕ್ಕೆ ಉಡುಗೊರೆ ಯಾಗಿ ತಮ್ಮ ಇಳಿಕೆಯ ನಿರ್ಧಾರವನ್ನು ಪ್ರಕಟಿಸಬೇಕೆಂಬ ತೀರ್ಮಾನ ಕೈಗೊಂಡಿ ದ್ದರು. ಆದರೆ ಸದ್ಯಕ್ಕೆ ಈ ಎರಡೂ ಕಂಪನಿಗಳ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ರಾಜ್ಯದ ಎಲ್ಲಾ ಗ್ರಾಹಕರಿಗೂ ಪ್ರತಿ ಯುನಿಟ್‍ಗೆ ಒಂದು ರೂ. ದರ ಇಳಿಸುವ ತೀರ್ಮಾನ ಕೈಗೊಂಡಿದ್ದು, ಅದು ಯಾವುದೇ ಸಂದರ್ಭದಲ್ಲಿ ಹೊರ ಬೀಳಲಿದೆಯಂತೆ.

ಬೆಸ್ಕಾಂ, ಮೆಸ್ಕಾಂ ಕಂಪನಿಗಳು ಲಾಭದಾಯಕವಾಗಿ ನಷ್ಟದಿಂದ ದೂರ ಸರಿದಿವೆ. ಉಳಿದ ಮೂರು ಕಂಪನಿಗಳು ನಷ್ಟದಲ್ಲೇ ಮುಂದುವರೆದಿರುವುದರಿಂದ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡಲಾಗಿಲ್ಲ ಎಂದು ಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಿರುವ ತಾರತಮ್ಯವನ್ನು ಕೆಲವೇ ದಿನಗಳಲ್ಲಿ ಸರಿಪಡಿಸುವುದಾಗಿ ಹೇಳಿಕೊಂಡಿ ದ್ದರೂ, ಐದು ಕಂಪನಿಗಳು ಮಾತ್ರ ತಮಗಾಗುತ್ತಿರುವ ನಷ್ಟವನ್ನು ಭರಿಸಲು ಪ್ರತಿ ಯುನಿಟ್‍ಗೆ 1 ರೂ. 47 ಪೈಸೆ ಹೆಚ್ಚಳ ಮಾಡುವಂತೆ ಕೆಇಆರ್‍ಸಿಗೆ ಮನವಿ ಮಾಡಿಕೊಂಡಿವೆ.

ಕಳೆದ ಒಂದು ವರ್ಷದಲ್ಲಿ ಪ್ರತಿ ಯುನಿಟ್‍ಗೆ ಎರಡು ರೂ. ದರ ಹೆಚ್ಚಳ ಮಾಡಿರುವ ಕಂಪನಿಗಳು ಮತ್ತೆ ಒಂದು ರೂ. 47 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ಗ್ರಾಹಕರ ಬೇಡಿಕೆಗಿಂತ ಶೇಕಡ 50ರಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ರಾಜ್ಯದಲ್ಲಾಗುತ್ತಿದ್ದರೂ, ಸರ್ಕಾರ ವಿದ್ಯುತ್ ದರವನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

Translate »