ಇಂದು ಮಂಡ್ಯಕ್ಕೆ ಅಮಿತ್ ಶಾ ಎಂಟ್ರಿ
News

ಇಂದು ಮಂಡ್ಯಕ್ಕೆ ಅಮಿತ್ ಶಾ ಎಂಟ್ರಿ

December 30, 2022

ಬೆಂಗಳೂರು, ಡಿ.29(ಕೆಎಂಶಿ)- ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಹಳೇ ಮೈಸೂರು ಭಾಗದಲ್ಲಿ 35 ಸ್ಥಾನ ಗೆಲ್ಲಲೇಬೇ ಕೆಂಬ ಗುರಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಶುಕ್ರವಾರ) ಮಂಡ್ಯ ಜಿಲ್ಲೆ ಪ್ರವೇಶ ಮಾಡುತ್ತಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ಹಳೇ ಮೈಸೂರು ಭಾಗದ 96 ಕ್ಷೇತ್ರಗಳಲ್ಲಿ ಕನಿಷ್ಠ 55 ಸ್ಥಾನಗಳನ್ನು ಗೆಲ್ಲಲೇಬೇಕು. ಈ ಭಾಗದಲ್ಲಿ ಇಷ್ಟು ಸ್ಥಾನಗಳನ್ನು ಗೆದ್ದರೆ ಮಾತ್ರ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಚುನಾವಣಾ ಪೂರ್ವ ಸಮೀಕ್ಷೆ ವರದಿ ಗಳನ್ನು ಆಧಾರ ವಾಗಿಟ್ಟುಕೊಂಡು ಬಿಜೆಪಿ ವರಿಷ್ಠರು ಈ ಭಾಗದಲ್ಲಿ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಕಳೆದ 2 ಚುನಾವಣೆ ಗಳಲ್ಲೂ 30-35ರವರೆಗೆ ಮಾತ್ರ ಸ್ಥಾನಗಳನ್ನು ಈ ಭಾಗದಲ್ಲಿ ಬಿಜೆಪಿ ಗೆದ್ದಿದೆ. ಶೇ.60ರಷ್ಟು ಸೀಟು ಗಳನ್ನು ಪಕ್ಷ ಗೆಲ್ಲದಿದ್ದರಿಂದ ಎರಡು ಬಾರಿಯು ಬಹುಮತದಿಂದ ಅಧಿಕಾರ ಪಡೆಯಲು ಸಾಧ್ಯವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಅಮಿತ್ ಶಾ ಹಳೇ ಮೈಸೂರು ಭಾಗದಲ್ಲಿ ಧೂಳೆಬ್ಬಿಸಲು ನಾಳೆ ಮಂಡ್ಯಕ್ಕೆ ಕಾಲಿಡುತ್ತಿದ್ದಾರೆ. ಅಮಿತ್ ಶಾ ದೆಹಲಿಗೆ ಹಿಂತಿರುಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲ ಹಂತದ ರ್ಯಾಲಿ ನಡೆಸಲಿದ್ದಾರೆ. ಅಮಿತ್ ಷಾ ನಾಳೆ ಸಹಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಮಂಡ್ಯ ನಗರದಲ್ಲಿ ಬೃಹತ್ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಎರಡು ದಿನಗಳ ಕಾಲ ಬೆಂಗಳೂರಲ್ಲೇ ಬಿಡಾರ ಹೂಡಿ, ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ತಂತ್ರಗಾರಿಕೆಯ ಬಗ್ಗೆ ರಾಜ್ಯ ಮುಖಂಡರೊಟ್ಟಿಗೆ ನಿರಂತರ ಸಭೆಗಳನ್ನು ನಡೆಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ 28 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆದ್ದಿದ್ದರೆ ಉಳಿದ 68 ಸ್ಥಾನಗಳಲ್ಲಿ ಕೇವಲ 15 ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಿತ್ತು.

ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ಇದುವರೆಗೂ ಖಾತೆಗಳನ್ನೇ ತೆರೆದಿಲ್ಲ. ಅಂತಹ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಅನ್ಯ ಪಕ್ಷಗಳಲ್ಲಿ ಪ್ರಬಲರಾಗಿರುವವರನ್ನು ಸೆಳೆದುಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಕಳೆದ ಸೋಮವಾರ ಮುಖ್ಯಮಂತ್ರಿಯವರನ್ನು ದೆಹಲಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದ ಸಂದರ್ಭದಲ್ಲೂ ಈ ಭಾಗಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆಸಿದ್ದಾರೆ. ಹಳೇ ಮೈಸೂರಿನ ಕೆಲವು ಕ್ಷೇತ್ರಗಳಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇದನ್ನು ಹೊರತುಪಡಿಸಿದರೆ, ಏಳು ಕ್ಷೇತ್ರಗಳಲ್ಲಿ ಸಮಸ್ಯೆ ಎದುರಾಗಿದೆ. ಇದೆಲ್ಲವನ್ನೂ ತಮ್ಮ ರಾಜ್ಯ ಭೇಟಿ ಸಂದರ್ಭದಲ್ಲಿ ಖುದ್ದು ಬಗೆಹರಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 110 ಸ್ಥಾನ ಮತ್ತು 2018ರಲ್ಲಿ 104 ಸ್ಥಾನಗಳನ್ನು ಗಳಿಸುವಷ್ಟಕ್ಕೆ ಪಕ್ಷ ಸುಸ್ತಾಗಿದ್ದರೆ, ಅದಕ್ಕೆ ಹಳೇ ಮೈಸೂರು ಭಾಗದಲ್ಲಿ ಕಾಣುತ್ತಿರುವ ಸತತ ವೈಫಲ್ಯವೇ ಕಾರಣ.

ಕಳೆದ ಬಾರಿ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಸುಮಾರು ಹದಿನೈದು ಸೀಟುಗಳ ಗಡಿ ತಲುಪಿದ್ದ ಬಿಜೆಪಿ, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೆ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತಿತ್ತು. 2008ರ ಅನುಭವದಿಂದ ನಾವು ಪಾಠ ಕಲಿಯದೇ ಹೋಗಿದ್ದೇ 2018ರ ವೈಫಲ್ಯಕ್ಕೂ ಕಾರಣ. ಆದರೆ 2023ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಈ ವೈಫಲ್ಯಗಳನ್ನು ಸರಿಪಡಿಸಿಕೊಂಡು ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬೆಂಗಳೂರು ಜಿಲ್ಲೆ ಹೊರತುಪಡಿಸಿ, 35 ಸೀಟುಗಳನ್ನು ಗೆಲ್ಲಲೇಬೇಕು ಎಂಬುದು ಅಮಿತ್ ಷಾ ಅವರ ಲೆಕ್ಕಾಚಾರ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪೈಕಿ ಎರಡು-ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಕಡೆ ಬಿಜೆಪಿಯ ಶಕ್ತಿ ಗಣನೀಯವಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ಜೆಡಿಎಸ್ ನಂಬರ್ ಒನ್ ಆಗಿ ಹೊರಹೊಮ್ಮುತ್ತಿದ್ದರೆ, ಕಾಂಗ್ರೆಸ್ ನಂಬರ್ ಟೂ ಆಗಿ ಹೊರಹೊಮ್ಮುತ್ತಿದೆ. ಆದರೆ ಈ ಭಾಗದಲ್ಲಿ ಬಿಜೆಪಿ ಸದಾಕಾಲ ಮೂರನೇ ಸ್ಥಾನದಲ್ಲಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲೇ ಷಾ ನಾಳೆ ಮಂಡ್ಯ ಪ್ರವೇಶಿಸಲಿದ್ದಾರೆ.

Translate »