ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂಬರೀಷ್ ಪುತ್ರ ಅಭಿಷೇಕ್‍ಗೌಡ ಕಣಕ್ಕಿಳಿಸಲು ಸಿದ್ದರಾಮಯ್ಯ ತಂತ್ರಗಾರಿಕೆ
News

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂಬರೀಷ್ ಪುತ್ರ ಅಭಿಷೇಕ್‍ಗೌಡ ಕಣಕ್ಕಿಳಿಸಲು ಸಿದ್ದರಾಮಯ್ಯ ತಂತ್ರಗಾರಿಕೆ

December 30, 2022

ಬೆಂಗಳೂರು, ಡಿ.29(ಕೆಎಂಶಿ)- ಮೈಸೂರಿನ ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಟಿ.ದೇವೇ ಗೌಡರ ಮುಂದೆ ದಿ. ನಟ ಅಂಬರೀಷ್ ಅವರ ಪುತ್ರ ಅಭಿಷೇಕ್‍ಗೌಡ ಅವರನ್ನು ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಸಲು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ಮುಂದಾಗಿದ್ದಾರೆ. ಈ ಸಂಬಂಧ ಮಂಡ್ಯ ಸಂಸದೆ ಹಾಗೂ ಅಭಿಷೇಕ್‍ಗೌಡರ ತಾಯಿ ಸುಮಲತಾ ಅಂಬರೀಷ್ ಅವ ರೊಟ್ಟಿಗೆ ಚರ್ಚೆ ಮಾಡಿದ್ದಾರೆ ಎಂದು ಹೇಳ ಲಾಗಿದೆ. ಆದರೆ ಸುಮಲತಾ ಅವರು ಪುತ್ರನನ್ನು ಚಾಮುಂಡೇಶ್ವರಿಯಲ್ಲಿ ಕಣಕ್ಕಿಳಿಸುವ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಲು ಮುಂದಾಗಿ ಕೊನೆ ಹಂತದಲ್ಲಿ ಹಿಂದೆ ಸರಿದ ಜಿ.ಟಿ.ದೇವೇಗೌಡರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿ, ತಮ್ಮ ಸೇಡನ್ನು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಚುನಾವಣೆಯಲ್ಲಿ ಗೌಡರನ್ನು ಸೋಲಿಸಲು ಈ ಮೊದಲು ನಾಯಕ ಸಮುದಾಯಕ್ಕೆ ಸೇರಿದ ಚಿತ್ರನಟ ಶಶಿಕುಮಾರ್ ಅವರ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಆದರೆ ಅವರು ಬಿಜೆಪಿ ಸೇರ್ಪಡೆಗೊಂಡರು. ಇದಾದ ನಂತರ ಅಭಿಷೇಕ್ ಅವರನ್ನು ಕಣಕ್ಕಿಳಿಸಿದರೆ ಒಕ್ಕಲಿಗ ಮತಗಳನ್ನು ವಿಭಜಿಸಿ, ಹಿಂದುಳಿದ ವರ್ಗದ ಮತಗಳ ಸಹಕಾರದಿಂದ ಜಿ.ಟಿ.ದೇವೇ ಗೌಡರನ್ನು ಮಣಿಸಬಹುದೆಂಬುದು ಸಿದ್ದು ಲೆಕ್ಕಾಚಾರವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು,ಅವರ ಗೆಲುವಿನಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಗಣನೀಯವಾಗಿರುವುದು ರಹಸ್ಯವಲ್ಲ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ತೆರೆಯ ಹಿಂದೆ ಸಹಕಾರ ನೀಡಿದ್ದವಾದರೂ ಇದರಲ್ಲಿ ಕಾಂಗ್ರೆಸ್ ಪಾಲು ದೊಡ್ಡದು. ಈ ಹಿನ್ನೆಲೆಯಲ್ಲಿಯೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಣಕ್ಕೆ ಅಭಿಷೇಕ್‍ಗೌಡರನ್ನು ಕಣಕ್ಕಿಳಿಸಿದರೆ ಹಲವು ದೃಷ್ಟಿಗಳಿಂದ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

Translate »