ಆದಿವಾಸಿ ಯುವಕನ ಬಲಿ ಪಡೆದಿದ್ದ ಹೆಣ್ಣು ಹುಲಿ ಯಶಸ್ವಿ ಸೆರೆ
ಕೊಡಗು

ಆದಿವಾಸಿ ಯುವಕನ ಬಲಿ ಪಡೆದಿದ್ದ ಹೆಣ್ಣು ಹುಲಿ ಯಶಸ್ವಿ ಸೆರೆ

February 15, 2023

ಬಳ್ಳೆ ಹಾಡಿ,ಫೆ.14(ಎಂಟಿವೈ)- ಹೆಚ್.ಡಿ.ಕೋಟೆಯ ಬಳ್ಳೆ ಹಾಡಿ ಸಮೀಪ ಆದಿವಾಸಿ ಯುವಕನ ಬಲಿ ಪಡೆದಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ಸೆರೆ ಹಿಡಿದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಗಾಯಗೊಂಡ ಹುಲಿ ಓಡಾಡುತ್ತಿರುವುದನ್ನು ಗಮನಿಸಿದ್ದ ಅರಣ್ಯ ಸಿಬ್ಬಂದಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಫೆ.13ರಂದು ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿತ್ತು. ಆ ವೇಳೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿದ್ದ ಹುಲಿಯನ್ನು ಗಮನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಇಂದು ಬೆಳಗ್ಗೆ ಸಾಕಾನೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಬೆಳಗ್ಗೆ 11.20ರಲ್ಲಿ ಪೊದೆಯೊಂದರಲ್ಲಿ ಅಡಗಿದ್ದ ಹುಲಿಗೆ ಪಶುವೈದ್ಯ ಡಾ.ರಮೇಶ್ ಅರವಳಿಕೆ ಮದ್ದು ಡಾಟ್ ಮಾಡಿದ್ದಾರೆ. ಪ್ರಜ್ಞೆ ತಪ್ಪಿದ ಕೂಡಲೇ ಬಲೆ ಬಳಸಿ ಪೊದೆಯಿಂದ ಹೊರ ತಂದು ಬಳಿಕ ಬೋನಿನಲ್ಲಿಟ್ಟು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇದು ಹೆಣ್ಣು ಹುಲಿಯಾಗಿದ್ದು, 8 ರಿಂದ 9 ವರ್ಷದ್ದು. ಹುಲಿಯ ಬಲ ಮುಂಗಾಲು, ಪಾದ, ಮೈ ಮೇಲೆ ಗಾಯವಾಗಿದೆ. ಅಲ್ಲದೆ, ಒಂದು ಕೋರೆ ಹಲ್ಲು ಮುರಿದಿದೆ. ಬೇರೊಂದು ಹುಲಿಯೊಂದಿಗೆ ಕಾದಾಟ ನಡೆಸಿ ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಹುಲಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಅದನ್ನು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ತಂದು, ಸಂಜೆ ಚಿಕಿತ್ಸೆ ಆರಂಭಿಸಲಾಗಿದೆ.

ಯುವಕನ ಮೇಲೆ ದಾಳಿ ನಡೆಸಿದ್ದ ಹುಲಿಯೇ: ಫೆ.22ರಂದು ನಾಗರಹೊಳೆಯ ಡಿ.ಬಿ.ಕುಪ್ಪೆ ವಲಯ ಕಚೇರಿ ಹಿಂಭಾಗದಲ್ಲೇ ಬಳ್ಳೆ ಹಾಡಿ ನಿವಾಸಿ ಮಂಜು(18) ಎಂಬಾತನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದು ಇದೇ ಹುಲಿ. ಗಾಯಗೊಂಡಿದ್ದರಿಂದ ಬೇಟೆಯಾಡಲು ಸಾಧ್ಯವಾಗದೇ ಹೆಚ್.ಡಿ.ಕೋಟೆ-ಮಾನಂದವಾಡಿ ಮುಖ್ಯರಸ್ತೆಯ ಬಳ್ಳೆ ಹಾಡಿ ಬಳಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು ಎಂದು ಹೇಳಲಾಗಿದೆ. ಅದೇ ವೇಳೆ ಯುವಕನನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಪಟಳ ನೀಡುತ್ತಿದ್ದ ಹುಲಿ ಸೆರೆ ಹಿಡಿಯುವಂತೆ ಬಳ್ಳಿ ಹಾಡಿ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಡಿಸಿಎಫ್ ಹರ್ಷಕುಮಾರ್, ಎಸಿಎಫ್ ಕೆ.ಎನ್.ರಂಗಸ್ವಾಮಿ, ಪಶುವೈದ್ಯರಾದ ಡಾ.ರಮೇಶ್, ಡಾ.ಮದನ್, ಆರ್‍ಎಫ್‍ಓ ಕೆ.ಎಲ್.ಮಧು, ಹರ್ಷಿತ್, ಸಿದ್ದರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »