ಬಿಜೆಪಿ ಸರ್ಕಾರದ್ದು ಬರೀ ಸುಳ್ಳೇ ಸುಳ್ಳು…!
News

ಬಿಜೆಪಿ ಸರ್ಕಾರದ್ದು ಬರೀ ಸುಳ್ಳೇ ಸುಳ್ಳು…!

February 15, 2023

ಬೆಂಗಳೂರು, ಫೆ. 14(ಕೆಎಂಶಿ)-ಬಿಜೆಪಿ ನೇತೃತ್ವದ ಸರ್ಕಾರ ಸುಳ್ಳು ಹೇಳಿಕೊಂಡೇ ಕಾಲ ಕಳೆದಿದೆಯೇ ಹೊರತು ಅಭಿವೃದ್ಧಿ ಕಡೆಗೆ ಗಮನ ಹರಿಸಿಲ್ಲ. ಇಲ್ಲಿಯವರೆಗೂ ತೌಡು ಕುಟ್ಟುವ ಕೆಲಸ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣ ಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿ ಸಿಲ್ಲ ಎಂದು ದಾಖಲೆ ಸಹಿತ ಎಳೆಎಳೆಯಾಗಿ ಸದನದಲ್ಲಿ ಬಿಡಿಸಿಟ್ಟರು.
ದಿನನಿತ್ಯ ಭರವಸೆಗಳ ಮಹಾಪೂರವನ್ನೇ ಹರಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆಯೇ ಹೊರತು ಅಭಿವೃದ್ಧಿ ಶೂನ್ಯ. ರಾಜ್ಯಪಾಲರ ಭಾಷಣವೆಂದರೆ ಸರ್ಕಾರದ ಕೈಗನ್ನಡಿಯಾಗಿ ರಬೇಕು. ಆದರೆ, ಇದು ಸುಳ್ಳಿನ ಕನ್ನಡಿಯಾಗಿದೆ. ಇಂತಹ ಭಾಷಣವನ್ನು ನಾನು ಎಂದೂ ನೋಡಿರಲಿಲ್ಲ. ನೀವು ಏನಾ ದರೂ ಸಾಧನೆ ಮಾಡಿದ್ದರಲ್ಲವೆ ಭಾಷಣದಲ್ಲಿ ಸೇರಿಸಲು ಸಾಧ್ಯ. ಈ ಪುಸ್ತಕವೇ ನಿಮ್ಮ ಸುಳ್ಳಿನ ಕಂತೆಯನ್ನು ಬಯಲು ಮಾಡುತ್ತದೆ ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸುಳ್ಳನ್ನೇ ಜಾಸ್ತಿ ಹೇಳು ವುದು. ಆಗಾಗ ಸತ್ಯ ಹೇಳುತ್ತಾರೆ ಅಷ್ಟೇ. ವಸ್ತುಸ್ಥಿತಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಪಾಲರ ಭಾಷಣ ದಲ್ಲಿ ಹಿನ್ನೋಟ ಇರಬೇಕು. ಕಳೆದ 4 ವರ್ಷಗಳ ಸಾಧನೆ ಗಳನ್ನು, ರಾಜ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಬೇಕಿತ್ತು. ಇದರ ಜೊತೆಗೆ ಮುನ್ನೋಟವೂ ಇರಬೇಕಿತ್ತು. ರಾಜ್ಯಪಾಲರ ಭಾಷಣದಲ್ಲಿ ಹಿನ್ನೋಟ ಬರೀ ಸುಳ್ಳುಗಳಿಂದ ಕೂಡಿತ್ತು, ಮುನ್ನೋಟ ಇರಲೇ ಇಲ್ಲ. ಸರ್ಕಾರ ತೌಡು ಕುಟ್ಟುವ ಕೆಲಸ ಮಾಡಿದೆ, ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ, ತೌಡು ಕುಟ್ಟಿದರೆ ಏನು ಫಲ ಎಂದು ಪ್ರಶ್ನಿಸಿದರು. 2018ರಲ್ಲಿ ಬಿಜೆಪಿ ರಾಜ್ಯದ ಜನರಿಗೆ 600 ಭರವಸೆ ಗಳನ್ನು ನೀಡಿತ್ತು. ಅದರಲ್ಲಿ ಈವರೆಗೆ 50 ರಿಂದ 60 ಭರವಸೆಗಳನ್ನು ಕೂಡ ಪೂರ್ಣ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೇಳಿಸಲಾಗಿದೆ, ವಾಸ್ತವದಲ್ಲಿ ಈ ವರ್ಗದ ಜನರ ಪರವಾಗಿ ಸರ್ಕಾರ ಕೆಲಸ ಮಾಡಿಲ್ಲ ಎಂಬುದು ನನ್ನ ಅನಿಸಿಕೆ.

ರೈತರಿಗೆ ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಯಾವೊಂದು ಭರವಸೆಯನ್ನು ಈಡೇರಿಸಲಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟು ಆಗುವುದು ಹೇಗೆ. ಇದನ್ನೇ ನಾನು ಸುಳ್ಳು ಭಾಷಣ ಎಂದು ದೂರಿರುವುದು. ಇದು ಸಂಸದೀಯ ಪದವೂ ಹೌದು ಎಂದು ಸಮರ್ಥಿಸಿಕೊಂಡರು. ರೈತರ ಸಾಲವನ್ನು ಒಂದು ರೂಪಾಯಿ ಕೂಡ ಮನ್ನಾ ಮಾಡುವ ಕೆಲಸ ಮಾಡಿಲ್ಲ. ಹಿಂದೆ ಸಾಲ ಮನ್ನಾ ಮಾಡಿದ್ದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ. ಅದರಲ್ಲಿ ದಾಖಲೆ ನೀಡದೆ ಉಳಿದುಕೊಂಡ ಕೆಲವು ರೈತರ ಸಾಲ ಮನ್ನಾವನ್ನು ಈ ಸರ್ಕಾರ ಪೂರ್ಣಗೊಳಿಸುವ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಮುಂದಿನ 6 ವರ್ಷಗಳಲ್ಲಿ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, 2022ನೇ ಇಸವಿಗೆ ಇದು ಆಗಬೇಕಿತ್ತಲ್ವಾ, ಆಗಿದೆಯಾ. ರೈತರ ಸಾಲ ದುಪ್ಪಟ್ಟಾಗಿದೆ, ಆದಾಯವಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಸಗೊಬ್ಬರ ದುಬಾರಿ : ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯನ್ನು ಸುಮಾರು 50,000 ಕೋಟಿ ರೂ. ಕಡಿಮೆ ಮಾಡಿದ್ದಾರೆ. ನರೇಗಾದಲ್ಲಿ ಕಳೆದ ಬಾರಿಗೂ ಈ ಬಾರಿಗೂ ನೀಡಿರುವ ಅನುದಾನದಲ್ಲಿ 29,000 ಕೋಟಿ ರೂ. ಕಡಿತ ಮಾಡಿದ್ದಾರೆ. 2014ರಲ್ಲಿ 50 ಕೆ.ಜಿ ಡಿಎಪಿ ಚೀಲವೊಂದರ ಬೆಲೆ 450 ರೂ. ಇತ್ತು, ಇಂದು 1,350 ರಿಂದ 1400 ರೂ. ಆಗಿದೆ.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ, ಡೀಸೆಲ್‍ಗೆ ಸಹಾಯಧನ ನೀಡಿದ್ದೇವೆ, ಸಸಿ ವಿತರಣೆ ಮಾಡಿದ್ದೇವೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ್ದೇವೆ, ಗೋಶಾಲೆಗಳನ್ನು ತೆರೆದಿದ್ದೇವೆ ಎಂದು ಸರ್ಕಾರ ಹೇಳಿದೆ. ಇವುಗಳ ಪರಿಣಾಮದ ಬಗ್ಗೆ ನಂತರ ಮಾತನಾಡುತ್ತೇನೆ. ಈ ಸರ್ಕಾರ ಶೋಷಿತ ವರ್ಗ, ರೈತರು, ಬಡವರು, ಅವಕಾಶ ವಂಚಿತ ಜನರ ವಿರೋಧಿ ಸರ್ಕಾರ. ಈ ವರ್ಗದ ಜನರ ಪರವಾದ ಸರ್ಕಾರವಲ್ಲ. ಇತ್ತೀಚೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗ ಇಲ್ಲ ಎಂದಿದ್ದಾರೆ. ಹಾಗಾದರೆ ಉದ್ಯಮಿಗಳು, ಬಂಡವಾಳಶಾಹಿಗಳ 12 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡಿದ್ದಾರಲ್ಲ ಇದು ದೇಶಕ್ಕೆ ಒಳ್ಳೆಯದಾ ಇದು ಬಿಜೆಪಿಯವರಿಗೆ ರೈತರ ಬಗ್ಗೆ ಇರುವ ಧೋರಣೆ. ರೈತರ ಬಗ್ಗೆ ಸರ್ಕಾರದ ಧೋರಣೆ ಬಾಯಲ್ಲಿ ಒಂದು, ಕೃತಿಯಲ್ಲಿ ಒಂದು ಇದೆ, ತರಾಟೆಗೆ ತೆಗೆದುಕೊಂಡರು.

ನಾನು ಮುಖ್ಯಮಂತ್ರಿಯಾಗಿರುವಾಗ ನಮ್ಮ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆ. ಇದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆ. ನಾವು ನುಡಿದಂತೆ ನಡೆದಿದ್ದೇವೆ.

ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾತನಾಡುವಾಗ ಅಭಿವೃದ್ಧಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್, ಹಿಜಾಬ್ ಬಗ್ಗೆ ಮಾತನಾಡಿ ಎಂದಿದ್ದಾರೆ. ಮೊನ್ನೆ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ಅಭಿವೃದ್ಧಿ ಬಗ್ಗೆ ಮಾತನಾಡದೆ, ಅಬ್ಬಕ್ಕ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದಿದ್ದಾರೆ. ಇದು ಈ ದೇಶದ ಗೃಹ ಮಂತ್ರಿ ಆಡುವ ಮಾತಾ! ಮಹಾತ್ಮಾ ಗಾಂಧಿ ವರ್ಸಸ್ ಸಾವರ್ಕರ್ ನಡುವಿನ ಚುನಾವಣೆ ಎನ್ನುತ್ತಾರೆ. ಇವೆಲ್ಲ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದೆಯಾ ಎಂದು ಪ್ರಶ್ನಿಸಿದರು. ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸಾಗಿರುವ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸದೆ ಇರುವುದು ರೈತರಿಗೆ ದೊಡ್ಡ ತಲೆ ನೋವಾಗಿದೆ. ಕೋಮುವಾದಿ ಉದ್ದೇಶದೊಂದಿಗೆ ಜಾರಿಗೆ ತಂದಿರುವ ಈ ಕಾಯ್ದೆಯನ್ನು ಮೊದಲು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

Translate »