ಮೈಸೂರು,ಸೆ.23(ಪಿಎಂ)-ಒಬ್ಬಂಟಿಗಳ ಹಿಂದೆ ಬೀದಿ ನಾಯಿಗಳ ಹಿಂಡು ಬಿದ್ದರೆ ಅಂತಹವರ ಪ್ರಾಣ ಕೈಗೆ ಬಾರದೇ ಇರುವುದೇ? ಹೌದು, ಮೈಸೂರು ನಗರದಲ್ಲಿ ಬೀದಿ ನಾಯಿಗಳ ಹಿಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇವು ಗಳ ಉಪಟಳಕ್ಕೆ ನಾಗರಿಕರು ಕಂಗಾಲಾಗಿದ್ದಾರೆ. ಇವುಗಳ ಅಡ್ಡೆಗಳ ಬಳಿ ಒಬ್ಬಂಟಿಯಾಗಿ ಸಂಚರಿಸುವುದು ದುಸ್ಸಾಹಸಕ್ಕೆ ಕೈ ಹಾಕಿದಂತೆ.
ಇತೀಚೆಗಂತೂ ರಸ್ತೆ ರಸ್ತೆ ಗಳಲ್ಲಿ ಬೀದಿ ನಾಯಿಗಳ ಹಿಂಡು ಕಂಡು ಬರುತ್ತಿವೆ. ಇವುಗಳ ಪೈಕಿ ಬಹುತೇಕ ನಾಯಿಗಳು, ಪಾದ ಚಾರಿಗಳು ಹಾಗೂ ವಾಹನ ಸವಾರರ ಹಿಂದೆ ಬೀಳುವುದು ಸಾಮಾನ್ಯವಾಗಿದೆ. ಬೈಕ್ ಹಾಗೂ ಕಾರುಗಳ ಹಿಂದೆ ಜಿದ್ದಿಗೆ ಬಿದ್ದವರಂತೆ ಓಡುವ ನಾಯಿಗಳ ಸಂಖ್ಯೆಯೂ ಹೆಚ್ಚಾಗು ತ್ತಿದೆ. ಇದರಿಂದ ಬೈಕ್ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳೂ ಕಡಿಮೆಯೇನಿಲ್ಲ. ಇನ್ನು ಚಿಕ್ಕ ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಹೆಜ್ಜೆ ಇಡಲು ಹಿಂದೇಟು ಹಾಕು ವಂತಹ ಭಯದ ವಾತಾವರಣ ಸೃಷ್ಟಿಸಿವೆ ಈ ಬೀದಿ ಶ್ವಾನಗಳು. ರಾತ್ರಿ ವೇಳೆ ಇವುಗಳ ಉಪಟಳಕ್ಕೆ ನಿವಾಸಿಗಳು ನಿದ್ದೆಗೆಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳಲ್ಲಿ ತಂಡ ತಂಡಗಳಾಗಿ ಕಾಣಿಸಿಕೊಳ್ಳುವ ನಾಯಿಗಳು ಸುಖಾಸುಮ್ಮನೆ ರಸ್ತೆಯಲ್ಲಿ ಹೋಗುವವರ ಬೆನ್ನತ್ತುತ್ತಿರುವುದು ಹಲವೆಡೆ ನಡೆಯುತ್ತಲೇ ಇದೆ. ಹೀಗೆ ನಗರದ ಹಲವು ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚುತ್ತಿದ್ದು, ಎಚ್ಚರ ತಪ್ಪಿದರೆ ಇವುಗಳ ದಾಳಿಗೆ ಒಳಗಾಗಿ ಸಂಕಷ್ಟಕ್ಕೀಡಾಗುವುದು ಖಚಿತ.
ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ, ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೇಳತೀರದಾಗಿದೆ. ತೋಳಗಳಂತೆ ಗುಂಪುಕಟ್ಟಿ ಎಲ್ಲೆಲ್ಲೂ ಕಾಣಸಿಗುತ್ತಿರುವ ಇವುಗಳ ನಡುವೆ ಜೀವ ಕೈಯಲ್ಲಿಡಿದು ಓಡಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಮಕ್ಕಳನ್ನು ಹೊರಗೆ ಬಿಡುವಂತೆಯೇ ಇಲ್ಲ. ವೃದ್ಧರಂತೂ ಹೊರಗೆ ಕಾಲಿಡದಂತಹ ಪರಿಸ್ಥಿತಿ ಇದೆ. ರಾತ್ರಿ ವೇಳೆಯಂತೂ ಇವುಗಳ ಕಠೋರ ಬೊಗುಳುವಿಕೆಯ ಶಬ್ದಕ್ಕೆ ನಿದ್ದೆ ಮಾಡದಂತಾಗಿದೆ. ಸ್ಥಳೀಯ ಆಡಳಿತ ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಠಿಣ ಕಾರ್ಯಾಚರಣೆ ಕೈಗೊಳ್ಳಬೇಕು. ಇದಕ್ಕೆ ನಾಗರಿಕರೂ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕು ಎಂದು ಅಭಿಪ್ರಾಯಪಟ್ಟರು.