ಮೈಸೂರು, ಆ.13(ಆರ್‍ಕೆ)- ವಿಳಾಸ ಕೇಳುವ ನೆಪದಲ್ಲಿ ಅಪರಿಚಿತ ಬೈಕ್ ಸವಾ ರರಿಬ್ಬರು ಮಹಿಳೆಯ ಚಿನ್ನದ ಸರ ಕಿತ್ತು ಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ 2ನೇ ಹಂತ ದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಶ್ರೀರಾಂಪುರ 2ನೇ ಹಂತದ ಭ್ರಮರಾಂಭ ಕಲ್ಯಾಣ ಮಂಟಪ ಸಮೀಪ 7ನೇ ಕ್ರಾಸ್ ನಿವಾಸಿ ಹೆಚ್.ಎನ್.ಸುಬ್ಬಯ್ಯ ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿ(56) ಚಿನ್ನದ ಸರ ಕಳೆದು ಕೊಂಡವರು. ಪಕ್ಕದ ಮನೆಯ ಮಹಿಳೆ ಯೊಬ್ಬರೊಂದಿಗೆ ಮಾತನಾಡುತ್ತಾ ನಿಂತಿದ್ದ ನಾಗಲಕ್ಷ್ಮಿ ಬಳಿ, ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕಿನಲ್ಲಿ ಮಾಸ್ಕ್ ಧರಿಸಿ ಬಂದ ಯುವಕರಿಬ್ಬರ ಪೈಕಿ, ಹಿಂಬದಿ ಸವಾರ ಬೈಕ್‍ನಿಂದಿಳಿದು ಬಂದು, ‘ಇಲ್ಲಿ ಕಾರ್ಪೆಂಟರ್ ಮನೆ ಎಲ್ಲಿ ಬರುತ್ತದೆ’ ಎಂದು ಕೇಳಿದ್ದಾನೆ.
ಅವರಿಗೆ ಗೊತ್ತಿರದ ಕಾರಣ ನೆರೆಮನೆ ಮಹಿಳೆ ಕಡೆ ತಿರುಗಿ ಕೇಳಬೇಕೆನ್ನುವಷ್ಟರಲ್ಲಿ ಆತ ನಾಗಲಕ್ಷ್ಮಿ ಅವರ ಕೊರಳಿನಿಂದ 45 ಗ್ರಾಂ ತೂಕದ ಸರ ಎಗರಿಸಿ ಎಂಜಿನ್ ಆನ್‍ನಲ್ಲೇ ಇರಿಸಿಕೊಂಡಿದ್ದ ಬೈಕ್ ಏರಿ ಇಬ್ಬರೂ ಪರಾರಿಯಾಗಿದ್ದಾರೆ. ಈ ಘಟನೆ ಇಂದು ಮಧ್ಯಾಹ್ನ ಸುಮಾರು 2.45 ಗಂಟೆಯಲ್ಲಿ ನಡೆದಿದೆ.
ಗಾಬರಿಯಾದ ನಾಗಲಕ್ಷ್ಮಿ ಅವರು ಏನು ತೋಚದೇ ಅಯ್ಯೋ…ಅಯ್ಯೋ ಎಂದು ಕೂಗಿದ್ದಾರೆ. ಅವರು ಸ್ಪಷ್ಟವಾಗಿ ಚಿನ್ನದ ಸರ ಕಿತ್ತುಕೊಂಡ ಬಗ್ಗೆ ಹೇಳದಿರುವುದ ರಿಂದ ನೆರೆಹೊರೆಯವರು ಅವರ ಆರೋಗ್ಯ ಸರಿಯಿಲ್ಲವೇನೋ ಅಂದುಕೊಂಡು ನಿಧಾನ ವಾಗಿಯೇ ಅವರ ಹತ್ತಿರ ಬಂದಿದ್ದಾರೆ. ಅಷ್ಟರಲ್ಲಿ ಸರಗಳ್ಳರು ಪರಾರಿಯಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಠಾಣೆ ಗರುಡ ಎಎಸ್‍ಐ ರಂಗಸ್ವಾಮಿ ಮತ್ತು ಸಿಬ್ಬಂದಿ ಮಹಜರು ನಡೆಸಿದರು. ಸರ ಕಿತ್ತುಕೊಂಡ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರೆ ಯಾರಾದರೂ ಬೈಕಿನಲ್ಲಿ ಬೆನ್ನತ್ತಿ ಖದೀಮರನ್ನು ಹಿಡಿಯ ಬಹುದಿತ್ತು ಅಥವಾ ಬೈಕ್ ನಂಬರ್ ನೋಟ್ ಮಾಡಬಹುದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು, ಸಿಸಿ ಕ್ಯಾಮರಾ ಫುಟೇಜಸ್‍ಗಳ ಸಹಾಯದಿಂದ ಸರ ಅಪ ಹರಣಕಾರರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಎಲ್ಲಾ ಸರ್ಕಲ್‍ಗಳಲ್ಲಿ ಪಲ್ಸರ್ ಬೈಕ್ ಸವಾರರತ್ತ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.