ಮಳೆ ನಡುವೆಯೂ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆ
ಮೈಸೂರು

ಮಳೆ ನಡುವೆಯೂ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆ

November 12, 2022

ಮೈಸೂರು, ನ.11(ಎಂಟಿವೈ)- ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನಕದಾಸರ ಜಯಂತ್ಯೋತ್ಸವ ಸಮಿತಿ, ಶುಕ್ರವಾರ ಆಯೋಜಿಸಿದ್ದ ಕನಕದಾಸರ ಪ್ರತಿಮೆಯ ಭವ್ಯ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕುರುಬ ಸಮುದಾಯದ ಮಹನೀಯರ ಜೀವನ ಚರಿತ್ರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಅರಮನೆಯ ಉತ್ತರ ದ್ವಾರದ ಬಳಿ ಇರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂದೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಜಯಂತ್ಯೋತ್ಸವ ಸಮಿತಿಯ ಪದಾಧಿ ಕಾರಿಗಳು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕೋಟೆ ಆಂಜನೇಯಸ್ವಾಮಿ ದೇವಾಲ ಯದ ಮುಂಭಾಗದಿಂದ ಆರಂಭವಾದ ಕನಕದಾಸರ ಪ್ರತಿಮೆ ಹಾಗೂ ಭಾವಚಿತ್ರದ ಮೆರವಣಿಗೆ ಕೆ.ಆರ್.ವೃತ್ತ, ನ್ಯೂ ಸಯ್ಯಾಜಿ ರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬಾ ರಸ್ತೆಯ ಮೂಲಕ ಕಲಾಮಂದಿರ ತಲುಪಿತು. ಮೆರವಣಿಗೆಯಲ್ಲಿ ಅಲಂಕೃತ ತೆರೆದ ವಾಹನದಲ್ಲಿ ಭಕ್ತ ಕನಕದಾಸರ ಪ್ರತಿಮೆಯನ್ನು ಮಂಗಳವಾದ್ಯ ಹಾಗೂ ಕಳಸ ಹೊತ್ತ ಮುತ್ತೈದೆಯರು ಹಾಗೂ ಅಶ್ವಾರೋಹಿ ಪಡೆಯೊಂದಿಗೆ ಕೊಂಡೊಯ್ಯಲಾಯಿತು. ಬಳಿಕ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಲೆ, ನಗಾರಿ, ಕಂಗೀಲು ಕುಣಿತ, ಗಾರುಡಿ ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಸಾಗಿ ಮೆರವಣಿಗೆಗೆ ಕಳೆ ಕಟ್ಟಿದವು. ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ವಿಜಯನಗರ ಸಾಮ್ರಾಜ್ಯ ಕಟ್ಟಿದ ಹಕ್ಕ-ಬುಕ್ಕರು, ಚಂದ್ರಗುಪ್ತ ಮೌರ್ಯರ ಸಾಮ್ರಾಜ್ಯ, ಅಹಲ್ಯಾಬಾಯಿ ಹೋಳ್ಕರ್ ಜೀವನ ಚರಿತ್ರೆ, ಸಾಧನೆ ಕುರಿತಂತೆ ನಿರ್ಮಿಸಿದ್ದ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಯುವ ಸಮೂಹ: ಮೆರವಣಿಯ ಮುಂಚೂಣಿಯಲ್ಲಿ ಜಾನಪದ ಕಲಾತಂಡಗಳ ನೃತ್ಯ ವೈಭವವಿದ್ದರೆ, ಮಧ್ಯ ಭಾಗದಲ್ಲಿ ಡಿಜೆ ಸಂಗೀತಕ್ಕೆ ಯುವ ಸಮೂಹ ಮೈಮರೆತು ಕುಣಿದು ಕುಪ್ಪಳಿಸಿ ಸಂಭ್ರಮಿಸಿತು. ಬೆಳಗ್ಗೆ 10.30ಕ್ಕೆ ಆರಂಭವಾದ ಮೆರವಣಿಗೆ ಮಧ್ಯಾಹ್ನ 2.10ಕ್ಕೆ ಕಲಾಮಂದಿರ ತಲುಪಿತು. ಈ ವೇಳೆ ಮಾರ್ಗದುದ್ದಕ್ಕೂ ಕುರುಬ ಸಮುದಾಯದ ವೈಶಿಷ್ಟ್ಯತೆ ಬಿಂಬಿಸುವ ಗೀತೆಗಳನ್ನು ಡಿಜೆ ಸಂಗೀತದಲ್ಲಿ ಬಿತ್ತರಿಸಲಾಯಿತು.
ಮಳೆಯ ನಡುವೆಯೂ ಸಂಭ್ರಮ ಮೆರವಣಿಗೆ ಆರಂಭವಾಗುತ್ತಿದ್ದಂತೆ ಮಳೆ ಸುರಿಯಲಾ ರಂಭಿಸಿತು. ಮೆರವಣಿಗೆಯುದ್ಧಕ್ಕೂ ಮಳೆ ನಡುವೆಯೂ ಜಾನಪದ ಕಲಾವಿದರ ಒಳಗೊಂಡಂತೆ ಮೆರವಣಿಗೆಯಲ್ಲಿ ಪಾಲ್ಗೊಂಡಿ ದ್ದವರು ಉತ್ಸಾಹದಿಂದಲೇ ಹೆಜ್ಜೆ ಹಾಕಿದರು.

ಪ್ರಸಾದ ವಿತರಣೆ: ಕನಕದಾಸರ ಪ್ರತಿಮೆಯಿದ್ದ ವಾಹನ ಮುಂದೆ ಮುಂದೆ ಸಾಗುತ್ತಿದ್ದಂತೆ ಚಾಮರಾಜ ಜೋಡಿ ರಸ್ತೆ, ಶಾಂತಲಾ ಚಿತ್ರಮಂದಿರದ ವೃತ್ತ, ದೇವರಾಜ ಅರಸ್ ರಸ್ತೆಯಲ್ಲಿ ಸ್ಥಳೀಯರು ಕನಕದಾಸರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಜೆ.ಗೋಪಿ, ಕೆಪಿಸಿಸಿ ಕಾನೂನು ಘಟಕದ ರಾಜ್ಯ ಕಾರ್ಯದರ್ಶಿ ಲೀಲಾ ಕಾಳೆ, ಮುಖಂಡರಾದ ಬ್ಯಾಂಕ್ ಪುಟ್ಟಸ್ವಾಮಿ, ಎಂ.ಶಿವಣ್ಣ, ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಕೆಇಬಿ ಸೋಮಣ್ಣ, ಮಂಜು, ಮೈಸೂರು ಬಸವಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »