ನಮಸ್ಕಾರ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಅಭಿವೃದ್ಧಿ
News

ನಮಸ್ಕಾರ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಅಭಿವೃದ್ಧಿ

November 12, 2022

ಬೆಂಗಳೂರು ನ.11(ಕೆಎಂಶಿ)-ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಕರ್ನಾಟಕ ಶಕ್ತಿಯುತವಾಗಿ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿಯತ್ತ ಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಮುಂಬ ರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡೆ ಮಾತನಾಡಿದ ಪ್ರಧಾನಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯ ಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಇಂತಹ ಅಭಿವೃದ್ಧಿ ಕಾರ್ಯ ಗಳು ಸಾಧ್ಯ ಎಂದು ತಿಳಿಸುವುದರ ಮೂಲಕ ಮುಂಬರುವ ವಿಧಾನಸಭಾ ಚುನಾವಣೆ ಯಲ್ಲೂ ನಮ್ಮ ಸರ್ಕಾರ ಬೆಂಬಲಿಸಿದರೆ ಅಭಿವೃದ್ಧಿಗೆ ಶಕ್ತಿ ಬರುತ್ತದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದ ಶೇ.25ರಷ್ಟು ಪಾಲು ಹೊಂದಿರುವ ಕರ್ನಾಟಕ ಹಾಗೂ ಬೆಂಗಳೂರು ಅಭಿ ವೃದ್ಧಿಯ ಮುಂಚೂಣಿ ಪಥದಲ್ಲಿವೆ. ನಾಡ ಪ್ರಭು ಕೆಂಪೇಗೌಡರ ಕಲ್ಪನೆಯ ಬೆಂಗಳೂ ರಿನ ಸಮಗ್ರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಟರ್ಮಿನಲ್-2 ಹಾಗೂ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಭವ್ಯ `ಪ್ರಗತಿಯ ಪ್ರತಿಮೆ’ ಲೋಕಾರ್ಪಣೆ ನಂತರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ವಾಣಿಜ್ಯ, ಸಂಸ್ಕøತಿ, ಪರಂಪರೆ, ಆಡಳಿತದ ಸಮರ್ಪಕ ಸಂಯೋಜನೆಯಿಂದ ಕೆಂಪೇಗೌಡರು, ಭವ್ಯ ನಗರ ನಿರ್ಮಾಣಕ್ಕೆ ಬುನಾದಿ ಹಾಕಿದರು.

ಇಂದು ಆಡಳಿತ, ವ್ಯಾಪಾರದ ರೂಪುರೇಷೆ ಬದಲಾದರೂ ಕೂಡ ಬೆಂಗಳೂರಿನ ಆರ್ಥಿಕತೆ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಸಾಗಿದೆ. ಭಾರತದ ಮೊದಲ ಮೇಕ್ ಇನ್ ಇಂಡಿಯಾ ವಂದೇ ಭಾರತ್ ರೈಲು ಕರ್ನಾಟಕದಿಂದ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.
ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಸಾಮಾಜಿಕ ಜಾಲತಾಣಗಳು ಹಾಗೂ ಭಾವಚಿತ್ರಗಳಲ್ಲಿರುವುದಕ್ಕಿಂತಲೂ ಸುಂದರವಾಗಿದೆ.ಈ ನಾಡಿನ ಜನರ ಹಳೆಯ ಬೇಡಿಕೆ ಈಗ ಈಡೇರಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ `ಪ್ರಗತಿಯ ಪ್ರತಿಮೆ’ ಲೋಕಾರ್ಪಣೆ ಮಾಡಿ,ಅವರ ಪಾದಗಳಿಗೆ ಜಲಾಭಿಷೇಕ ಮಾಡುವ ಅವಕಾಶ ದೊರೆತಿರುವುದು ತಮ್ಮ ಪಾಲಿನ ಸೌಭಾಗ್ಯವಾಗಿದೆ ಎಂದರು.
ಭಾರತವನ್ನು ಸಶಕ್ತಗೊಳಿಸಲು ಸ್ಟಾರ್ಟ್ ಅಪ್‍ಗಳು ರಹದಾರಿಯಾಗಿವೆ. ಬೆಂಗಳೂರು ಸ್ಟಾರ್ಟ್ ಅಪ್ ಯೋಜನೆಗಳ ಸ್ಫೂರ್ತಿಯ ಚಿಲುಮೆಯಾಗಿದೆ. ಯುವಶಕ್ತಿ,ಯುವಭಾರತದ ಪ್ರತಿಬಿಂಬ ಬೆಂಗಳೂರು ಎಂದು ಹಾಡಿ ಹೊಗಳಿದರು.

ಕರ್ನಾಟಕಕ್ಕೆ ಬಂಡವಾಳದ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಈ ರಾಜ್ಯ ಮುಂದಿದೆ. ವೇಗ ಹೆಚ್ಚಾದಂತೆ ಅಭಿವೃದ್ಧಿಯೂ ವಿಸ್ತಾರವಾಗಿ ಹೋಗುತ್ತದೆ. ಆ ನಿಟ್ಟಿನಲ್ಲಿ ರಾಜ್ಯ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು.

ವಂದೇ ಭಾರತ್ ಕೇವಲ ರೈಲು ಮಾತ್ರವಲ್ಲ ಅದು ನವಭಾರತ ನಿರ್ಮಾಣದ ಪ್ರತೀಕ. ಈ ಹಿಂದೆ ಭಾರತದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿದ್ದವು ಈಗ ಅವುಗಳು ಶಕ್ತಿಯಿಂದ ಓಡುತ್ತಿವೆ. ಹೊಸ ವಂದೇ ಭಾರತ್ ರೈಲುಗಳು ಭಾರತೀಯ ರೇಲ್ವೆಗೆ ಹೊಸ ಆಯಾಮ ನೀಡಿವೆ. ಸರಕು, ಸಾಗಣೆಗೆ ಅರ್ಪಿತವಾದ ಪ್ರತ್ಯೇಕ ಮಾರ್ಗ ನಿರ್ಮಿಸಲಾಗುತ್ತಿದೆ. ಹೊಸ ಹೊಸ ವಲಯಗಳನ್ನು ರೈಲು ಸಂಪರ್ಕಿಸುತ್ತಿವೆ. ಬೆಂಗಳೂರಿನಲ್ಲಿ ದೇಶದ ಮೊದಲ ಹವಾನಿಯಂತ್ರಿತ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ. ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಸಮಗ್ರ ಸುಧಾರಣೆಗೆ ಒತ್ತು ನೀಡಲಾಗಿದೆ ಎಂದರು.

ವೈಮಾನಿಕ ಸಂಪರ್ಕಜಾಲವು ವಿಸ್ತಾರವಾಗುತ್ತಿದೆ. ವಿಮಾನಯಾನ ಮಾರುಕಟ್ಟೆಯಲ್ಲಿ ಭಾರತವು ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.2014 ರ ಪೂರ್ವದಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು ಈಗ ಅವು ದುಪ್ಪಟ್ಟಾಗಿದೆ. ಪ್ರಧಾನಮಂತ್ರಿ ಗತಿ ಶಕ್ತಿ, ಪಿಎಂ ಸ್ವನಿಧಿ, ಪಿಎಂ ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ದೇಶ ಹಾಗೂ ರಾಜ್ಯದ ಪ್ರಗತಿಯನ್ನು ನಾಡಿನ ಜನರ ಮುಂದೆ ವಿವರಿಸಿದರು.

ಉದ್ದೇಶಿತ ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯು ಸಾರಿಗೆ ವೆಚ್ಚ ಕಡಿಮೆಗೊಳಿಸಿ, ಹೊಸತನ, ಅನ್ವೇಷಣೆಗೆ ದಾರಿ ಮಾಡಿಕೊಡಲಿದೆ. ಭೌತಿಕ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಸಾಮಾಜಿಕ ಮೂಲಸೌಕರ್ಯಗಳ ವಿಕಸನಕ್ಕೂ ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ಆದ್ಯತೆ ನೀಡಿದೆ.

ಭಗವದ್ ಶಕ್ತಿ ಹಾಗೂ ಸಾಮಾಜಿಕ ಶಕ್ತಿಯ ಜೋಡಣೆಯ ಪ್ರೇರಣೆ ಸಂತ ಕನಕದಾಸರಿಂದ ದೊರೆತಿದೆ.ಶ್ರೀಕೃಷ್ಣನ ಭಕ್ತರಾಗಿದ್ದ ಅವರು “ಕುಲ ಕುಲವೆಂದು ಹೊಡೆದಾಡದಿರಿ’’ ಎಂದು ಸಹಬಾಳ್ವೆಯ ಸಂದೇಶ ಸಾರಿದರು. ರಾಮಧ್ಯಾನ ಚರಿತೆ ಕೃತಿಯ ಮೂಲಕ ರಾಗಿಯ ಮಹತ್ವದ ಜೊತೆಗೆ ಸಿರಿಧಾನ್ಯಗಳು ಹಾಗೂ ಸಾಮಾಜಿಕ ಸಂದೇಶ ಹಾಗೂ ವೀರ ವನಿತೆ ಒನಕೆ ಓಬವ್ವನ ಸಾಹಸ ಮನೋಭಾವವನ್ನು ಪ್ರಧಾನಿ ಪ್ರಶಂಸಿಸಿದರು.

Translate »