ಅನಧಿಕೃತವಾಗಿ ವಾಸವಿರುವವರ ಹೊರ ಹಾಕಿ ಅರ್ಹರಿಗೆ ಆಶ್ರಯ ನೀಡಿ
ಮೈಸೂರು

ಅನಧಿಕೃತವಾಗಿ ವಾಸವಿರುವವರ ಹೊರ ಹಾಕಿ ಅರ್ಹರಿಗೆ ಆಶ್ರಯ ನೀಡಿ

November 15, 2022

ಮೈಸೂರು, ನ. 14 (ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಲ್ಲಿ ಅನಧಿಕೃತ ವಾಗಿ ವಾಸಿಸುತ್ತಿರುವವರನ್ನು ಹೊರ ಹಾಕಿ ಅರ್ಹ ಬಡ ಕುಟುಂಬದವರಿಗೆ ಆಶ್ರಯ ನೀಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡಳಿಯಿಂದ ನಿರ್ಮಿ ಸಿರುವ ಬಹುತೇಕ ಮನೆಗಳಲ್ಲಿ ಅನರ್ಹ ಹಾಗೂ ಆಯ್ಕೆ ಯಾಗದ ವ್ಯಕ್ತಿಗಳು ಅನಧಿಕೃತವಾಗಿ ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ ಅವರನ್ನು ಖಾಲಿ ಮಾಡಿಸದಿರುವು ದರಿಂದ ನಿಜವಾದ ಬಡವರು, ನಿರಾಶ್ರಿತರು ಗುಡಿಸಲಿ ನಲ್ಲಿ ವಾಸಿಸುವಂತಾಗಿದೆ ಎಂದರು. ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅನರ್ಹರೆಂದು ಕಂಡು ಬಂದಲ್ಲಿ ಪೊಲೀಸ್ ಭದ್ರತೆ ಪಡೆದು ತೆರವುಗೊಳಿಸಿ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಿಗೂ ಸರಿಯಾದ ಮಾಹಿತಿ ನೀಡಿ ಅವರ ಸಹಕಾರವನ್ನೂ ಪಡೆದು ಕಾರ್ಯಾಚರಣೆ ಮಾಡಿ ಅಲ್ಲಿಗೆ ನಿಜವಾದ ಅರ್ಹ ಫಲಾನುಭವಿ ಕುಟುಂಬ ದವರು ವಾಸಿಸಲು ಅವಕಾಶ ಕಲ್ಪಿಸಿ ಎಂದು ಸಂಸದರು ಸೂಚನೆ ನೀಡಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸುವ ಮನೆಗಳ ಜೊತೆಗೆ ರಸ್ತೆ, ಚರಂಡಿ, ಎಸ್‍ಟಿಪಿ, ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್ ಸಂಪರ್ಕ ದಂತಹ ಮೂಲ ಸೌಕರ್ಯ ಕಲ್ಪಿಸಬೇಕು ಹಾಗೂ ನಿರ್ವ ಹಣೆ ಮಾಡುವುದೂ ಸಹ ನಿಮ್ಮ ಜವಾಬ್ದಾರಿಯಾಗಿದ್ದು, ಆಗಿಂದಾಗ್ಗೆ ಆ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿ ದ್ದರೆ ಪರಿಹರಿಸಬೇಕು ಎಂದು ಅವರು ತಿಳಿಸಿದರು.

14000 ಮನೆಗಳಿಗೆ ಬೇಡಿಕೆ: ಮೈಸೂರು ನಗರ ಸೇರಿ ಜಿಲ್ಲೆಯಾದ್ಯಂತ 14000 ಮನೆಗಳಿಗೆ ಬೇಡಿಕೆ ಇದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. 6300 ಮನೆಗಳಿಗೆ ಮಂಜೂರಾತಿ ಸಿಕ್ಕಿದೆ.

ಎರಡು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಉಳಿದ ಮನೆ ನಿರ್ಮಿಸಲು ಭೂಸ್ವಾಧೀನಪಡಿಸಿಕೊಂಡು ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ ಅಧಿಕಾರಿಗಳಿಗೆ ಜಾಗ ಗುರುತಿಸಿದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಂಜೂರಾತಿ ಕೊಡಿಸುತ್ತೇನೆ ಎಂದು ಪ್ರತಾಪ್ ಸಿಂಹ ಇದೇ ಸಂದರ್ಭ ತಿಳಿಸಿದರು.

ನ.30 ರೊಳಗೆ ರಿಂಗ್ ರಸ್ತೆಗೆ ದೀಪ: 42 ಕಿ.ಮೀ. ರಿಂಗ್ ರಸ್ತೆ ಪೈಕಿ ಸುಮಾರು 30 ಕಿ.ಮೀ.ವರೆಗೆ ಯುಜಿ ಕೇಬಲ್ ಅಳವಡಿಸಲಾಗಿದೆ. ಉಳಿದ ಜಾಗದ ಕಾಮಗಾರಿಯೂ ಪ್ರಗತಿಯಲ್ಲಿದ್ದು ನವೆಂಬರ್ 30ರೊಳಗಾಗಿ ಎಲ್‍ಇಡಿ ಬಲ್ಬ್ ಹಾಕಿ ರಿಂಗ್ ರಸ್ತೆಯಲ್ಲಿ ಎಲ್ಲಾ ಬೀದಿ ದೀಪಗಳು ಉರಿಯುವಂತೆ ಮಾಡುತ್ತೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್, ದಿಶಾ ಸಮಿತಿ ಅಧ್ಯಕ್ಷರಾದ ಸಂಸದರಿಗೆ ಸಮಜಾಯಿಷಿ ನೀಡಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ: ಬೀದಿ ಬದಿ ತಳ್ಳುವ ಗಾಡಿಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ಬಡ್ಡಿ ಸಾಲಕ್ಕೆ ಕೈವೊಡ್ಡಿ ಸಂಕಷ್ಟಕ್ಕೆ ಸಿಲುಕಬಾರದೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿಗಳ ಸ್ವ ನಿಧಿ ಯೋಜನೆಯಡಿ 10 ಸಾವಿರ, 20 ಸಾವಿರ ರೂ.ಗಳವರೆಗೆ ಬ್ಯಾಂಕಿನಿಂದ ಸಬ್ಸಿಡಿ ರೂಪದ ಸಾಲ ನೀಡುತ್ತಿದ್ದು, ಪಾಲಿಕೆ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅರ್ಹ ಫಲಾನುಭವಿ ಗಳಿಗೆ ಸಾಲಸೌಲಭ್ಯ ಕೊಡಿಸಬೇಕೆಂದು ಪ್ರತಾಪ್ ಸಿಂಹ ಸಲಹೆ ನೀಡಿದರು. ಮೈಸೂರಲ್ಲಿ ಈ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ 15,430 ಅರ್ಜಿಗಳು ಬಂದಿದ್ದು, 9030 ಮಂದಿಗೆ ಮಂಜೂರಾಗಿವೆ. 8601 ಸಣ್ಣ ವ್ಯಾಪಾರಿಗಳಿಗೆ ವಿತರಿಸಲಾಗಿದೆ. ಸಣ್ಣ ಪುಟ್ಟ ಕಾರಣಗಳಿ ಗಾಗಿ ಬ್ಯಾಂಕ್‍ನವರು ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಿಎಂಜೆವೈ ಆರೋಗ್ಯ ಕಾರ್ಡ್ ನೀಡಿ: ಪ್ರಧಾನ ಮಂತ್ರಿಗಳ ಜನಾರೋಗ್ಯ ಯೋಜನೆ (ಪಿಎಂಜೆವೈ) ಯಡಿ ಜಿಲ್ಲೆಯ ಎಲ್ಲಾ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಿ ಚಿಕಿತ್ಸೆ ಪಡೆಯಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ಅವರಿಗೆ ಪ್ರತಾಪ್ ಸಿಂಹ ಸಲಹೆ ನೀಡಿದರು. ಚಾಮರಾಜ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ್ದರೂ ಪರಿಶೀಲಿಸಿ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಎಸ್.ಎ. ರಾಮದಾಸ್ ಕಿಡಿಕಾರಿದರು.

ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದು, ಸಭೆಗೆ ಅಗತ್ಯ ಮಾಹಿತಿ ನೀಡಿದರು.

Translate »