ಹಲವು ಕಡೆ ಆಹ್ವಾನವೇನೋ ಬಂದಿದೆ: ಆದರೆ ನನ್ನ ಸ್ಪರ್ಧೆ ನಿರ್ಧರಿಸುವುದು `ಹೈಕಮಾಂಡ್’
ಮೈಸೂರು

ಹಲವು ಕಡೆ ಆಹ್ವಾನವೇನೋ ಬಂದಿದೆ: ಆದರೆ ನನ್ನ ಸ್ಪರ್ಧೆ ನಿರ್ಧರಿಸುವುದು `ಹೈಕಮಾಂಡ್’

November 15, 2022

ಮೈಸೂರು, ನ.14(ಎಂಟಿವೈ)- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬು ದನ್ನು ನಿರ್ಧರಿಸುವುದಕ್ಕೆ ಹೈಕಮಾಂಡ್‍ಗೆ ಬಿಟ್ಟಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ಅಲ್ಲಿನ ಜನರು ಹಾಗೂ ಮುಖಂಡರು ಒತ್ತಾಯಿಸುತ್ತಿದ್ದಾರೆ. ಶನಿವಾರ ಕೋಲಾರಕ್ಕೆ ತೆರಳಿದ್ದಾಗ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೊಟ್ಟ ಯೋಜನೆಗಳಿಂದ ಕೋಲಾರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಅದರಲ್ಲೂ ರೈತರು ಸಂತೋಷಗೊಂಡಿ ದ್ದಾರೆ. ಕೃಷಿ ಚಟುವಟಿಕೆ ಸುಧಾರಣೆ ಕಂಡಿದೆ. ನಿನ್ನೆ ಪ್ರವಾಸದ ವೇಳೆ ಸಾಕಷ್ಟು ಮಂದಿ ರೈತರು, ಮುಖಂಡರು ಆ ವಿಚಾರವನ್ನು ಪ್ರಸ್ತಾಪಿಸಿದರು ಎಂದರು.

ಈ ಹಿಂದೆ ಕೋಲಾರದಲ್ಲಿ 1200 ಅಡಿ ಕೊಳವೆ ಬಾವಿ ತೋಡಿದರೂ ನೀರು ಬರುತ್ತಿರಲಿಲ್ಲ. ಅಂತರ್ಜಲದ ಪ್ರಮಾಣ ಪಾತಾಳಕ್ಕೆ ಕುಸಿದಿತ್ತು. ರೈತರು ಕಂಗೆಟ್ಟಿದ್ದರು. ಕೃಷಿ ಚಟುವಟಿ ಕೆಗೆ ಕೊಳವೆ ಬಾವಿಗಳಲ್ಲಿ ನೀರು ಬರದೇ ಸಂಕ ಷ್ಟಕ್ಕೆ ಒಳಗಾಗಿ ದ್ದರು. ಇದನ್ನು ಮನಗಂಡು ನಾನು ಮುಖ್ಯ ಮಂತ್ರಿಯಾಗಿದ್ದ ವೇಳೆ ಕೆ.ಸಿ. ವ್ಯಾಲಿ, ಹೆಚ್.ಎನ್.ವ್ಯಾಲಿ ಎಂಬ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಕೋಲಾರ ಹಾಗೂ ಚಿಕ್ಕ ಬಳ್ಳಾಪುರದಲ್ಲಿ ಸೀವೆಜ್ ಪ್ಲಾಂಟ್ ನಿರ್ಮಿಸಿ, ಶುದ್ಧೀಕರಿ ಸಿದ ಚರಂಡಿ ನೀರನ್ನು ಕೆರೆಗಳಿಗೆ ತುಂಬಿಸಲಾಯಿತು. ಅಂತರ್ಜಲ ಅಭಿವೃದ್ಧಿ ಮಾಡುವ ಏಕೈಕ ಉದ್ದೇಶ ದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು. ಇದುವರೆಗೆ ಯಾವ ಸರ್ಕಾರವೂ ಇಂತಹ ಯೋಜನೆಯನ್ನು ಜಾರಿಗೊಳಿಸಿರಲಿಲ್ಲ. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡ ಯೋಜನೆಗಳಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ದಲ್ಲಿ ಅಂತರ್ಜಲ ಉತ್ತಮವಾಗಿದೆ, 50 ರಿಂದ 60 ಅಡಿಗಳಲ್ಲೇ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಈ ವಿಷಯ ತಿಳಿದು ನನಗೆ ವೈಯಕ್ತಿಕವಾಗಿ ಖುಷಿಯಾಯಿತು ಎಂದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಇನ್ನು ನಿರ್ಧಾರ ಮಾಡಿಲ್ಲ. ಸಾಕಷ್ಟು ಕ್ಷೇತ್ರಗಳಿಂದ ಆಹ್ವಾನ ಬರುತ್ತಿವೆ. ಜನ ಪ್ರೀತಿಯಿಂದ ನಮ್ಮ ಕ್ಷೇತ್ರಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ. ಆದರೆ, ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲು ಹೈಕಮಾಂಡ್‍ಗೆ ಬಿಟ್ಟಿದ್ದೇನೆ. ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.

ನಿಜವಾದ ಜನ ನಾಯಕನ ಲಕ್ಷಣ: ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ನಿಲ್ಲುತ್ತೇನೆ ಎನ್ನುವುದು ನಿಜವಾದ ಜನನಾಯಕನ ಲಕ್ಷಣ ಎಂದು ಹೇಳುವ ಮೂಲಕ ಕ್ಷೇತ್ರ ಹುಡುಕಾಟದ ಬಗ್ಗೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಪ್ರಜಾಪ್ರಭುತ್ವದಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ. ಅಂತೆಯೇ, ನಾನು ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರ, ವರುಣಾ ಕ್ಷೇತ್ರದ ಜನ ಬಯಸಿದರೆ ವರುಣಾದಲ್ಲಿ ಸ್ಪರ್ಧಿಸುತ್ತೇನೆ. ಟೀಕಿಸುತ್ತಿರುವ ಬಿಜೆಪಿಗರು ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯ ಮಾಡುತ್ತಾರಾ ಎಂದು ಪ್ರಶ್ನಿಸಿದರಲ್ಲದೆ, ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲುವವನು ಮಾತ್ರ `ನಾಯಕ’ ಎನ್ನುವುದನ್ನು ಬಿಜೆಪಿ ಮುಖಂಡರು ಮನವರಿಕೆ ಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಟೀಕಾಕಾರರಿಗೆ ಮಾರ್ಮಿಕವಾಗಿ ಉತ್ತರಿಸಿದರು.

ಕುಮಾರಸ್ವಾಮಿ ಎಲ್ಲಿದ್ದರು?: ಸಿದ್ದರಾಮಯ್ಯ ಅವರಿಗೆ ಎರಡು ಸಲ ರಾಜಕೀಯವಾಗಿ ಪುನರ್ಜನ್ಮ ಕೊಟ್ಟೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿರುವÀ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು 8 ಚುನಾವಣೆ ಗೆಲ್ಲುವಾಗ ಕುಮಾರಸ್ವಾಮಿ ಎಲ್ಲಿದ್ದರು? ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು ಯಾವಾಗ? 1996ರಲ್ಲಿ ಅವರು ರಾಜಕೀಯಕ್ಕೆ ಬಂದರು. ನಾನು ಅಲ್ಲಿಯವರೆಗೆ ಚುನಾವಣೆ ಗೆದ್ದಿರಲಿಲ್ವೇ? ನಾನು ಪ್ರಚಾರಕ್ಕೆ ಹೋಗದೇ ಇದ್ದರಿಂದ ಸಿದ್ದರಾಮಯ್ಯ ಗೆದ್ದರು ಎಂಬ ಅವರ ಮಾತಿನಲ್ಲಿ ಅರ್ಥವಿಲ್ಲ. ಇದು ಬಾಲಿಶ ಹೇಳಿಕೆ. ನನಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ: ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಸಾಹಿತಿಗಳು, ಚಿಂತಕರು, ಪತ್ರಕರ್ತರು, ಪ್ರತಿಪಕ್ಷದವರಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿಯವರು ಮೊದಲಿನಿಂದಲೂ ಇಂಥವುಗಳನ್ನು ಪೆÇೀಷಿಸಿಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರವೇ ಇದರ ಪರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಇವರೆಲ್ಲ ಇದರ ಭಾಗವಾಗಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ ಪ್ರಯತ್ನ. ಸಂವಿಧಾನದ 19ನೇ ವಿಧಿಯಡಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ, ಭಯ ಹುಟ್ಟಿಸುವ ಮೂಲಕ ಬಿಜೆಪಿಯವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿದ್ದಾರೆ. ಸೇಡಿನ ರಾಜಕಾರಣದ ಮೂಲಕ ಸಂವಿಧಾನದ ಎಲ್ಲಾ ಹಕ್ಕು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇನಾ ಇವರ ಅಜೆಂಡಾ: ಸರ್ಕಾರಿ ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಣ್ಣ ಬಳಿಯಲು ಖರ್ಚು ಮಾಡುತ್ತಿರುವುದು ಜನರ ದುಡ್ಡು, ಬಿಜೆಪಿಯದ್ದಲ್ಲ. ಜನರು ಶಾಲೆಯನ್ನೂ ಕೇಸರೀಕರಣ ಮಾಡುವಂತೆ ಹೇಳಿದ್ದಾರೆಯೇ? ಇಷ್ಟ ಬಂದಂತೆ ಅಧಿಕಾರ ಮಾಡಬಾರದು. ಅದು ಜನ ಮತ್ತು ಸಂವಿಧಾನ ವಿರೋಧಿ. ಇವರು ಈ ರೀತಿ ಮಾಡುತ್ತೀವಿ ಅಂತ ಅಧಿಕಾರಕ್ಕೆ ಬಂದಿದ್ದರಾ? ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು ಬಿಜೆಪಿಯವರು ಎಂದು ಹರಿಹಾಯ್ದರು.

Translate »