ಹಾಡಹಗಲೇ ಆಸ್ಪತ್ರೆಗೆ ನುಗ್ಗಿ ನರ್ಸ್ ಕುತ್ತಿಗೆ ಕೊಯ್ದ ಪಾಗಲ್ ಪ್ರೇಮಿ
ಮೈಸೂರು

ಹಾಡಹಗಲೇ ಆಸ್ಪತ್ರೆಗೆ ನುಗ್ಗಿ ನರ್ಸ್ ಕುತ್ತಿಗೆ ಕೊಯ್ದ ಪಾಗಲ್ ಪ್ರೇಮಿ

November 16, 2022

ಮೈಸೂರು, ನ. 15(ಆರ್‍ಕೆ)- ಹಾಡಹಗಲೇ ಪಾಗಲ್ ಪ್ರೇಮಿಯೊಬ್ಬ ಆಸ್ಪತ್ರೆಗೆ ನುಗ್ಗಿ ಚಾಕುವಿ ನಿಂದ ಕತ್ತು ಕೊಯ್ದು ನರ್ಸ್ ಕೊಲೆಗೆ ಯತ್ನಿ ಸಿದ್ದಾನೆ. ಈ ಘಟನೆ ಮೈಸೂರಿನ ಹೆಬ್ಬಾಳು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಾಮರಾಜನಗರ ಜಿಲ್ಲೆಯವನೆಂದು ಹೇಳಲಾದ ನಂಜುಂಡಸ್ವಾಮಿ(29), ಮಹಿಳಾ ಸ್ಟಾಫ್ ನರ್ಸ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆಕೆಯನ್ನು ರಕ್ಷಿಸಲು ಬಂದ ಸಹೋ ದ್ಯೋಗಿಗೂ ಇರಿದು ಗಾಯಗೊಳಿಸಿದ್ದಾನೆ.
ಮೈಸೂರಿನ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸ್ಟಾಫ್ ನರ್ಸ್ ಆಗಿರುವ ಯುವತಿಯನ್ನು ಪ್ರೀತಿಸುತ್ತಿದ್ದ ನಂಜುಂಡಸ್ವಾಮಿ, ಆಸ್ಪತ್ರೆ ಹಾಸ್ಟೆಲ್‍ನಲ್ಲೇ ನೆಲೆಸಿರುವ ಆಕೆಯನ್ನು ಆಗಾಗ ಹೊರಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ತಾನು ಪ್ರೀತಿಸುತ್ತಿದ್ದ ನರ್ಸ್, ಅದೇ ಆಸ್ಪತ್ರೆಯ ನೌಕರನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ತಿಳಿದು ರೊಚ್ಚಿಗೆದ್ದಿದ್ದ. ಹಲವು ಬಾರಿ ಇದೇ ವಿಷಯಕ್ಕೆ ನರ್ಸ್‍ವೊಟ್ಟಿಗೆ ಜಗಳವಾಡಿದ್ದ. ತಾನು ಎಷ್ಟೇ ಹೇಳಿದರೂ ಮತ್ತೋರ್ವನ ಸ್ನೇಹ ಮುಂದು ವರೆಸಿದ್ದರಿಂದ ಆಕ್ರೋಶಗೊಂಡಿದ್ದ ನಂಜುಂಡ ಸ್ವಾಮಿ, ಇಂದು ಬೆಳಗ್ಗೆ 9.45 ಗಂಟೆಗೆ ಆಸ್ಪತ್ರೆಗೆ ಹೋಗಿ ಓಪಿಡಿ ಬ್ಲಾಕ್‍ನಲ್ಲಿದ್ದ ಪ್ರಿಯತಮೆಯ ಕುತ್ತಿಗೆ ಬಲಭಾಗವನ್ನು ಸಿಬ್ಬಂದಿ, ರೋಗಿಗಳ ಕಡೆಯವರ ಸಮ್ಮುಖದಲ್ಲೇ ಚಾಕುವಿನಿಂದ ಕೊಯ್ದಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಹೋದ್ಯೋಗಿ ರಕ್ಷಿಸಲು ಬಂದ ಮತ್ತೋರ್ವ ಮಹಿಳಾ ಸಿಬ್ಬಂದಿ ಹೊಟ್ಟೆ ಭಾಗಕ್ಕೂ ಇರಿದು ಪರಾರಿಯಾಗಲೆತ್ನಿಸಿದ ಆತನನ್ನು ರೋಗಿ ಕಡೆಯವರು ಹಾಗೂ ಆಸ್ಪತ್ರೆ ಭದ್ರತಾ ಸಿಬ್ಬಂದಿ ಸುತ್ತುವರಿದು ಹಿಡಿದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್ ಕೆ.ಆರ್.ಪ್ರಸಾದ್ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ತೆರಳಿ, ಮಹಜರು ನಡೆಸಿ ಆರೋಪಿ ಭಗ್ನಪ್ರೇಮಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಸ್ಟಾಫ್ ನರ್ಸ್ ಹಾಗೂ ಮತ್ತೋರ್ವ ಮಹಿಳಾ ಸಿಬ್ಬಂದಿಗೆ ಆಸ್ಪತ್ರೆಯಲ್ಲೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದು, ಸೂಕ್ತ ಸಮಯಕ್ಕೆ ರಕ್ತ ನೀಡಿ, ಚಿಕಿತ್ಸೆ ನೀಡಿದ್ದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆಗೊಳಪಡಿಸಿದ ನಂತರ ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೆಬ್ಬಾಳು ಠಾಣೆ ಪೊಲೀಸರು ತಿಳಿಸಿದ್ದಾರೆ. ಬೆಳ್ಳಂಬೆಳಗ್ಗೆ ಆಸ್ಪತ್ರೆ ಆವರಣದಲ್ಲೇ ನಡೆದ ಈ ಕೃತ್ಯದಿಂದ ರೋಗಿಗಳು, ಸಂಬಂಧಿಗಳು, ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »