ಮೈಸೂರು ಮೃಗಾಲಯದ ಹೆಚ್ಚುವರಿ ಜಿಂಕೆ,ಸಾರಂಗ ದಾಂಡೇಲಿ ಅಭಯಾರಣ್ಯಕ್ಕೆ ಸಾಗಾಣೆ
ಮೈಸೂರು

ಮೈಸೂರು ಮೃಗಾಲಯದ ಹೆಚ್ಚುವರಿ ಜಿಂಕೆ,ಸಾರಂಗ ದಾಂಡೇಲಿ ಅಭಯಾರಣ್ಯಕ್ಕೆ ಸಾಗಾಣೆ

November 16, 2022

ಮೈಸೂರು, ನ,.15(ಎಂಟಿವೈ)- ಮೈಸೂರು ಮೃಗಾಲಯದಲ್ಲಿ ಜಿಂಕೆ ಹಾಗೂ ಸಾಂಬರ್(ಸಾರಂಗ) ಸಂತತಿ ಯಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಳವಾ ಗಿದ್ದು, ಇವುಗಳನ್ನು ದಾಂಡೇಲಿ ಅಭ ಯಾರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದೆ.

ರಾಜ್ಯದ ಮೃಗಾಲಯಗಳಲ್ಲಿ ಜಿಂಕೆಗಳ ಸಂತತಿ ಹೆಚ್ಚಳ ಸಾಮಾನ್ಯ ಸಂಗತಿಯಾ ಗಿದ್ದು, ಅಧಿಕವಾಗಿರುವ ಜಿಂಕೆಗಳಿಗೆ ವಿವಿಧ ವನ್ಯಧಾಮದಲ್ಲಿ ಪುನರ್ವಸತಿ ಕಲ್ಪಿಸು ವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯದಿಂದ 2019ರಲ್ಲಿ 100ಕ್ಕೂ ಹೆಚ್ಚು ಜಿಂಕೆಗಳನ್ನು ಹುಣಸೂರು ಸಮೀಪದ ಅರಬ್ಬೀತಿಟ್ಟು ವನ್ಯಧಾಮದಲ್ಲಿ ಬಿಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಸಾರಂಗ ಹಾಗೂ 50ಕ್ಕೂ ಅಧಿಕ ಜಿಂಕೆ ಗಳನ್ನು ದಾಂಡೇಲಿ ಅಭಯಾರಣ್ಯಕ್ಕೆ ಬಿಡಲು ನಿರ್ಧರಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 3 ಹೆಣ್ಣು ಹಾಗೂ ಒಂದು ಗಂಡು ಸಾರಂಗವನ್ನು ದಾಂಡೇಲಿಯಲ್ಲಿ ಬಿಡಲಾಗಿದೆ.

ಶೀಘ್ರದಲ್ಲಿ ಜಿಂಕೆಗಳ ರವಾನೆ: ಮೈಸೂರು ಮೃಗಾಲಯದಲ್ಲಿ ಜಿಂಕೆಗಳ ಸಂಖ್ಯೆ ಹೆಚ್ಚಾ ಗಿದ್ದು, ನಿರ್ವಹಣೆಯೊಂದಿಗೆ ಜಾಗದ ಸಮಸ್ಯೆ ಯಾಗುವುದನ್ನು ಅರಿತು ಇವುಗಳನ್ನು ದಾಂಡೇಲಿ ಅಭಯಾರಣ್ಯದಲ್ಲಿ ಬಿಡಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಕೋರಿಕೆ ಮೇರೆಗೆ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದರೊಂದಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಮೈಸೂರು ಮೃಗಾಲಯದಲ್ಲಿ ಹೆಚ್ಚುವರಿಯಾಗಿರುವ ಸಸ್ಯಹಾರಿ ಪ್ರಾಣಿಗಳನ್ನು ಅರಣ್ಯ ಹಾಗೂ ವನ್ಯಧಾಮಗಳಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಾಫ್ಟ್ ರಿಲೀಸ್ ಮೆಥೆಡ್: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೃಗಾಲಯ ಗಳಿಂದ ಜಿಂಕೆ ಹಾಗೂ ಸಾರಂಗ ಪ್ರಾಣಿಗಳನ್ನು ಅರಣ್ಯ ಪ್ರದೇಶ ಅಥವಾ ವನ್ಯಧಾಮಗಳಿಗೆ ಕೊಂಡೊಯ್ದು ಬಿಡುವುದು ಸಾಮಾನ್ಯ ಪ್ರಕ್ರಿಯೆ. ಈ ಹಿಂದೆಯೂ ಮೈಸೂರು ಮೃಗಾಲಯದಿಂದ 100ಕ್ಕೂ ಹೆಚ್ಚು ಜಿಂಕೆಗಳನ್ನು ಅರಬ್ಬಿತಿಟ್ಟು ವನ್ಯಧಾಮಕ್ಕೆ ಕೊಂಡೊಯ್ದು ಬಿಡಲಾಗಿತ್ತು. ಹಂಪಿ ಮೃಗಾಲಯದಿಂದಲೂ 50ಕ್ಕೂ ಹೆಚ್ಚು ಜಿಂಕೆಗಳನ್ನು ಚಿತ್ರದುರ್ಗದ ಮಾರಿ ಕಣಿವೆಗೆ ಕೊಂಡೊಯ್ದು ಬಿಡಲಾಗಿದೆ. ಅದೇ ಮಾದರಿಯಲ್ಲಿ ಈಗ ಮೈಸೂರು ಮೃಗಾಲಯದಿಂದ ಹೆಚ್ಚುವರಿಯಾಗಿರುವ ಜಿಂಕೆ ಹಾಗೂ ಸಾರಂಗವನ್ನು ಕೊಂಡೊಯ್ದು ದಾಂಡೇಲಿ ಅಭಯಾರಣ್ಯಕ್ಕೆ ಕೊಂಡೊಯ್ದು ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು. ಪ್ರಾಣಿಗಳನ್ನು ಮೃಗಾಲಯದಿಂದ ಕೊಂಡೊಯ್ದು ಬಿಡಲು ಸಾಫ್ಟ್ ರಿಲೀಸ್ ಹಾಗೂ ಹಾರ್ಡ್ ರಿಲೀಸ್ ಎಂಬ ಎರಡು ವಿಧಾನವಿದ್ದು, ಅವುಗಳಲ್ಲಿ ಈ ಹಿಂದೆ ಹಾರ್ಡ್ ರಿಲೀಸ್ ವಿಧಾನ ಅನುಸರಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಫ್ಟ್ ರಿಲೀಸ್ ವಿಧಾನ ಅನುಸರಿಸಲಾಗುತ್ತಿದೆ. ಈ ವಿಧಾನದಲ್ಲಿ ಅರಣ್ಯ ಪ್ರದೇಶಕ್ಕೆ ಬಿಡಲು ಗುರುತಿಸಲ್ಪಟ್ಟ ಪ್ರಾಣಿಗಳು ಸರಾಗವಾಗಿ ಬೋನ್ ಒಳಗೆ ಹೋಗುವ ತರಬೇತಿ ನೀಡಲು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಬೋನ್‍ನಲ್ಲಿ ಆಹಾರ, ಕುಡಿಯಲು ನೀರನ್ನು ಇಟ್ಟು ಪ್ರಾಣಿಗಳನ್ನು ಒಗ್ಗಿಸಿಕೊಳ್ಳಲಾಗುತ್ತದೆ. ಈ ವಿಧಾನದಿಂದ ಪ್ರಾಣಿಗಳಿಗೆ ಯಾವುದೇ ಒತ್ತಡವಾಗುವುದಿಲ್ಲ. ಬಿಡುಗಡೆ ಮಾಡುವ ಸ್ಥಳದಲ್ಲೂ ಏಕಾಏಕಿ ಅರಣ್ಯ ಪ್ರದೇಶಕ್ಕೆ ಬಿಡದೆ, ಒಂದು ಭಾಗದಲ್ಲಿ ಕುಡಿಯುವ ನೀರು, ಆಹಾರ ಸಿಗುವ ಸ್ಥಳ ಗುರುತಿಸಿ ಬಿಡಲಾಗುತ್ತದೆ. ಹಂತ ಹಂತವಾಗಿ ಅವುಗಳು ಅರಣ್ಯ ಪ್ರದೇಶದ ಪರಿಚಯವಾಗಿ ಸ್ವಚ್ಛಂದವಾಗಿ ವಿಹರಿಸಲು ಇದು ನೆರವಾಗುತ್ತದೆ ಎಂದು ತಿಳಿಸಿದರು.

ಪರಿಸ್ಥಿತಿ ಸುಧಾರಿಸಿದೆ: 2019ರಲ್ಲಿ ಅರಬ್ಬಿತಿಟ್ಟು ವನ್ಯಧಾಮಕ್ಕೆ ಮೃಗಾಲಯದಿಂದ ಜಿಂಕೆಗಳನ್ನು ಬಿಡಲಾಗಿತ್ತು. ಈಗ ಅಲ್ಲಿ ಪರಿಸ್ಥಿತಿ ಸುಧಾರಿಸಿದೆ. ಜಿಂಕೆಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದಾಗಿ ಅರಬ್ಬಿತಿಟ್ಟಲ್ಲಿ ಚಿರತೆ ಹಾಗೂ ಕಾಡುನಾಯಿ(ಸೀಳುನಾಯಿ)ಗಳ ಸಂಖ್ಯೆ ಹೆಚ್ಚಾಗಿದೆ. ನಾವು ಕೇವಲ ಹುಲಿಗಳ ಸಂರಕ್ಷಣೆಗೆ ಹೆಚ್ಚು ಗಮನ ನೀಡುತ್ತಿದ್ದೇವೆ. ಆದರೆ ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾದರೆ, ತಾನಾಗಿಯೇ ಮಾಂಸಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅರಬ್ಬಿತಿಟ್ಟು ವನ್ಯಧಾಮದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಳ್ಳೆ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಸುರಕ್ಷಿತವಾಗಿ ರವಾನೆ: ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸಭೆಯಲ್ಲಿ ದಾಂಡೇಲಿ ಅರಣ್ಯಕ್ಕೆ ಜಿಂಕೆ ಹಾಗೂ ಸಾರಂಗವನ್ನು ಬಿಡುವ ಸಂಬಂಧ ಪ್ರಸ್ತಾಪವಾಯಿತು. ಅದಕ್ಕೆ ಅನುಮೋದನೆ ನೀಡಿದ ಬಳಿಕ ಮೊದಲ ಹಂತದಲ್ಲಿ 3 ಹೆಣ್ಣು ಹಾಗೂ ಒಂದು ಗಂಡು ಸಾರಂಗ(ಸಾಂಬರ್)ವನ್ನು ಸುರಕ್ಷಿತವಾಗಿ ದಾಂಡೇಲಿ ಅರಣ್ಯಕ್ಕೆ ಬಿಡಲಾಗಿದೆ. ಮತ್ತೆ ಹಲವು ಜಿಂಕೆಗಳ ಬಿಡಲು ನಿರ್ಧರಿಸಲಾಗಿದ್ದು, ಈಗಾಗಲೇ ಬೋನ್‍ವೊಂದನ್ನು ಜಿಂಕೆ ಮನೆ ಬಳಿ ಇಡಲಾಗಿದೆ. ಇದರ ಪರಿಚಯವಾದ ನಂತರ ಅವುಗಳನ್ನು ಇದರಲ್ಲಿ ಇರಿಸಿ, ದಾಂಡೇಲಿಗೆ ಸಾಗಿಸಲಾಗುತ್ತದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ನಮ್ಮ ಮೃಗಾಲಯದ ಅವಶ್ಯಕತೆಗೆ ಅನುಗುಣವಾಗಿ ಪ್ರಾಣಿಗಳನ್ನು ಉಳಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಣಿಗಳನ್ನು ಬೇರೆಡೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Translate »