ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಮನೆ ಪಕ್ಕದ ಅನಧಿಕೃತ ನಿರ್ಮಾಣ ತೆರವಿಗೆ ಕೋರ್ಟ್ ತಡೆ
ಮೈಸೂರು

ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್.ಕುಲಕರ್ಣಿ ಅವರ ಮನೆ ಪಕ್ಕದ ಅನಧಿಕೃತ ನಿರ್ಮಾಣ ತೆರವಿಗೆ ಕೋರ್ಟ್ ತಡೆ

November 16, 2022

ಮೈಸೂರು, ನ.15(ಎಸ್‍ಬಿಡಿ)- ಹತ್ಯೆಗೀಡಾದ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರ ಪಕ್ಕದ ಮನೆಯ ಅನಧಿಕೃತ ನಿರ್ಮಾಣ ಭಾಗದ ತೆರವು ಕಾರ್ಯಾ ಚರಣೆ ಆರಂಭಿಸಿದ್ದ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಇದಕ್ಕೆ ನ್ಯಾಯಾಲಯ ನೀಡಿರುವ ತಾತ್ಕಾಲಿಕ ತಡೆಯಾಜ್ಞೆ ಪ್ರತಿ ಕೈಸೇರಿದ ಬಳಿಕ ಕಾರ್ಯಾ ಚರಣೆ ಕೈಬಿಟ್ಟು ವಾಪಸ್ಸಾದರು. ಕುಲಕರ್ಣಿ ಅವರ ಮನೆ ಪಕ್ಕದಲ್ಲಿ ಮಾದಪ್ಪ ಸೆಟ್‍ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸಿದ್ದು, ಈ ಅನಧಿಕೃತ ನಿರ್ಮಾಣ ಭಾಗವನ್ನು ತೆರವುಗೊಳಿ ಸುವ ಸಂಬಂಧ ನಿನ್ನೆ(ನ.14) 24 ಗಂಟೆಗಳ ನೋಟೀಸ್ ಜಾರಿ ಮಾಡಲಾಗಿತ್ತು. ನೋಟೀಸ್‍ಗೆ ಸ್ಪಂದಿಸದಿದ್ದರೆ ಗಡುವು ಮುಗಿದ ನಂತರ ಪಾಲಿಕೆ ವತಿಯಿಂದಲೇ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಪಾಲಿಕೆ ವಲಯ ಕಚೇರಿ 3ರ ಸಹಾಯಕ ಆಯುಕ್ತ ಪ್ರಕಾಶ್, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಸಹಾಯಕ ಅಭಿಯಂತರ ಕೆ.ಮಣಿ ಇತರ ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಈಗಾಗಲೇ ಗುರುತಿಸಲಾಗಿದ್ದ ಅನಧಿಕೃತ ನಿರ್ಮಾಣ ಭಾಗದ ತೆರವಿಗೆ ಮುಂದಾದರು. ಕಟ್ಟಡದ ಟೆರೇಸ್‍ನಿಂದ ಕಾಂಕ್ರೀಟ್ ಕಟಿಂಗ್ ಮಿಷನ್ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಲಾಯಿತು. ಅಷ್ಟರಲ್ಲಿ ಮಾದಪ್ಪ ಪರ ವಕೀಲ ಪ್ರಸಾದ್, ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ತೆರವು ಕಾರ್ಯಾಚರಣೆ ನಡೆಸಬಾರದೆಂದು ತಿಳಿಸಿದರು. ಆದರೆ ನ್ಯಾಯಾಲಯದ ಆದೇಶದ ಪ್ರತಿ ದೊರೆತಿಲ್ಲವೆಂದು ತೆರವು ಕಾರ್ಯಾಚರಣೆ ಮುಂದುವರೆಸಲಾಯಿತು. ಕೆಲ ಹೊತ್ತಿನಲ್ಲೇ ನ್ಯಾಯಾಲಯದ ಆದೇಶ ಪ್ರತಿಯನ್ನು ತರಿಸಿದ ವಕೀಲರು ಅದನ್ನು ವಲಯ ಕಚೇರಿ 3ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿಗೆ ನೀಡಿದರು. ಬಳಿಕ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿ ಪಾಲಿಕೆ ತಂಡ ವಾಪಸ್ಸಾಯಿತು. ಈ ವೇಳೆ ಸರಸ್ವತಿಪುರಂ ಠಾಣೆ ಇನ್‍ಸ್ಪೆಕ್ಟರ್ ಸಿ.ಎಂ.ರವೀಂದ್ರ ಹಾಗೂ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.

ಈ ಸಂಬಂಧ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಪ್ರತಿಕ್ರಿಯಿಸಿ, ಅನಧಿಕೃತ ನಿರ್ಮಾಣ ತೆರವಿಗೆ ನ.12ರವರೆಗೆ ಗಡುವು ನೀಡಲಾಗಿತ್ತು. ಆದರೆ ಸರಣಿ ರಜೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ ಮತ್ತೊಮ್ಮೆ 24 ಗಂಟೆಗಳ ನೋಟೀಸ್ ಅನ್ನು ಕಟ್ಟಡದ ಗೋಡೆಗೆ ಅಂಟಿಸಿದ್ದಲ್ಲದೆ ಪೊಲೀಸರ ಮೂಲಕ ಮಾದಪ್ಪ ಅವರ ಪತ್ನಿಯವರಿಗೂ ತಲುಪಿಸಲಾಗಿತ್ತು. ಅಲ್ಲದೆ ಸಂಜೆ 7 ಗಂಟೆವರೆಗೂ ಅಕ್ರಮ ಭಾಗವನ್ನು ಗುರುತು ಮಾಡಲಾಗಿತ್ತು. ಗಡುವು ಮುಗಿದಿದ್ದರಿಂದ ಇಂದು ಮಧ್ಯಾಹ್ನ ಯಂತ್ರೋಪಕರಣಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿದ್ದೆವು. ಆದರೆ ಮೈಸೂರಿನ ಪಿಡಿಜೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದ್ದಾರೆ. ಹಾಗಾಗಿ ನಮ್ಮ ಲೀಗಲ್ ಸೆಲ್ ಸಂಪರ್ಕಿಸಿ ಮುಂದುವರೆಯಲಾಗುವುದು ಎಂದು ತಿಳಿಸಿದರು.

ಕುಲಕರ್ಣಿ ಅವರು ಎಂದಿನಂತೆ ನ.4ರಂದು ಮಾನಸಗಂಗೋತ್ರಿ ಆವರಣದಲ್ಲಿ ವಾಯುವಿಹಾರದಲ್ಲಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಕುಲಕರ್ಣಿ ಅವರು ಕೆಲಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪ್ರಾಥಮಿಕವಾಗಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ವಿವಿ ಪುರಂ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾ ಗಿತ್ತು. ನಂತರ ಕುಲಕರ್ಣಿ ಅವರ ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಇನ್ನಿತರ ಸಾಕ್ಷ್ಯಾಧಾರದಿಂದ ಉದ್ದೇಶಪೂರ್ವ ಕವಾಗಿ ಕುಲಕರ್ಣಿ ಅವರನ್ನು ಹತ್ಯೆ ಮಾಡಿರುವುದು ಸ್ಪಷ್ಟವಾಗಿತ್ತು. ಇದರ ಜಾಡು ಹಿಡಿದು ತನಿಖೆ ಮುಂದುವರೆಸಿದ ಪೊಲೀಸರು, ಕುಲಕರ್ಣಿ ಅವರ ಪಕ್ಕದ ಮನೆಯ ಮಾದಪ್ಪನ ಮಗ ಮನು ತನ್ನ ಸ್ನೇಹಿತ ವರುಣ್‍ಗೌಡನ ಸಹಾಯದಿಂದ ಕಾರು ಡಿಕ್ಕಿ ಹೊಡೆಸಿ ಕುಲಕರ್ಣಿ ಅವರನ್ನು ಹತ್ಯೆ ಮಾಡಿದ್ದು ತಿಳಿಯಿತು. ಇದಕ್ಕೆ ಸೆಟ್‍ಬ್ಯಾಕ್ ಬಿಡದೆ ಕಟ್ಟಡ ನಿರ್ಮಿಸುತ್ತಿರುವುದರ ವಿರುದ್ಧ ಕುಲಕರ್ಣಿ ಅವರು ಕಾನೂನು ಹೋರಾಟ ನಡೆಸುತ್ತಿದ್ದುದೇ ಕಾರಣವೆಂದು ತಿಳಿದುಬಂದಿತ್ತು.

Translate »