ಮೈಸೂರಲ್ಲಿ ಮತ್ತೆ ಅಕ್ರಮ ನಿರ್ಮಾಣದ ಸದ್ದು
ಮೈಸೂರು

ಮೈಸೂರಲ್ಲಿ ಮತ್ತೆ ಅಕ್ರಮ ನಿರ್ಮಾಣದ ಸದ್ದು

November 16, 2022

ಮೈಸೂರು,ನ.15(ಪಿಎಂ)- ನೆರೆಮನೆ ಮಾಲೀಕರ ಅನಧಿಕೃತ ನಿರ್ಮಾಣ ಪ್ರಶ್ನಿ ಸಿದ ನಿವೃತ್ತ ಐಬಿ ಅಧಿಕಾರಿ ಆರ್.ಎನ್. ಕುಲಕರ್ಣಿ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಅಕ್ರಮ ನಿರ್ಮಾಣದ ಆರೋಪ ಕೇಳಿ ಬರುವ ಮೂಲಕ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮೈಸೂರಿನ ಸರಸ್ವತಿಪುರಂನ 1ನೇ ಮುಖ್ಯ ರಸ್ತೆಯ ವಸತಿ ನಿವೇಶನದಲ್ಲಿ (ವಸತಿ ಬಡಾವಣೆ) ವಾಣಿಜ್ಯ ಕಟ್ಟಡ ನಿರ್ಮಿಸು ತ್ತಿದ್ದು, ಈ ಸಂಬಂಧ ಪಾಲಿಕೆ ಅಧಿಕಾರಿ ಗಳು ಯಾವುದೇ ದಾಖಲೆಗಳನ್ನು ಕೋರ್ಟ್‍ಗೆ ಸಲ್ಲಿಸದೇ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಸದರಿ ನಿವೇಶನದ ನೆರೆಮನೆ ನಿವಾಸಿಯೂ ಆದ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಸಿ.ಕೃಷ್ಣ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಸಿ.ಕೃಷ್ಣ, ನನ್ನ ಮನೆಯ ಪಕ್ಕದ ನಿವೇ ಶನದಲ್ಲಿ ನಕ್ಷೆಗೆ ವಿರುದ್ಧವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಪಾಲಿಕೆಯ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆ ಯಲ್ಲಿ ಪಾಲಿಕೆಯಿಂದ ಒಟ್ಟಾರೆ 3 ನೊಟೀಸ್‍ಗಳನ್ನು ಜಾರಿ ಮಾಡಲಾಗಿದೆ. ಈ ಸಂಬಂಧ ಪಕ್ಕದ ನಿವೇಶನದ ಮಾಲೀಕರು ಕೋರ್ಟ್‍ಗೆ ಹೋಗಿದ್ದು, ಪಾಲಿಕೆಯ ಪರವಾಗಿ ಕೋರ್ಟ್‍ಗೆ ಯಾರೊ ಬ್ಬರು ಹಾಜರಾಗದೇ ಇರುವುದು ಕಟ್ಟಡದ ಮಾಲೀಕನ ಹಣದ ಆಮಿಷಕ್ಕೆ ಒಳಗಾಗಿ ರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ದೂರಿದರು. ಸರಸ್ವತಿಪುರಂನ 1ನೇ ಮುಖ್ಯ ರಸ್ತೆಯ 5ನೇ ಕ್ರಾಸ್‍ನ ನಿವೇಶನದಲ್ಲಿ (ನಂ.2961/52, ಸಿ.ಹೆಚ್.28) ಅದರ ಮಾಲೀಕ ಎನ್.ಕುಮಾರ್ ಅನುಮೋದಿತ ನಕ್ಷೆಗೆ ವಿರುದ್ಧವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ.

ಈ ಸಂಬಂಧ ಪಾಲಿಕೆ ವಲಯ ಕಚೇರಿ 4ರ ವಲಯ ಆಯುಕ್ತರು ನಮ್ಮ ದೂರಿನನ್ವಯ ನಕ್ಷೆ ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲು 2021ರ ಜು.16ರಂದು ನೋಟಿಸ್ ಮೂಲಕ ಸೂಚನೆ ನೀಡಿದ್ದರು. ಅದಾಗ್ಯೂ ಕಾಮಗಾರಿ ಮುಂದುವರೆಸಿದ ಹಿನ್ನೆಲೆಯಲ್ಲಿ ನಮ್ಮ ದೂರಿನನ್ವಯ ಮತ್ತೊಂದು ನೋಟಿಸ್ (2021ರ ಅ.18) ನೀಡಿದ್ದರು. ಇದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಮತ್ತೆ ನಮ್ಮ ದೂರಿನನ್ವಯ 2021ರ ಡಿ.23ರಂದು 3ನೇ ನೋಟಿಸ್ ನೀಡಿದ್ದು, ಇದನ್ನು ಪ್ರಶ್ನಿಸಿ ಎನ್.ಕುಮಾರ್ ಕೋರ್ಟ್‍ಗೆ ಹೋದರು. ಅದರಂತೆ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ವಿವರಿಸಿದರು.

ಕ್ರಮ ಕೈಗೊಂಡ ಒಂದೂ ಉದಾಹರಣೆ ಇಲ್ಲ: ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಟ್ಟುತ್ತಿರುವ ಕಟ್ಟಡಗಳ ಕಾಮಗಾರಿ ನಿಲ್ಲಿಸಿರುವ ಒಂದೂ ಉದಾಹರಣೆ ಇಲ್ಲ. ಸಾಕಷ್ಟು ಹೋರಾಟ ಮಾಡಿ ನೋಟಿಸ್ ನೀಡುವಂತೆ ಮಾಡಿದಾಗ, ನಮ್ಮ ಕುಟುಂಬಕ್ಕೆ ಎನ್.ಕುಮಾರ್ ಅವರಿಂದ ಕಿರುಕುಳ ಆರಂಭವಾಯಿತು. ಪೊಲೀಸರು ದೂರು ಸ್ವೀಕರಿಸದೇ ಕೈಚೆಲ್ಲಿದರು. ನನ್ನಂತಹ ಒಂದು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ ವ್ಯಕ್ತಿಗೇ ಇಂತಹ ಪರಿಸ್ಥಿತಿಯಾದರೆ ಸಾಮಾನ್ಯ ಜನತೆಯ ಗತಿಯೇನು? ಎಂದು ಖಾರವಾಗಿ ಪ್ರಶ್ನಿಸಿದರು.

ಹೋರಾಡಲೇ ಬೇಕಿದೆ: ಅಕ್ರಮ ಕಟ್ಟಡ ನಿರ್ಮಾಣದಲ್ಲಿ ಶಾಮೀಲಾಗಿರುವ ಪಾಲಿಕೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ಇದಕ್ಕೆ ಮೈಸೂರು ನಗರದ ಪ್ರಜ್ಞಾವಂತ ನಾಗರಿಕರು ಕೈಜೋಡಿಸಬೇಕು. ನಮ್ಮ ಈ ಪ್ರಕರಣದಲ್ಲಿ ಪಾಲಿಕೆ ಪರ ವಕೀಲರು ಕೋರ್ಟ್‍ಗೆ ಹಾಜರಾಗಲಿಲ್ಲ. ತಾವೇ ಕೊಟ್ಟಿರುವ ನೋಟಿಸ್ ಪರವಾಗಿ ಮಾತನಾಡಲೂ ಪಾಲಿಕೆ ಅಧಿಕಾರಿಗಳೂ ಕೋರ್ಟ್‍ಗೆ ಬರುವುದಿಲ್ಲವೆಂದರೆ ಏನರ್ಥ? ಎಂದು ಕಿಡಿಕಾರಿದರು. ಕೃಷ್ಣರ ಪುತ್ರ ಕೆ.ಹೇಮಚಂದ್ರ ಮಾತನಾಡಿ, ಪೊಲೀಸರು, ಪಾಲಿಕೆಯವರು ಯಾರೂ ನಮಗೆ ಸಹಕಾರ ನೀಡುತ್ತಿಲ್ಲ. ಇದರಿಂದ ನಾವು ನಿರಂತರ ಕಿರುಕುಳ ಅನುಭವಿಸುತ್ತಿದ್ದೇವೆ. ಬೆದರಿಕೆ ಮಾತ್ರವಲ್ಲದೆ, ಜೀವ ಬೆದರಿಕೆಯೂ ಇದೆ. ಸದರಿ ಎನ್.ಕುಮಾರ್ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದು, ಜೊತೆಗೆ ಗುತ್ತಿಗೆದಾರ ಎಂದೂ ಹೇಳಿಕೊಂಡಿದ್ದಾರೆ. ನಮ್ಮ ದೂರಿನನ್ವಯ ನೋಟಿಸ್ ನೀಡಲು ತಡವಾಗಿ ಬಂದ ಅಧಿಕಾರಿಗಳನ್ನು ವಿಳಂಬ ಮಾಡಿದ್ದರ ಬಗ್ಗೆ ಕೇಳಿದಾಗ, ಸಚಿವರ ಕಡೆಯಿಂದ ನೋಟಿಸ್ ನೀಡದಿರಲು ಸೂಚನೆ ಇತ್ತು ಎನ್ನುತ್ತಿದ್ದರು. ಪೊಲೀಸರಿಗೆ ಮೂರು ಬಾರಿ ದೂರು ನೀಡಿದ್ದು, ಪ್ರತಿ ಬಾರಿ ಎನ್‍ಸಿಆರ್ ಮಾಡಿ ಸುಮ್ಮನ್ನಾಗಿದ್ದಾ ರೆಯೇ ಹೊರತು ಎಫ್‍ಐಆರ್ ಮಾಡಿಲ್ಲ ಎಂದು ದೂರಿದರು. ಕ್ರೀಡಾ ತರಬೇತುದಾರರಾದ ಎಂ.ಯೋಗೇಂದ್ರ, ಸಿ.ಕೆ.ಮುರಳೀಧರ್, ಮೈಸೂರು ಜಿಲ್ಲಾ ಫುಟ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಮಂಜುನಾಥ್ ಗೋಷ್ಠಿಯಲ್ಲಿದ್ದರು.

Translate »