ಇಂದು ಅರಮನೆ ಆವರಣಕ್ಕೆಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ
ಮೈಸೂರು

ಇಂದು ಅರಮನೆ ಆವರಣಕ್ಕೆಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ

August 10, 2022

ಮೈಸೂರು,ಆ.9(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಮೈಸೂರಿಗೆ ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳು ಬುಧವಾರ(ಆ.10) ಬೆಳಗ್ಗೆ 9.20ರಿಂದ 10 ಗಂಟೆಯೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣ ಪ್ರವೇಶಿಸಲಿವೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 14 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಮೊದಲ ತಂಡದಲ್ಲಿ ವಿವಿಧ ಆನೆ ಕ್ಯಾಂಪ್‍ಗಳಿಂದ 9 ಆನೆಗಳನ್ನು ಆ.7ರಂದು ನಾಗರಹೊಳೆ ಅಭಯಾರಣ್ಯದ ಕಾಡಂಚಿನ ಗ್ರಾಮ ವೀರನಹೊಸಳ್ಳಿ ಗೇಟ್‍ನಿಂದ ವಿಧಿ ವಿಧಾನದಂತೆ ಕರೆತರಲಾ ಗಿದೆ. ಆ.7ರ ಸಂಜೆಯಿಂದ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಈ ಆನೆಗಳು ಬೀಡು ಬಿಟ್ಟಿವೆ. ಅರಮನೆ, ಒಂಟಿಕೊಪ್ಪಲ್ ಪಂಚಾಂಗದಂತೆ ದಸರಾ ಗಜಪಡೆಯ ಪ್ರವೇಶಕ್ಕೆ ರಾಜಮನೆತನ ನಿಗದಿಗೊಳಿಸಿದ ಶುಭ ಗಳಿಗೆ ಕನ್ಯಾ ಲಗ್ನದಲ್ಲಿ ಗಜಪಡೆ ಅರಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ: ಅರಣ್ಯ ಭವನದಲ್ಲಿ ಗಜಪಡೆಗೆ ಬುಧವಾರ ಬೆಳಗ್ಗೆ 6.30ರಿಂದ 7 ಗಂಟೆಯೊಳಗೆ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಕರೆತರಲಾಗುತ್ತದೆ.

ಮೆರವಣಿಗೆ:ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ದಿಂದ ಸಾರ್ವಜನಿಕರನ್ನು ದೂರವಿಟ್ಟು ದಸರಾ ಗಜಪಡೆ ಯನ್ನು ಅರಣ್ಯ ಭವನದಿಂದ ಅರಮನೆಗೆ ಕರೆದೊಯ್ಯಲಾಗಿತ್ತು. ಈ ಬಾರಿ ವಿವಿಧ ಮಂಗಳವಾದ್ಯ, ಕಳಸ ಹೊತ್ತ ಮಹಿಳೆಯರು ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆನೆ ಗಳನ್ನು ಮೆರವಣಿಗೆಯಲ್ಲಿ ಅಶೋಕಪುರಂನಿಂದ ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಪಾಠಶಾಲೆ ವೃತ್ತ, ಗನ್ ಹೌಸ್ ವೃತ್ತ, ಬಿ.ಎನ್.ರಸ್ತೆ ಮೂಲಕ ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಕರೆತರಲಾಗುತ್ತದೆ.

ಅರಮನೆ ದ್ವಾರದಲ್ಲಿ ಪೂಜೆ:ಅರಮನೆಯ ಬಿಡದಿ ಬ್ಲಾಕ್ ನಲ್ಲಿ 8.30ರಿಂದ 8.40ರೊಳಗೆ ಗಣಪತಿ ಪೂಜೆ ನೆರವೇರಿಸಿ, ಪೂರ್ಣಕುಂಭ ಹಸ್ತಾಂತರ ಮಾಡಲಾಗುತ್ತದೆ. 9.10ರಿಂದ 9.20ರೊಳಗೆ ಅರಮನೆ ಮಂಡಳಿ ಕಚೇರಿಯಿಂದ ಜಯ ಮಾರ್ತಾಂಡ ದ್ವಾರಕ್ಕೆ ಪೂಜಾ ಸಾಮಗ್ರಿಯನ್ನು ತರಲಾಗು ತ್ತದೆ. ಬಳಿಕ 9.20ರಿಂದ ಗಜಪಡೆಗೆ ಪೂಜೆ ಆರಂಭವಾಗಲಿದ್ದು, ದ್ವಾರಪಾಲಕ ಪೂಜೆ, ಆನೆಗಳ ಪಾದಪೂಜೆ, ಸಂಕಲ್ಪ, ಚಾಮರಸೇವೆ, ಮಂಗಳಾರತಿ ಬಳಿಕ ಪುಷ್ಪಾರ್ಚನೆ ಮಾಡಿ ಜಯಮಾರ್ತಾಂಡ ದ್ವಾರವನ್ನು ದಾಟಿಸಲಾಗುತ್ತದೆ. ಈ ವೇಳೆ ಪೊಲೀಸ್ ಇಲಾಖೆ ವತಿಯಿಂದ ಗಜಪಡೆಗೆ `ಗಾರ್ಡ್ ಆಫ್ ಹಾನರ್’ ಗೌರವ ಸಮರ್ಪಿಸಲಾಗುತ್ತದೆ. ಬಳಿಕ ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಧನಂಜಯ, ಕಾವೇರಿ, ಚೈತ್ರ ಹಾಗೂ ಲಕ್ಷ್ಮೀ ಆನೆಗಳು ಅರಮನೆಯ ಮುಂಭಾಗದ ಪ್ರಾಂಗಣದವರೆಗೂ ಮಂಗಳವಾದ್ಯ, ಛತ್ರಿ-ಚಾಮರ ಸೇವೆಯೊಂದಿಗೆ ಆಗಮಿಸಲಿವೆ. ಬಳಿಕ ಮಾವುತ ಮತ್ತು ಕಾವಾಡಿಗಳಿಗೆ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಲು ಅಗತ್ಯ ವಸ್ತುಗಳುಳ್ಳ ಕಿಟ್ ನೀಡಲಾಗುತ್ತದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಂಪ್ರದಾಯದಂತೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವಂತೆ ಮಾವುತ, ಕಾವಾಡಿಗಳಿಗೆ ಫಲತಾಂಬೂಲ ನೀಡಿ ಗೌರವಿಸಲಾಗುತ್ತದೆ. ಬೆ.10.30ರಿಂದ 10.45ರೊಳಗೆ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಗಜಪಯಣದ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

ಟೆಂಟ್ ನಿರ್ಮಾಣ: ಈಗಾಗಲೇ ಅರಮನೆ ಆವರಣದಲ್ಲಿ ಮಾವುತ ಮತ್ತು ಕಾವಾಡಿಗಳ ವಾಸ್ತವ್ಯಕ್ಕೆ 30 ಟೆಂಟ್ ನಿರ್ಮಿಸಲಾಗಿದೆ. ಅಲ್ಲದೆ, ದಸರಾ ಗಜಪಡೆಯ ನಾಯಕ ಅಭಿಮನ್ಯು ಹಾಗೂ ಕುಮ್ಕಿ ಆನೆ ವಾಸ್ತವ್ಯಕ್ಕೆ ಪ್ರತ್ಯೇಕವಾಗಿ ಕೋಡಿ ಸೋಮೇಶ್ವರ ದೇವಾಲಯದ ಬಳಿ ಟೆಂಟ್ ನಿರ್ಮಿಸಲಾಗಿದೆ. ಗುರುವಾರದ ದಸರಾ ಗಜಪಡೆಗೆ ತೂಕ ಮಾಡಿಸಲಾಗುತ್ತದೆ. ಶುಕ್ರವಾರದಿಂದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ಆರಂಭವಾಗಲಿದೆ.

Translate »