ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ರಾಜ್ಯದ ಹೆಗ್ಗಳಿಕೆ
ಮೈಸೂರು

ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ರಾಜ್ಯದ ಹೆಗ್ಗಳಿಕೆ

January 6, 2023

ಮೈಸೂರು, ಜ.5(ಆರ್‍ಕೆ)- ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿದ್ದ ಹೆಲಿಕಾಪ್ಟರ್ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಇಂದು ಲ್ಯಾಂಡಿಂಗ್ ಆಯಿತು. ಇದರೊಂದಿಗೆ ಹೆಲಿಕಾಪ್ಟರ್ ಲ್ಯಾಂಡ್ ಆದ ರಾಜ್ಯದ ಮೊದಲ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ದಾಖಲೆ ಬರೆಯಿತು. ಮಾತ್ರವಲ್ಲ, ಇದೊಂದು ಪ್ರಥಮ ಯಶಸ್ವಿ ಪ್ರಯೋಗವೂ ಆಗಿದೆ. ಮೈಸೂರು-ಬೆಂಗಳೂರು ದಶಪಥ ಎಕ್ಸ್ ಪ್ರೆಸ್ ಕಾರಿಡಾರ್ ಯೋಜನೆ ಪರಿಶೀಲನೆ ಗಾಗಿ ಆಗಮಿಸಿದ್ದ ಸಚಿವರು, ಸಂಸದ ಪ್ರತಾಪ್ ಸಿಂಹರೊಡನೆ ಮೊದಲು ಹೆಲಿಕಾಪ್ಟರ್‍ನಲ್ಲಿ ಹೆದ್ದಾರಿ ವೈಮಾನಿಕ ಸಮೀಕ್ಷೆ ನಡೆಸಿದರು. ಮಧ್ಯಾಹ್ನ 1.45 ಗಂಟೆಗೆ ಗಡ್ಕರಿ ಅವ ರಿದ್ದ ಹೆಲಿಕಾಪ್ಟರ್, ರಾಮನಗರ ಸಮೀಪ ಜೀಗೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ನಡುವೆ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ಹೆಲಿಪ್ಯಾಡ್‍ನಲ್ಲಿ ಬಂದಿಳಿಯಿತು. ಆ ವೇಳೆ ಈ ಮಾರ್ಗದ ವಾಹನ ಸಂಚಾರವನ್ನು ಬಂದ್ ಮಾಡಿ, ಎರಡೂ ಬದಿಯ ಸರ್ವಿಸ್ ರೋಡ್‍ನಲ್ಲಿ ಬದಲಿ ಮಾರ್ಗ ಕಲ್ಪಿಸಲಾಗಿತ್ತು. ನಿತಿನ್ ಗಡ್ಕರಿಯವರಿದ್ದ ಹೆಲಿಕಾಪ್ಟರ್ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಲ್ಯಾಂಡ್ ಆಗುವುದರೊಂದಿಗೆ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಇಳಿದ ದಾಖಲೆಯಾಯಿತು. ರಸ್ತೆಯಲ್ಲಿ ಹೆಲಿಕಾಪ್ಟರ್ ಭೂ ಸ್ಪರ್ಶ ಮಾಡುವುದನ್ನು ನೋಡಲು ಸುತ್ತಲಿನ ಗ್ರಾಮಸ್ಥರು ನೆರೆದಿದ್ದರಲ್ಲದೆ, ಆ ಮಾರ್ಗ ಸಂಚರಿಸುತ್ತಿದ್ದ ವಾಹನ ಚಾಲಕರು, ಪ್ರಯಾಣಿಕರೂ ಸಹ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಇಳಿಯುತ್ತಿದ್ದುದ್ದನ್ನು ಕಂಡು ನಿಬ್ಬೆರಗಾದರು.

ಈ ವೇಳೆ ಮತ್ತೊಂದು ಪೈಲಟ್ ಹೆಲಿಕಾಪ್ಟರ್ ಸಹ ಬಂದು ಲ್ಯಾಂಡ್ ಆಗಿ, ಸುದ್ದಿಗೋಷ್ಠಿ ಮುಗಿದ ಬಳಿಕ ಎರಡೂ ಹೆಲಿಕಾಪ್ಟರ್‍ಗಳು ಮಧ್ಯಾಹ್ನ 2.45 ಗಂಟೆ ವೇಳೆಗೆ ಅಲ್ಲಿಂದ ಟೇಕ್ ಆಫ್ ಆದವು. ಮೊದಲು ನಿತಿನ್ ಗಡ್ಕರಿ ಅವರು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರೊಂದಿಗೆ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ವೈಮಾನಿಕ ಸಮೀಕ್ಷೆ ನಡೆಸಿದ ನಂತರ, ಮೈಸೂರು-ಬೆಂಗಳೂರು ದಶ ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು. ನಂತರ ಜೀಗೇನಹಳ್ಳಿಯಲ್ಲಿ ಹೆಲಿಕಾಪ್ಟರ್‍ನಿಂದಿಳಿದು ಅವರಿಗಾಗಿ ಸಿದ್ಧಪಡಿಸಿದ್ದ ಮರ್ಸಿಡಿಸ್ ಬೆನ್ಜ್ ಕಾರಿನಲ್ಲಿ ನಿತಿನ್ ಗಡ್ಕರಿ ಅವರು ಹೆದ್ದಾರಿಯನ್ನು ಒಂದು ಕಿ.ಮೀ. ಪರಿಶೀಲಿಸಿದ ಬಳಿಕ ಸಮೀಪದಲ್ಲಿ ಆಯೋಜಿಸಿದ್ದ ಎಕ್ಸ್‍ಪ್ರೆಸ್‍ವೇ ಛಾಯಾಚಿತ್ರಗಳನ್ನು ವೀಕ್ಷಿಸಿ ಸುದ್ದಿಗಾರರಿಗೆ ಯೋಜನೆ ಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಮಧ್ಯಾಹ್ನ 2.45 ಗಂಟೆಗೆ ವಾಪಸ್ಸಾದರು.

Translate »