ಮೈಸೂರು ವಿವಿ ನೇತೃತ್ವದಲ್ಲಿ ನಡೆದ ಕೆ-ಸೆಟ್‍ನಲ್ಲಿ ಭಾರೀ ಅವ್ಯವಹಾರ: ಹುಚ್ಚಾಪಟ್ಟೆ ಪ್ರಶ್ನೆ, ಉತ್ತರ ನಮೂನೆ ಬಗ್ಗೆ ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ
ಮೈಸೂರು

ಮೈಸೂರು ವಿವಿ ನೇತೃತ್ವದಲ್ಲಿ ನಡೆದ ಕೆ-ಸೆಟ್‍ನಲ್ಲಿ ಭಾರೀ ಅವ್ಯವಹಾರ: ಹುಚ್ಚಾಪಟ್ಟೆ ಪ್ರಶ್ನೆ, ಉತ್ತರ ನಮೂನೆ ಬಗ್ಗೆ ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ

August 12, 2021

ಮೈಸೂರು, ಆ.11-ಮೈಸೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ನಡೆಸಿದ 2021ನೇ ಸಾಲಿನ ಕೆ-ಸೆಟ್‍ನಲ್ಲಿ ಗಂಭೀರವಾದ ಅಕ್ರಮಗಳನ್ನು ಎಸಗಲಾಗಿದೆ. ವಿವಿ ಬಿಡುಗಡೆ ಮಾಡಿರುವ ಕೆ-ಸೆಟ್ ಪರೀಕ್ಷೆಯ ಕೀ ಉತ್ತರ ಗಳನ್ನು ಗಮನಿಸಿದಾಗ ಪ್ರಶ್ನೆಪತ್ರಿಕೆಯಲ್ಲಿ ನೀಡಿರುವ ಉತ್ತರಗಳ ಆಯ್ಕೆಯಲ್ಲೇ ಗಂಭೀರ ಲೋಪವಿರುವುದು ಎದ್ದು ಕಾಣುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಗಳಿಗೆ ಸಂಸದ ಪ್ರತಾಪ್‍ಸಿಂಹ ಪತ್ರ ಬರೆದಿದ್ದಾರೆ.
ಭವಿಷ್ಯದ ಪದವೀಧರರನ್ನು ತಯಾರು ಮಾಡುವ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಅರ್ಹತೆಯನ್ನು ಅಳೆಯುವ ಕೆ-ಸೆಟ್ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿವಿಗೆ ನೀಡಲಾಗಿದೆ. ಈ ಹಿಂದೆ ಕೆ-ಸೆಟ್ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ನುರಿತ ಹಾಗೂ ಅನುಭವಿ ಪ್ರಾಧ್ಯಾಪಕರ ಸಮಿತಿ ರಚಿಸಲಾಗಿತ್ತು. ಆದರೆ ಪ್ರಸ್ತುತ ವಿವಿಯಲ್ಲಿ ಅಂತಹ ಸಮಿತಿ ಇಲ್ಲದೇ ಇರು ವುದು ಅಕ್ರಮಗಳಿಗೆ ಎಡೆಮಾಡಿಕೊಡುತ್ತದೆ ಎಂಬ ಗುಮಾನಿ ಇದೆ ಎಂದು ಪ್ರತಾಪ್‍ಸಿಂಹ ಹೇಳಿದ್ದಾರೆ.

ಇತಿಹಾಸ ವಿಷಯದ ಕೆ-ಸೆಟ್ ಪರೀಕ್ಷೆಯ ಕೀ ಉತ್ತರಗಳಲ್ಲಿ 17 ಉತ್ತರಗಳನ್ನು ತಪ್ಪಾಗಿ ಪ್ರಕಟಿಸ ಲಾಗಿದೆ ಎಂದು ತಿಳಿಸಿರುವ ಸಂಸದರು, ಎಲ್ಲಾ 17 ಪ್ರಶ್ನೆಗಳ ಕೀ ಉತ್ತರಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಒಂದು ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ಸಾವಿರ ರೂ.ಗಳ ಡಿಡಿ ತೆಗೆಯಬೇಕು ಎಂದು ನಿಯಮ ಮಾಡಲಾಗಿತ್ತು. ಹೀಗೆ 17 ಕೀ ಉತ್ತರಗಳಿಗೆ ಆಕ್ಷೇಪಣಾ ಸಲ್ಲಿಸಲು 17 ಸಾವಿರ ರೂ. ವೆಚ್ಚವಾಗುತ್ತದೆ. ಒಂದು ವೇಳೆ ಯಾರೂ ಆಕ್ಷೇಪಣೆ ಸಲ್ಲಿಸದೇ ಹೋದರೆ ವಿವಿ ಪ್ರಕಟಿಸಿದ ಕೀ ಉತ್ತರ ಸರಿಯಿದೆ ಎಂಬ ನಿರ್ಧಾ ರಕ್ಕೆ ಬರಲಾಗುತ್ತದೆ. ಪ್ರಕಟವಾಗಿರುವ ಕೀ ಉತ್ತರ ಗಳಲ್ಲಿ ಪ್ರಶ್ನೆಗೆ ಸರಿಯಾದ ಉತ್ತರಗಳನ್ನೇ ಕೊಟ್ಟಿಲ್ಲ. ಆಯ್ಕೆ ಉತ್ತರಗಳಲ್ಲಿ ಸರಿಯಾದ ಆಯ್ಕೆಯನ್ನೂ ಕೊಟ್ಟಿಲ್ಲ. ಹೊಂದಿಸಿ ಬರೆಯಿರಿ ಎಂಬ ಪ್ರಶ್ನೆಗಳಿಗೆ ಸರಿಯಾದ ಹೊಂದಿಕೆಗಳನ್ನೇ ಕೊಟ್ಟಿಲ್ಲ. ತಮಗೆ ತೋಚಿದ ಕೀ ಉತ್ತರ ಪ್ರಕಟಿಸಿ ಎಲ್ಲಾ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಅದು ಸಾಲದು ಎಂಬಂತೆ ಒಂದು ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಲು ಸಾವಿರ ರೂ. ನಿಗದಿ ಮಾಡಿ ಸಾಧ್ಯವಾದಷ್ಟು ಯಾರೂ ಆಕ್ಷೇಪಣೆ ಸಲ್ಲಿಸುವುದನ್ನು ತಡೆಯಲು ಪ್ರಯತ್ನಿಸಲಾಗಿದೆ ಎಂದು ಪ್ರತಾಪ್‍ಸಿಂಹ ಆರೋಪಿ ಸಿದ್ದಾರೆ. ಮೈಸೂರು ವಿವಿ ಪ್ರತಿಷ್ಠಿತ ನ್ಯಾಕ್‍ನಿಂದ ಮಾನ್ಯತೆ ಪಡೆದಿದ್ದು, ಪ್ರಸ್ತುತ ನಡೆಯುತ್ತಿರುವ ಅಕ್ರಮ ಅವ್ಯವಹಾರಗಳಿಂದ ಮತ್ತೊಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಆಗಬಾರದು. ಈಗ ಆಗಿರುವ ದೋಷವನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಸಂಬಂಧಿಸಿದ ವಿಷಯದಲ್ಲಿ ಮರುಪರೀಕ್ಷೆ ನಡೆಸುವುದು ವಿವಿಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆ ಠೇವಣಿ ವಿಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ತೆಗೆಯಲಾಗಿದೆ ಎಂಬ ದೂರುಗಳು ನಮಗೆ ಬಂದಿದೆ ಎಂದಿರುವ ಅವರು, ಕೆ-ಸೆಟ್ ವಿದ್ಯಾರ್ಥಿಗಳು ಎಷ್ಟು ಉತ್ತರಗಳನ್ನು ಬರೆದಿದ್ದಾರೆ ಎಂಬುದನ್ನು ಉತ್ತರ ಪತ್ರಿಕೆಯಲ್ಲಿ ನಮೂದಿಸಲು ಸೂಚಿಸಬೇಕು. ಪರೀಕ್ಷಾ ಸಭಾಂಗಣ, ಮೌಲ್ಯಮಾಪನ ಕೇಂದ್ರ ಮತ್ತು ಉತ್ತರ ಪತ್ರಿಕೆ ಸಂಗ್ರಹ ವಿಭಾಗದಲ್ಲಿ ಸಿಸಿ ಕ್ಯಾಮರಾಗಳನ್ನು ತಕ್ಷಣವೇ ಅಳವಡಿಸಬೇಕು. ಈ ಹಿಂದೆ ಕೆ-ಸೆಟ್ ನಡೆಸುವ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಮೇಲ್ವಿ ಚಾರಣಾ ಸಮಿತಿ ರಚಿಸಲಾಗಿತ್ತು. ಅದೇ ರೀತಿ ಮೇಲ್ವಿ ಚಾರಣಾ ಸಮಿತಿಯನ್ನು ಮುಂದಿನ ದಿನಗಳಲ್ಲಿ ರಚಿಸಬೇಕು ಎಂದು ಆಗ್ರಹಿಸಿರುವ ಅವರು, ತಮ್ಮ ಈ ಪತ್ರಕ್ಕೆ ತಕ್ಷಣವೇ ಸ್ಪಷ್ಟೀಕರಣವನ್ನು ಕೊಟ್ಟು, ಮರುಪರೀಕ್ಷೆ ಯನ್ನು ನಡೆಸಬೇಕು. ಇಲ್ಲವಾದಲ್ಲಿ ಕೆ-ಸೆಟ್‍ನಲ್ಲಿ ನಡೆಸುತ್ತಿರುವ ಅಕ್ರಮ ಹಾಗೂ ಕಳೆದ 2 ವರ್ಷದಲ್ಲಿ ಯಾವುದೇ ಪ್ರಕ್ರಿಯೆಯನ್ನೂ ನಡೆಸದೆ 400ಕ್ಕಿಂತ ಹೆಚ್ಚು ಡಿ ಗ್ರೂಪ್ ನೌಕರರನ್ನು ಅಕ್ರಮವಾಗಿ ನೇಮಕ ಮಾಡಿರುವ ವಿಚಾರ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡು ತ್ತೇನೆ ಎಂದು ಸಂಸದ ಪ್ರತಾಪ್‍ಸಿಂಹ ಎಚ್ಚರಿಸಿದ್ದಾರೆ.

Translate »