ಮುಡಾದಿಂದ ಮೈಸೂರಿನ 3 ಕಡೆ ಬಹುಮಹಡಿ ವಸತಿ ಸಮುಚ್ಛಯ
ಮೈಸೂರು

ಮುಡಾದಿಂದ ಮೈಸೂರಿನ 3 ಕಡೆ ಬಹುಮಹಡಿ ವಸತಿ ಸಮುಚ್ಛಯ

August 12, 2021

ಮೈಸೂರು,ಆ.11-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹತ್ವಾಕಾಂಕ್ಷಿ ಗುಂಪು ಮನೆ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ.
ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಸೂರು ಕಲ್ಪಿಸುವ ಮಹದುದ್ದೇಶದಿಂದ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರವು ನಾಲ್ಕು ವರ್ಷದ ಹಿಂದೆಯೇ ಯೋಜನೆ ರೂಪಿಸಿತ್ತಾದರೂ, ಮನೆ ಹಂಚಿಕೆ, ದರ ನಿಗದಿ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ನಿಗದಿ ಪಡಿಸುವ ಪ್ರಕ್ರಿಯೆ ವಿಳಂಬವಾದ ಕಾರಣ, ಸರ್ಕಾರದ ಹಂತದಲ್ಲಿ ಅನುಮೋದನೆ ಪಡೆಯುವುದು ತಡವಾಯಿತು.

ಮುಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೆಚ್.ವಿ. ರಾಜೀವ್, ಆಸಕ್ತಿ ವಹಿಸಿ ವಸತಿ ಬಡಾ ವಣೆ ರಚಿಸಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಭೂಮಿ ಲಭ್ಯವಾಗದ ಕಾರಣ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಹಾಗೂ 50:50ರ ಅನುಪಾತದಲ್ಲಿ ಭೂಮಿ ಪಡೆಯಲು ರೈತರ ಮನವೊಲಿಕೆಗೆ ಕಾಲಾವಕಾಶ ಬೇಕಾಗಿರುವ ಕಾರಣ, ಬೆಂಗಳೂರಿನ ಬಿಡಿಎ ನಿರ್ಮಿಸಿರುವಂತೆ ಬಹುಮಹಡಿ ಕಟ್ಟಡ (ವರ್ಟಿಕಲ್)ಗಳನ್ನು ನಿರ್ಮಿಸಿ ಮನೆಗಳನ್ನು ಹಂಚಿಕೆ ಮಾಡದೇ, ಈಗಿರುವ ನಿವೇಶನಗಳ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿ ಯಾದ ಫಲವಾಗಿ ಗುಂಪು ಮನೆ ಯೋಜನೆ ಅನುಷ್ಠಾನಕ್ಕೆ ಈಗ ಕಾಲ ಕೂಡಿಬಂದಿದೆ.

ಪ್ರಮುಖ 3 ಬಡಾವಣೆ: ವಿಜಯನಗರ 2ನೇ ಹಂತದ ರಿಂಗ್ ರಸ್ತೆ ಬಳಿ 4 ಎಕರೆ ಪ್ರದೇಶದಲ್ಲಿ 14 ಅಂತಸ್ತಿನ 2 ಬ್ಲಾಕ್‍ಗಳಲ್ಲಿ 560 ಮನೆ, ದಟ್ಟಗಳ್ಳಿಯ 3.7 ಎಕರೆ ಜಾಗದಲ್ಲಿ 392 ಮನೆ ಹಾಗೂ ಸಾತಗಳ್ಳಿ ಬಡಾವಣೆಯಲ್ಲಿ 1008 ಮನೆ ಸೇರಿದಂತೆ ಒಟ್ಟು 1960 ಮನೆ (ಯೂನಿಟ್)ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಮೂರೂ ಬಡಾವಣೆಗಳೂ ಸಹ ರಿಂಗ್ ರಸ್ತೆ ಒಳಗೆ ಜನವಸತಿ ಪ್ರದೇಶವಾಗಿದ್ದು, ಗುಂಪು ಮನೆ ಯೋಜನೆಗೆ ಸೂಕ್ತ ಸ್ಥಳಗಳಾಗಿವೆ.

453 ಕೋಟಿ ರೂ. ವೆಚ್ಚ: ವಿಜಯನಗರದಲ್ಲಿ 2 ಬೆಡ್ ರೂಂ ಫ್ಲಾಟ್‍ನ 3 ಬ್ಲಾಕ್, ದಟ್ಟಗಳ್ಳಿಯಲ್ಲಿ 2 ಬೆಡ್ ರೂಂನ 2 ಬ್ಲಾಕ್ ಹಾಗೂ ಸಾತಗಳ್ಳಿಯಲ್ಲಿ 1 ಬೆಡ್ ರೂಂನ 3 ಬ್ಲಾಕ್‍ಗಳೊಂದಿಗೆ ಎಲ್ಲೆಡೆ 14 ಅಂತಸ್ತಿನ ಕಟ್ಟಡ ತಲೆ ಎತ್ತಲಿದ್ದು, ಈ ಯೋಜನೆಗೆ ಒಟ್ಟಾರೆ 452 ಕೋಟಿ, 94 ಲಕ್ಷದ 91 ಸಾವಿರದ 633 ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಮನೆಗಳ ಅಂದಾಜು ದರ: ವಿಜಯನಗರ ಟೈಪ್-1ರ ಬ್ಲಾಕ್‍ನಲ್ಲಿ ನಿರ್ಮಿಸುವ 2 ಬಿಹೆಚ್‍ಕೆ ಮನೆ ಯೊಂದಕ್ಕೆ 29.94 ಲಕ್ಷ ರೂ., ಟೈಪ್-2ರ ಬ್ಲಾಕ್‍ನ 2 ಬಿಹೆಚ್‍ಕೆಗೆ 32.91 ಲಕ್ಷ ರೂ., ದಟ್ಟಗಳ್ಳಿಯ ಎರಡೂ ಬ್ಲಾಕ್‍ನ 2 ಬಿಹೆಚ್‍ಕೆಗೆ 33.80 ಲಕ್ಷ ರೂ. ಹಾಗೂ ಸಾತಗಳ್ಳಿಯ ಮೂರೂ ಬ್ಲಾಕ್‍ನ 1 ಬಿಹೆಚ್‍ಕೆ ಮನೆಗೆ 14.83 ಲಕ್ಷ ರೂ. ಬೆಲೆ ನಿಗದಿ ಯಾಗಬಹುದೆಂದು ಅಂದಾಜಿಸಲಾಗಿದೆ.

ಡಿಪಿಆರ್ ಸಿದ್ಧ: ಮೂರೂ ಕಡೆ ಹೈರೈಸ್ ಬಿಲ್ಡಿಂಗ್ ಗಳನ್ನು ನಿರ್ಮಿಸಲು ಮುಡಾಗೆ ಖಾಸಗಿ ಕನ್‍ಸ್ಟ್ರಕ್ಷನ್ ಕಂಪನಿಯೊಂದು ಸಮಗ್ರ ಯೋಜನಾ ವರದಿ (ಆPಖ) ಸಿದ್ಧಪಡಿಸಿಕೊಟ್ಟಿದ್ದು, ಅದರನ್ವಯ ಭೂಮಿ ಬೆಲೆಯೂ (ಕನಿಷ್ಠ ದರ ಪರಿಗಣಿಸಿ) ಸೇರಿದಂತೆ 14 ಮಹಡಿಯ 8 ಬ್ಲಾಕ್ ಹೈರೈಸ್ ಬಿಲ್ಡಿಂಗ್ ನಿರ್ಮಿಸಲು ಒಟ್ಟು 453 ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.

ಎರಡೆರಡು ಲಿಫ್ಟ್, ಮೆಟ್ಟಿಲು: ಪ್ರತೀ ಬ್ಲಾಕ್‍ನಲ್ಲೂ ವಿಶಾಲವಾದ 2 ಮೆಟ್ಟಿಲು (ಸ್ಟೇರ್‍ಕೇಸ್) ಹಾಗೂ ಎರಡು ಲಿಫ್ಟ್‍ಗಳು, ಬೇಸ್‍ಮೆಂಟ್‍ನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ, ಎಸ್‍ಟಿಪಿ, ಓಪನ್ ಸ್ಪೇಸ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸ ಲಾಗುವುದು ಎಂದು ಡಿಪಿಆರ್‍ನಲ್ಲಿ ನಮೂದಿಸಲಾಗಿದೆ.

ಮುಡಾ ಸಭೆಯಲ್ಲಿ ಮಂಡನೆ: ಸಂಕಲ್ಪ, ಬ್ರಿಗೇಡ್ ಅಪಾರ್ಟ್‍ಮೆಂಟ್ ಮಾದರಿಯಲ್ಲಿ ನಿರ್ಮಿಸಲು ದ್ದೇಶಿಸಿರುವ ಗುಂಪು ಮನೆ ಯೋಜನೆಯ ಡಿಪಿಆರ್ ಅನ್ನು ಆಗಸ್ಟ್ 13ರಂದು ನಡೆಯಲಿರುವ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಲಿದ್ದು, ಅನು ಮೋದನೆಗೊಂಡ ನಂತರ ಸರ್ಕಾರಕ್ಕೆ ಕಳುಹಿಸಲು ಮುಡಾ ತಯಾರಿ ನಡೆಸಿದೆ.

2 ವರ್ಷದಲ್ಲಿ ಪೂರ್ಣ: ಸರ್ಕಾರ ಗ್ರೀನ್ ಸಿಗ್ನಲ್ ನೀಡಿದಲ್ಲಿ 2 ವರ್ಷದೊಳಗಾಗಿ ಯೋಜನೆ ಪೂರ್ಣ ಗೊಳಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿ ಆರಂಭ ವಾಗುತ್ತಿದ್ದಂತೆಯೇ ಮನೆಗಳ ಹಂಚಿಕೆ ಪ್ರಕ್ರಿಯೆ ಆರಂಭಿಸಿ ಫಲಾನುಭವಿಗಳಿಂದ ಬೇಸ್‍ಮೆಂಟ್, ಲಿಂಟಲ್ ಲೆವೆಲ್ ಹಾಗೂ ಸ್ವಾಧೀನದ ಹಂತದಲ್ಲಿ 3 ಕಂತುಗಳಲ್ಲಿ ಮನೆಗಳಿಗೆ ನಿಗದಿಪಡಿಸಿದ ದರದ ಹಣವನ್ನು ಪಾವತಿಸಿಕೊಳ್ಳಲು ನಿರ್ಧರಿಸಲಾಗಿದೆ.

ನೋ ಲಾಸ್-ನೋ ಪ್ರಾಫಿಟ್: 2 ಬಿಹೆಚ್‍ಕೆ ಫ್ಲಾಟ್‍ಗಳಿಗೆ (30×40 ಅಡಿ) 29.94 ಲಕ್ಷ, 32.91 ಲಕ್ಷ ಹಾಗೂ 33.80 ಲಕ್ಷ ರೂ. ಮತ್ತು 1 ಬಿಹೆಚ್‍ಕೆ (20×30 ಅಡಿ) ಫ್ಲಾಟ್‍ಗೆ 14.83 ಲಕ್ಷ ರೂ. ದರದಂತೆ ಒಟ್ಟು 1960 ಮನೆಗಳ ಮಾರಾಟದಿಂದ ಮುಡಾಗೆ 452.94 ಕೋಟಿ ರೂ. ಹಣ ಸಂದಾಯ ವಾಗುವುದರಿಂದ ಯೋಜನೆಗೆ ವೆಚ್ಚವಾಗಬಹು ದೆಂದು ಅಂದಾಜಿಸಿರುವ ಹಣಕ್ಕೆ ಸರಿಸಮವಾಗ ಲಿದೆ. ಇದರಲ್ಲಿ ಯಾವುದೇ ಲಾಭ-ನಷ್ಟವಿಲ್ಲದೇ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಿ ಕೊಡಲು ಪ್ರಾಧಿಕಾರ ಮುಂದಾಗಿದೆ.

ಸಾಲ ಸೌಲಭ್ಯ: ಮನೆ ಹಂಚಿಕೆಯಾಗುತ್ತಿದ್ದಂತೆಯೇ ಬ್ಯಾಂಕ್‍ನಿಂದ ಶೇ. 70ರಷ್ಟು ಸಾಲ ಸೌಲಭ್ಯ (ಅವರ ಮರುಪಾವತಿ ಸಾಮಥ್ರ್ಯದನುಸಾರ)ವೂ ದೊರೆ ಯಲಿದ್ದು, ಸರ್ಕಾರದಿಂದಲೂ ಆರ್ಥಿಕ ಸಹಾಯ ಧನ ಸಿಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಬೇಡಿಕೆ ಜಾಸ್ತಿ ಇದೆ: ಮೈಸೂರು ಸುತ್ತಮುತ್ತ ಭೂಮಿ ಬೆಲೆ ಗಗನಕ್ಕೇರಿರುವುದರಿಂದ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಳ್ಳುವುದು ಕನಸಿನ ಮಾತಾಗಿರುವುದರಿಂದ ಖಾಸಗಿ ಡೆವಲಪರ್‍ಗಳು ರಿಂಗ್ ರಸ್ತೆಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‍ಮೆಂಟ್ ಖರೀದಿಗೆ ಮುಗಿ ಬೀಳುತ್ತಿರುವುದರಿಂದ ರಿಂಗ್ ರಸ್ತೆ ಒಳಭಾಗ ದಲ್ಲೇ ತಲೆ ಎತ್ತುವ ಗುಂಪು ಮನೆಗಳಿಗೆ ಭಾರೀ ಬೇಡಿಕೆ ಇದ್ದು, ಅತೀ ಬೇಗ ಮಾರಾಟವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

Translate »