ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು
News

ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾರದು

August 11, 2021

ಬೆಂಗಳೂರು, ಆ.10(ಕೆಎಂಶಿ)-ಆರ್ಥಿಕ ಅಪರಾಧ, ಮಾದಕ ವಸ್ತು ಹಾಗೂ ಡಾರ್ಕ್ ವೆಬ್ ಗಳ ಮೇಲೆ ಹದ್ದಿನಕಣ್ಣಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರಬೇಕೇ ಹೊರತು ರಿಯಲ್ ಎಸ್ಟೇಟ್ ಕೇಂದ್ರಗಳಾಗಬಾ ರದು, ಸಮಾಜಕ್ಕೆ ಮಾರಕವಾಗುವ ಪ್ರಕರಣಗಳಲ್ಲಿ ಶಾಮೀಲಾಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ, ಅದಕ್ಕೆ ಈಗಿ ನಿಂದಲೇ ಸಿದ್ಧರಾಗಿ. ಜೂಜು, ಡಾರ್ಕ್‍ವೆಬ್ ನಿಂದಾಗಿ ಯುವಜನಾಂಗ ಅಡ್ಡ ದಾರಿ ಹಿಡಿದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುತ್ತಿದೆ.
ಸಮಾಜಘಾತುಕರು ಒಂದಲ್ಲಾ ಒಂದು ಮಾರ್ಗಗಳನ್ನು ಅನುಸರಿಸಿ ಅಮಾಯಕರು ಮತ್ತು ಯುವಜನರನ್ನು ತಪ್ಪು ದಾರಿಗೆ ಸೆಳೆದು ಲೂಟಿ ಮಾಡುತ್ತಿದ್ದಾರೆ. ಮಾದಕ ದ್ರವ್ಯಗಳ ನಿರ್ಮೂಲನೆಗೆ ನೀವು ದೊಡ್ಡದಾಗಿ ಕ್ರಮಕೈಗೊಳ್ಳುತ್ತಿದ್ದೀರಿ, ಅದನ್ನು ಮತ್ತಷ್ಟು ಬಿಗಿಗೊಳಿಸಿ. ಈ ಪಿಡುಗನ್ನು ಬೇರು ಮಟ್ಟದಿಂದ ಕಿತ್ತುಹಾಕಿ ಎಂದು ಸಲಹೆ ಮಾಡಿದರು.

ಈ ಮಾಫಿಯಾ ನಮ್ಮ ಸಮಾಜವನ್ನು ಹಾಳು ಮಾಡುತ್ತಿದೆ, ಈ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಾವುದೇ ರಾಜಿ ಬೇಡ ಎಂದು ಕಿವಿಮಾತು ಹೇಳಿದರು. ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಬೇಕು, ಅಪರಾಧ ವೈರಸ್ ಇದ್ದ ಹಾಗೆ, ಇದನ್ನು ಸಶಕ್ತವಾಗಿ ಸದೆ ಬಡಿಯಬೇಕು, ಆಗ ಮಾತ್ರ ಹತೋಟಿ ಸಾಧ್ಯ ಎಂದರು. ನಮ್ಮಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳ ತಂಡ ಇದೆ, ಜನರು ಶಾಂತಿ-ನೆಮ್ಮದಿಯ ಜೀವನ ಸಾಗಿಸುವ ವಾತಾವರಣ ಸೃಷ್ಟಿಸಬೇಕು. ಅಪರಾಧವನ್ನು ಸಹಿ ಸಲು ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡು ವುದು ಸರ್ಕಾರದ ಪ್ರಥಮ ಆದ್ಯತೆ. ಆಂತರಿಕ ಭದ್ರತಾ ವಿಭಾಗವನ್ನು ಬಲಪಡಿಸಿ ಎಂದರು. ಕೋವಿಡ್-19 ಸಂಭಾವ್ಯ ಮೂರನೇ ಅಲೆ ತಡೆಗಟ್ಟಲು ಕ್ರಮ ವಹಿಸಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚು ನಿಗಾ ವಹಿಸಬೇಕು. ಹಿರಿಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಗಡಿಯ ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ತಪಾಸಣೆ ನಡೆಸಬೇಕು ಎಂದರು.

Translate »