ಪಟ್ಟದ ಆನೆ ವಿಕ್ರಮನಿಗೆ ಅಲ್ಪ ಮದ!
ಮೈಸೂರು

ಪಟ್ಟದ ಆನೆ ವಿಕ್ರಮನಿಗೆ ಅಲ್ಪ ಮದ!

September 23, 2021

ಮೈಸೂರು, ಸೆ.22(ಎಂಟಿವೈ)- ದಸರಾ ಮಹೋತ್ಸವದಲ್ಲಿ ಅರ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಟ್ಟದ ಆನೆ ಯಾಗಿ ಪಾಲ್ಗೊಳ್ಳಬೇಕಾಗಿದ್ದ ವಿಕ್ರಮನಿಗೆ ಕಾಣಿಸಿಕೊಂಡಿದ್ದ ಅಲ್ಪ ಪ್ರಮಾಣದಲ್ಲಿ ಮದ ಇನ್ನು ನಿವಾರಣೆಯಾಗದೇ ಇದ್ದು, ಪಶು ವೈದ್ಯರು ಹಾಗೂ ನುರಿತ ಮಾವುತರ ಸಲಹೆ ಮೇರೆಗೆ ದೇಹವನ್ನು ತಂಪಾಗಿಸಲು ಬಾಳೆಕಂದು ನೀಡಲಾಗುತ್ತಿದೆ.

2021ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ವಿಕ್ರಮ(58) ಈ ವರ್ಷವೂ ಪಟ್ಟದ ಆನೆಯಾಗಿ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ದುಬಾರೆ ಆನೆ ಶಿಬಿರದಲ್ಲಿದ್ದ ವಿಕ್ರಮನಿಗೆ ಜೂನ್‍ನಲ್ಲಿಯೇ ಮದ ಬಂದಿತ್ತು. ಸಾಮಾನ್ಯವಾಗಿ 3 ತಿಂಗಳ ಅವಧಿಯೊಳಗೆ ಮದ ಇಳಿಯುತ್ತದೆ. ಆದರೆ ವಿಕ್ರಮನಿಗೆ ನಾಲ್ಕು ತಿಂಗಳಾದರೂ ಅಲ್ಪ ಪ್ರಮಾಣದಲ್ಲಿ ಮದ ಇದೆ. ಆದರೂ ಸೌಮ್ಯ ಸ್ವಭಾವದಿಂದಲೇ ವರ್ತಿಸುತ್ತಿದೆ. ಅಲ್ಲದೆ ಪ್ರತಿದಿನ ಎರಡು ಬಾರಿಯೂ ಸಹಜ ಸ್ಥಿತಿಯಲ್ಲಿರುವಂತೆ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿರುವುದು ಸಮಾಧಾನಕರ ಸಂಗತಿ.

ದಸರಾ ಆನೆಗಳಲ್ಲಿ ಅಂಬಾರಿ ಆನೆ ಹೊರತುಪಡಿಸಿದರೆ, ಪಟ್ಟದ ಆನೆಯ ಪಾತ್ರ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಪಟ್ಟದ ಆನೆಯಾಗಿ ಸೌಮ್ಯ ಸ್ವಭಾವದ ಆನೆಯನ್ನೇ ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆ.ಗುಡಿ (ಕ್ಯಾತೇಶ್ವರ ಗುಡಿ) ಆನೆ ಶಿಬಿರದಲ್ಲಿನ ಗಜೇಂದ್ರ ಆನೆ ಪಟ್ಟದ ಆನೆ ಯಾಗಿ ಜವಾಬ್ದಾರಿ ನಿಭಾಯಿಸುತ್ತಿತ್ತು. ಮದವೇರಿ ದಸರಾ ಆನೆ ಶ್ರೀರಾಮ ಹಾಗೂ ಮಾವುತ ಗಣಪತಿಯನ್ನು ಕೊಂದ ಹಿನ್ನೆಲೆ ಹಾಗೂ ಹೊಸ ಮಾವುತ ಶಂಕರ್ ಅನಾರೋಗ್ಯದಿಂದ ಮೃತಪಟ್ಟ ಕಾರಣ ಗಜೇಂದ್ರ ದಸರಾ ಮಹೋತ್ಸವದಿಂದ ದೂರವುಳಿಯ ಬೇಕಾಯಿತು. ಗಜೇಂದ್ರನಿಂದ ತೆರವಾದ ಪಟ್ಟದ ಆನೆ ಸ್ಥಾನವನ್ನು 2015ರಿಂದಲೂ ವಿಕ್ರಮ ನಿಭಾಯಿಸುತ್ತಿದ್ದು, ತನ್ನ ಸೌಮ್ಯ ಸ್ವಭಾವ ದಿಂದಲೇ ಮನ್ನಣೆ ಗಳಿಸಿದೆ. ಈ ಬಾರಿಯೂ ಪಟ್ಟದ ಆನೆಯಾಗಿ ಪಾಲ್ಗೊಳ್ಳಲು ವಿಕ್ರಮ ಆನೆ ಆಯ್ಕೆಯಾಗಿತ್ತು.

ಮದ ಇದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಸಾಮಾನ್ಯ ಸ್ಥಿತಿಯಲ್ಲಿರುವಂತೆ ವರ್ತಿಸುತ್ತಿದೆ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಪಶುವೈದ್ಯರು, ಮಾವುತ, ಕಾವಾಡಿಗಳಿಗೂ ಸಮಾಧಾನವನ್ನುಂಟು ಮಾಡಿದೆ. ವಿಕ್ರಮನಿಗೆ ಅತ್ಯಂತ ಸಣ್ಣ ಪ್ರಮಾಣದಲ್ಲಿ ಮದ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಮಾವುತರು ಅಭಿಪ್ರಾಯಪಟ್ಟಿದ್ದಾರೆ.

Translate »