ತಲಕಾಡು ಬಳಿ ಬೋನಿಗೆ ಬಿದ್ದ ಗಂಡು ಚಿರತೆ
ಮೈಸೂರು

ತಲಕಾಡು ಬಳಿ ಬೋನಿಗೆ ಬಿದ್ದ ಗಂಡು ಚಿರತೆ

May 23, 2020

ಮೈಸೂರು, ಮೇ 22(ಎಂಟಿವೈ)- ಟಿ.ನರಸೀಪುರ ತಾಲೂ ಕಿನ ಕುರುಬಾಳನಹುಂಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ 2 ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸಿ ಉಪಟಳ ನೀಡುತ್ತಿದ್ದ ಚಿರತೆಯೊಂದು ಶುಕ್ರವಾರ ಮುಂಜಾನೆ ಬೋನಿಗೆ ಬಿದ್ದಿದೆ. ತಲಕಾಡು ಸಮೀಪದ ಕುರುಬಾಳನಹುಂಡಿಯಲ್ಲಿ ಎರಡು ತಿಂಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿತ್ತು. ಗ್ರಾಮದಲ್ಲಿ ಹಲವು ನಾಯಿಗಳನ್ನು ಹೊತ್ತೊಯ್ದಿದ್ದ ಚಿರತೆ ಪದೇ ಪದೇ ಗ್ರಾಮದ ಆಸುಪಾಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. 6 ಮೇಕೆ, ಹಲವು ಸಾಕು ನಾಯಿಗಳನ್ನು ತಿಂದಿತ್ತಲ್ಲದೆ, ಒಂದು ಕರು ಮೇಲೆ ದಾಳಿ ಮಾಡಿ, ಗಾಯ ಗೊಳಿಸಿದ್ದು, ಕರು ಚಿಕಿತ್ಸೆ ಫಲಕಾರಿ ಯಾಗದೇ ಮರು ದಿನ ಮೃತಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಜಾಡು ಹಿಡಿದು ಪರಿಶೀಲನೆ ನಡೆಸಿದ್ದರು. ಗ್ರಾಮಕ್ಕೆ ನುಗ್ಗುತ್ತಿದ್ದ ಚಿರತೆಯನ್ನು ಸೆರೆ ಹಿಡಿಯಲು 2 ಬೋನ್ ಇಡಲಾಗಿತ್ತು. ಕುರುಬಾಳನಹುಂಡಿ ಗ್ರಾಮದ ರಾಜು ಎಂಬುವರ ಜಮೀನಿನಲ್ಲಿ ಇಡಲಾಗಿದ್ದ ಬೋನ್ ನಲ್ಲಿದ್ದ ನಾಯಿಯನ್ನು ಬೇಟೆಯಾಡಲು ಬಂದ 4ವರ್ಷದ ಗಂಡು ಚಿರತೆ ಇಂದು ಮುಂಜಾನೆ ಸೆರೆ ಸಿಕ್ಕಿದೆ. ಬೋನ್‍ನೊಳಗೆ ಸಿಲುಕಿದ್ದ ಚಿರತೆ ತಪ್ಪಿಸಿಕೊಳ್ಳಲು ಚೀರಾಡುತ್ತಿದ್ದುದ್ದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆರ್‍ಎಫ್‍ಓ ಎಸ್.ಗಿರೀಶ್, ಡಿಆರ್‍ಎಫ್‍ಓ ಉಮೇಶ್, ಅರಣ್ಯ ರಕ್ಷಕರಾದ ಮಹದೇವು, ಲೋಕೇಶ್, ನವೀನ್, ರವಿ ಹಾಗೂ ಮಹೇಶ್ ತೆರಳಿ ಚಿರತೆಯಿದ್ದ ಬೋನ್ ಅನ್ನು ಟ್ರಾಕ್ಟರ್‍ನಲ್ಲಿ ಕೊಂಡೊಯ್ದರು. ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಬಂಡೀಪುರ ಅಭಯಾರಣ್ಯದ ಮೂಲುಹೊಳೆ ವಲಯಕ್ಕೆ ಕೊಂಡೊಯ್ದು ಬಿಡಲಾಗಿದೆ