ಸರಸ್ವತಿಪುರಂ ಠಾಣೆಯಲ್ಲಿ ಸಹೋದ್ಯೋಗಿ ಸೀಮಂತ ಭಾವ-ಬಾಂಧವ್ಯಕ್ಕೆ ಸಾಕ್ಷಿಯಾದ ಸಮಾರಂಭ
ಮೈಸೂರು

ಸರಸ್ವತಿಪುರಂ ಠಾಣೆಯಲ್ಲಿ ಸಹೋದ್ಯೋಗಿ ಸೀಮಂತ ಭಾವ-ಬಾಂಧವ್ಯಕ್ಕೆ ಸಾಕ್ಷಿಯಾದ ಸಮಾರಂಭ

July 10, 2018

ಮೈಸೂರು: ಗಲಾಟೆ, ಗದ್ದಲ, ಕಳ್ಳತನ, ಸುಲಿಗೆ ಹೀಗೆ ಒಂದಿಲ್ಲೊಂದು ಕೇಸುಗಳಿಂದ ಪೊಲೀಸರು ಹೈರಾಣಾಗಿರುತ್ತಾರೆ. ದೂರುದಾರರು, ಆರೋಪಿಗಳ ವಿಚಾರಣೆಯಿಂದ ಠಾಣೆ ಗದ್ದಲದ ಗೂಡಾಗಿರುತ್ತದೆ. ಇದೆಲ್ಲದಕ್ಕೂ ಒಗ್ಗಿರುವ ಪೊಲೀಸರು, ಭಾವಜೀವಿಗಳಲ್ಲ ಎಂಬ ಆರೋಪವನ್ನೂ ಸಹಿಸುತ್ತಾರೆ.

ಆದರೆ ಇಂದು ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಠಾಣೆಯ ಮಹಿಳಾ ಸಿಬ್ಬಂದಿ, ತುಂಬು ಗರ್ಭಿಣ ರಕ್ಷಿತಾ ಅವರಿಗೆ ಸಹೋದ್ಯೋಗಿಗಳು, ಸೀಮಂತ ನೆರವೇರಿಸಿ, ಹರಸಿದರು. ರಕ್ಷಿತಾ ಅವರ ಪತಿ ತ್ರಿಮೂರ್ತಿ ಅವರನ್ನೂ ಠಾಣೆಗೆ ಕರೆಸಿ, ದಂಪತಿಗೆ ಫಲತಾಂಬೂಲ, ಉಡುಗೊರೆ ನೀಡಿ, ತುಂಬು ಮನಸ್ಸಿನಿಂದ ಒಳಿತಾಗಲೆಂದು ಹಾರೈಸಿ, ಬೀಳ್ಕೊಟ್ಟರು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಂದೇ ಕುಟುಂಬದ ಸದಸ್ಯರಂತೆ ಈ ಸಂದರ್ಭವನ್ನು ಸಂಭ್ರಮಿಸಿದರು.

ಪೊಲೀಸ್ ಠಾಣೆಯ ಬಗ್ಗೆ ಸಮಾಜದಲ್ಲಿ ವಿಭಿನ್ನ ಅಭಿಪ್ರಾಯವಿರುತ್ತದೆ. ಆದರೆ ನಮ್ಮಲ್ಲೂ ಬಾಂಧವ್ಯ, ಭಾವನೆಗಳಿಗೆ ಸ್ಪಂದಿಸುವ ಮನಸ್ಸಿದೆ. ಹಾಗೆಯೇ ನಮ್ಮ ಕುಟುಂಬದ ಹೆಣ್ಣು ಮಗಳಂತಿರುವ ರಕ್ಷಿತಾ ಅವರಿಗೆ ಸೀಮಂತ ನೆರವೇರಿಸಿ, ಹರಸಿದ್ದೇವೆ ಎಂದು ಇನ್ಸ್‍ಪೆಕ್ಟರ್ ಎನ್.ಸಿ.ನಾಗೇಗೌಡ `ಮೈಸೂರು ಮಿತ್ರ’ನೊಂದಿಗೆ ಸಂತಸ ಹಂಚಿಕೊಂಡರು.

Translate »