ಎರಡನೇ ಮದುವೆಯಾಗುತ್ತಿದ್ದ ಹೆಡ್ ಕಾನ್‍ಸ್ಟೇಬಲ್ ಪೊಲೀಸ್ ಠಾಣೆಗೆಳೆದೊಯ್ದ ಪತ್ನಿ!
ಮೈಸೂರು

ಎರಡನೇ ಮದುವೆಯಾಗುತ್ತಿದ್ದ ಹೆಡ್ ಕಾನ್‍ಸ್ಟೇಬಲ್ ಪೊಲೀಸ್ ಠಾಣೆಗೆಳೆದೊಯ್ದ ಪತ್ನಿ!

July 10, 2018

ಮೈಸೂರು:  ದೇವಸ್ಥಾನವೊಂದರಲ್ಲಿ ಎರಡನೇ ಮದುವೆಯಾಗುತ್ತಿದ್ದ ಹೆಡ್‍ಕಾನ್‍ಸ್ಟೇಬಲ್ ಓರ್ವ ರೆಡ್‍ಹ್ಯಾಂಡಾಗಿ ಪತ್ನಿಗೆ ಸಿಕ್ಕಿ ಬಿದ್ದಿರುವ ಪ್ರಸಂಗ ಮೈಸೂರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಮೈಸೂರಿನ ಸಿಎಆರ್‍ನಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜಾಚಾರಿ ಅವರೇ ಪತ್ನಿ, ಇಬ್ಬರು ಮಕ್ಕಳಿದ್ದರೂ ಮತ್ತೊಂದು ಮದುವೆಯಾಗುತ್ತಿದ್ದವರು. ಭಾನುವಾರ ಬೆಳಿಗ್ಗೆ ವಿಜಯನಗರ 2ನೇ ಹಂತದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಪಂಚೆ, ಬಿಳಿ ಷರ್ಟ್, ಪೇಟ ತೊಟ್ಟು ಹಸೆಮಣೆ ಮೇಲೆ ಕುಳಿತಿದ್ದ ರಾಜಾಚಾರಿ, ಇನ್ನೇನು ವಧುವಿಗೆ ತಾಳಿ ಕಟ್ಟುವುದರಲ್ಲಿದ್ದರು.ಹೇಗೋ ಮಾಹಿತಿ ತಿಳಿದ ಅವರ ಪತ್ನಿ ಸವಿತಾ, ದೇವಸ್ಥಾನಕ್ಕೆ ಎಂಟ್ರಿ ಕೊಟ್ಟರು. ಸುಮಾರು 40 ಮಂದಿಯೊಂದಿಗೆ ಆಗಮಿಸಿದ ಅವರು ಪತಿಯ ವಿರುದ್ಧ ಹರಿಹಾಯ್ದರು.

ಜಗಳ ಆರಂಭವಾಗುತ್ತಿದ್ದಂತೆಯೇ ಮದುವೆಗೆ ಬಂದಿದ್ದವರು ಚೆಲ್ಲಾಪಿಲ್ಲಿಯಾಗಿ ಜಾಗ ಖಾಲಿ ಮಾಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಠಾಣೆ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಿದರಾದರೂ, ಸವಿತಾ, ಬೆಂಬಲಿಗರು ಮತ್ತು ಸಂಬಂಧಿಕರ ನೆರವಿನಿಂದ ಪತಿಯನ್ನು ನಜರ್‍ಬಾದ್‍ನಲ್ಲಿರುವ ಪೊಲೀಸ್ ಕಮೀಷ್ನರ್ ಕಚೇರಿಗೆ ಕರೆತಂದರು.

ಕಚೇರಿ ಆವರಣದಲ್ಲಿ ಆಕೆ ರಂಪ ಮಾಡಿ, ಹೈಡ್ರಾಮಾವೇ ನಡೆಯಿತು. ಪೊಲೀಸ್ ಕಮೀಷ್ನರ್‍ಗೆ ದೂರು ನೀಡಲು ಮುಂದಾದರು. ಆದರೆ ಪೊಲೀಸ್ ಕಮೀಷ್ನರ್ ಲಭ್ಯವಿಲ್ಲದ ಕಾರಣ, ಅವರು ವಿಜಯನಗರ ಠಾಣೆಗೆ ತೆರಳಿದರು. ತನ್ನನ್ನು ಮದುವೆಯಾಗಿ ಎರಡು ಮಕ್ಕಳಿವೆ, ಈಗ ವಿಚ್ಛೇದನ ಪಡೆದಿದ್ದೇನೆಂದು ಹೇಳಿ ಬೇರೆ ಮಹಿಳೆಯೊಂದಿಗೆ ಮದುವೆಯಾಗುತ್ತಿರುವ ಪತಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಸವಿತಾ ಒತ್ತಾಯಿಸಿದರು.

ಜೀವ ವಿಮಾ ಪಾಲಿಸಿ (LIC) ಮಾಡಿಸುತ್ತೇನೆಂದು ಪತ್ರವೊಂದಕ್ಕೆ ಸಹಿ ಮಾಡಿಸಿಕೊಂಡು ಅದನ್ನು ವಿವಾಹ ವಿಚ್ಛೇದನಕ್ಕೆ ಪ್ರಯತ್ನಿಸಿ, ನಾನು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂಬ ಕಾರಣವನ್ನೇ ಬಳಸಿಕೊಂಡು ನನಗೆ ಮೋಸ ಮಾಡಿದ್ದಾರೆ ಎಂದು ಸವಿತಾ ಆರೋಪಿಸಿದಳು.

ಅದಕ್ಕೆ ಪ್ರತಿಯಾಗಿ ರಾಜಾಚಾರಿ, ನಮ್ಮಿಬ್ಬರ ನಡುವೆ ಸಾಮರಸ್ಯವಿರಲಿಲ್ಲ. ಆದ್ದರಿಂದ ನಾವು ನ್ಯಾಯಾಲಯದಿಂದ ಕಾನೂನುಬದ್ಧವಾಗಿ ವಿವಾಹ ವಿಚ್ಛೇದನ ಪಡೆದಿದ್ದೇವೆ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಕೋರ್ಟ್ ವಿಚ್ಛೇದನ ಆದೇಶ ನೀಡಿದೆ ಎಂದು ಹೇಳಿ ದಾಖಲೆಗಳನ್ನು ನೀಡಿದರು.

ಈ ಸಂಬಂಧ ಇಬ್ಬರೂ ಮಾತಿನ ಚಕಮಕಿ ನಡೆಸಿದ ಪರಿಣಾಮ ಗದ್ದಲದ ವಾತಾವರಣ ಉಂಟಾಯಿತು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದಂತೆಯೇ ಠಾಣೆಗೆ ಆಗಮಿಸಿದ ಎನ್.ಆರ್. ವಿಭಾಗದ ಎಸಿಪಿ ಗೋಪಾಲ್ ಅವರು, ಇಬ್ಬರನ್ನೂ ಸಮಾಧಾನ ಪಡಿಸಿ, ನ್ಯಾಯಾಲಯದ ಮೂಲ ಪ್ರತಿಯೊಂದಿಗೆ ಸೋಮವಾರ(ಜು.9) ಬರುವಂತೆ ರಾಜಾಚಾರಿಗೆ ತಿಳಿಸಿದರು.
ಸವಿತಾ ನೀಡಿರುವ ಲಿಖಿತ ದೂರಿನನ್ವಯ ಎನ್‍ಸಿಆರ್ ಮಾಡಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಫೇಸ್‍ಬುಕ್‍ನಲ್ಲಿ ಫ್ರೆಂಡ್ ಆಗಿದ್ದ ಯುವತಿಯೊಂದಿಗೆ ಮದುವೆಯಾಗುತ್ತಿದ್ದ ರಾಜಾಚಾರಿ, ಪತ್ನಿಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾರಣ ಆ ಮದುವೆ ನಡೆಯಲಿಲ್ಲ.

Translate »