ಮೈಸೂರಲ್ಲಿ ಫೈರಿಂಗ್: ಟ್ಯಾಕ್ಸಿ ಚಾಲಕನಿಂದ ದೂರು
ಮೈಸೂರು

ಮೈಸೂರಲ್ಲಿ ಫೈರಿಂಗ್: ಟ್ಯಾಕ್ಸಿ ಚಾಲಕನಿಂದ ದೂರು

July 15, 2018

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸಂಘಟನೆ ಯೊಂದರ ಜಿಲ್ಲಾಧ್ಯಕ್ಷ, ನಾಲ್ಕು ಸುತ್ತು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ನಡೆದಿದೆ.

ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್‍ಗೌಡ, ಖಾಸಗಿ ಟ್ರಾವೆಲ್ ಏಜೆನ್ಸಿ ಯೊಂದರ ಕಾರು ಚಾಲಕ ರಘು ವಿಚಾರದಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಠಾಣೆ ಯಲ್ಲಿ ಭಾರತ ದಂಡ ಸಂಹಿತೆ 307, 323, 504 ಶಸ್ತ್ರಾಸ್ತ್ರ ಕಾಯ್ದೆ 25ರಡಿ ಎಫ್‍ಐಆರ್ ದಾಖಲಿಸಿ, ಸತೀಶ್ ಗೌಡನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಧ್ಯೆ ಸತೀಶ್ ಗೌಡ ಗುಂಡು ಹಾರಿಸಿದ್ದ ರಿವಾಲ್ವರ್, ಅದರ ಲೈಸೆನ್ಸ್ ಹಾಗೂ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸತೀಶ್ ಗೌಡರ ವಿರುದ್ಧ ದೂರು ನೀಡಿ ರುವ ಮೈಸೂರಿನ ಶಾರದಾದೇವಿ ನಗರ ನಿವಾಸಿ ರಘು, ಪ್ರಯಾಣಿಕರೊಬ್ಬರನ್ನು ಪಿಕ್ ಅಪ್ ಮಾಡಲೆಂದು ನಾನು ಕಾರಿನಲ್ಲಿ ವಿಜಯನಗರ 4ನೇ ಹಂತಕ್ಕೆ ಹೋಗಿದ್ದಾಗ ಶುಕ್ರವಾರ ರಾತ್ರಿ ಸುಮಾರು 11 ಗಂಟೆ ಸಮಯ ದಲ್ಲಿ ಮರಿಮಲ್ಲಪ್ಪ ಕಾಂಪೌಂಡ್ ಸಮೀಪ ಬಸವನಹಳ್ಳಿ ಮೇನ್ ರೋಡ್‍ನಲ್ಲಿ ಒಂದು ಟೊಯೋಟಾ ಇನ್ನೋವಾ ಕಾರು ನಿಂತಿತ್ತು. ಕುತೂಹಲದಿಂದ ನನ್ನ ಕಾರಿನ ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡಿದೆ. ಅತ್ತಲಿಂದ ಏನೂ ಪ್ರತಿಕ್ರಿಯೆ ಬರಲಿಲ್ಲ.

ಸತೀಶ್‍ಗೌಡ

ನಂತರ ಆ ಕಾರಿನ ಬಳಿ ನನ್ನ ವಾಹನದ ವೇಗ ತಗ್ಗಿಸಿ ಅತ್ತ ನೋಡಿದಾಗ ಕಾರಿನಲ್ಲಿದ್ದ ವ್ಯಕ್ತಿ ನನ್ನನ್ನು ಗದರಿಸಿ, ಏಕೆ ಡಿಮ್ ಅಂಡ್ ಡಿಪ್ ಮಾಡಿದೆ ಎಂದು ಪ್ರಶ್ನಿಸಿದ್ದಲ್ಲದೆ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆವೊಡ್ಡಿದ. ಅಲ್ಲದೆ ಆತ ಕಾರಿನಿಂದ ಇಳಿದು, ರಿವಾಲ್ವರ್ ತೆಗೆದು, ರಸ್ತೆ ಹಾಗೂ ಗಾಳಿಯಲ್ಲಿ ನಾಲ್ಕು ಬಾರಿ ಫೈರಿಂಗ್ ಮಾಡಿದ. ರಿವಾಲ್ವರ್ ಸದ್ದಿಗೆ ಬೆದರಿದ ನಾನು ಸ್ಥಳದಿಂದ ಕಾಲ್ಕಿತ್ತು, ನೇರವಾಗಿ ವಿಜಯನಗರ ಠಾಣೆಗೆ ಬಂದು ಘಟನೆಯನ್ನು ವಿವರಿಸಿದೆ ಎಂದು ತಿಳಿಸಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಠಾಣೆ ಪೊಲೀಸರು ರಘುವನ್ನು ಕರೆದುಕೊಂಡು ಘಟನೆ ನಡೆಯಿತು ಎನ್ನಲಾದ ಸ್ಥಳಕ್ಕೆ ಹೋದಾಗ ಫೈರಿಂಗ್ ಮಾಡಿದ ವ್ಯಕ್ತಿ ನಾಪತ್ತೆಯಾಗಿದ್ದ. ಆದರೆ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಹಾಕಿರುವ ಪೊಲೀಸ್ ಬ್ಯಾರಿಕೇಡ್‍ಗೆ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದುದು ತಿಳಿಯಿತು.

ರಘು ನೋಟ್ ಮಾಡಿಕೊಂಡಿದ್ದ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದ ಪೊಲೀಸರಿಗೆ ಆ ಕಾರು ಜೈ ಕರ್ನಾಟಕ ಜಿಲ್ಲಾಧ್ಯಕ್ಷ ಸತೀಶ್‍ಗೌಡನಿಗೆ ಸೇರಿದ್ದು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಇಂದು ಬೆಳಿಗ್ಗೆ ಶಾರದಾದೇವಿ ನಗರದ ಆತನ ಮನೆಯಿಂದ ಕರೆತಂದರು. ನನ್ನ ಬಳಿ ಲೈಸೆನ್ಸ್ಡ್ ರಿವಾಲ್ವರ್ ಇರುವುದು ನಿಜ. ಆದರೆ ರಘು ಎಂಬುವನತ್ತ ಗುಂಡು ಹಾರಿಸಿಲ್ಲ. ಬದಲಾಗಿ ಆತ ನನ್ನ ಪಾಡಿಗೆ ನಾನು ನಿಂತಿದ್ದಾಗ ಕಿರಿಕಿರಿ ಮಾಡಿದ. ನಾನೇನೂ ಆತನಿಗೆ ಹೊಡೆದಿಲ್ಲ, ಬೈದೂ ಇಲ್ಲ ಎಂದು ಸತೀಶ್‍ಗೌಡ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

Translate »