ಮೈಸೂರು ಮೃಗಾಲಯದ ವಶಕ್ಕೆ ನೆನೆಗುದಿಗೆ ಬಿದ್ದಿದ್ದ ಅಕ್ವೇರಿಯಂ ಕಟ್ಟಡ
ಮೈಸೂರು

ಮೈಸೂರು ಮೃಗಾಲಯದ ವಶಕ್ಕೆ ನೆನೆಗುದಿಗೆ ಬಿದ್ದಿದ್ದ ಅಕ್ವೇರಿಯಂ ಕಟ್ಟಡ

July 15, 2018

ಮೈಸೂರು: ಮೈಸೂರಿನ ಕಾರಂಜಿಕೆರೆ ಬಳಿ ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೃಹತ್ ಅಕ್ವೇರಿಯಂ ಕಟ್ಟಡವನ್ನು ಮೈಸೂರು ನಗರ ಪಾಲಿಕೆ, ಮೃಗಾಲಯದ ವಶಕ್ಕೆ ಒಪ್ಪಿಸಿದ್ದು, ಕಾಮಗಾರಿ ಮುಂದುವರೆಸಲು ಮೃಗಾಲಯದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರ ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ, ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರ(ಅಕ್ವೇರಿಯಂ) ನಿರ್ಮಾಣಕ್ಕೆ ಉದ್ದೇಶಿಸಿತ್ತು. ಕಾಮಗಾರಿ ಆರಂಭವಾ ದರೂ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಅರ್ಧಕ್ಕೆ ನಿಂತಿತ್ತು.

ಸುಮಾರು 4.26 ಕೋಟಿ ರೂ. ವೆಚ್ಚವಾಗಿದ್ದ ಅಕ್ವೇರಿಯಂ ಕಾಮಗಾರಿ ಕಳೆದ ನಾಲ್ಕು ವರ್ಷದಿಂದ ಸ್ಥಗಿತಗೊಂಡಿತ್ತು. ಹಾಗಾಗಿ ಅನೈತಿಕ ಚಟು ವಟಿಕೆಯ ತಾಣವಾಗಿ ಮಾರ್ಪಟ್ಟಿತ್ತು. ಜು.1 ರಂದು ಅಕ್ವೇರಿಯಂ ಕಟ್ಟಡವನ್ನು ಪರಿಶೀಲಿ ಸಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಅಕ್ವೇರಿಯಂ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಮೃಗಾಲಯಕ್ಕೆ ವಹಿಸುವಂತೆ ಸೂಚಿಸಿದ್ದರು.

ವಶಕ್ಕೆ ಪಡೆದ ಮೃಗಾಲಯ: ಸಚಿವ ಸಾ.ರಾ.ಮಹೇಶ್

ಸೂಚನೆಯಂತೆ ಪಾಲಿಕೆಯ ಆಯುಕ್ತ ಕೆ.ಹೆಚ್.ಜಗದೀಶ್, 2014ರ ಡಿಸೆಂಬರ್ 29ರಂದು ಅಂದಿನ ಮೇಯರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡಾವಳಿಯನ್ನು ಪರಿಶೀಲಿಸಿ ಮೃಗಾಲಯಕ್ಕೆ ಅಕ್ವೇರಿಯಂ ಕಟ್ಟಡದ ದಾಖಲೆಗಳನ್ನು ಹಸ್ತಾಂತರಿಸಿ, ಕಾಮಗಾರಿ ಪೂರ್ಣಗೊಳಿಸುವಂತೆ ಕೋರಿದ್ದಾರೆ.

ಒಪ್ಪಂದದಲ್ಲಿ ಏನಿದೆ: ನಗರ ಪಾಲಿಕೆ ಮೃಗಾಲಯಕ್ಕೆ ಸೇರಿದ ಸ್ಥಳದಲ್ಲಿ 4.26 ಕೋಟಿ ರೂ ವೆಚ್ಚದಲ್ಲಿ ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಿಸಲಾಗಿದೆ. ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಅನುದಾನದ ಅವಶ್ಯಕತೆಯಿದೆ. ಸುಮಾರು 28 ಕೋಟಿ ರೂ.ಗಳ ಯೋಜನೆಯಾದ ಅಕ್ವೇರಿಯಂ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗ ಮೃಗಾಲಯ ಮುಂದಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಖರ್ಚು ವೆಚ್ಚ ಕಳೆದು, ಮೊದಲ ಐದು ವರ್ಷ ಬರುವ ಆದಾಯದಲ್ಲಿ ಮೃಗಾಲಯಕ್ಕೆ ಶೇ.70 ರಷ್ಟು ಹಾಗೂ ನಗರ ಪಾಲಿಕೆಗೆ ಶೇ.30ರಷ್ಟು ಹಂಚಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಐದು ವರ್ಷದ ನಂತರ ಅಕ್ವೇರಿಯಂನಿಂದ ಬರುವ ಆದಾಯಕ್ಕೆ ತಕ್ಕಂತೆ ಹಂಚಿಕೆ ಮಾಡುವುದಕ್ಕೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ವಶಕ್ಕೆ ಪಡೆದ ಮೃಗಾಲಯ: ಮೈಸೂರು ನಗರ ಪಾಲಿಕೆ ದಾಖಲೆಗಳನ್ನು ಹಸ್ತಾಂತರ ಮಾಡಿದ ಬಳಿಕ ಮೃಗಾಲಯ ಪಾಳು ಕೊಂಪೆಯಂತಿದ್ದ ಅಕ್ವೇರಿಯಂ ಕಟ್ಟಡವನ್ನು ವಶಕ್ಕೆ ಪಡೆದಿದೆ. ಅಲ್ಲದೆ ಕಟ್ಟಡದಲ್ಲಿ ನಾಲ್ಕೈದು ವರ್ಷಗಳಿಂದ ಬಿದ್ದಿದ್ದ ಕಸ, ನಿರುಪಯುಕ್ತ ವಸ್ತುಗಳನ್ನು ತೆಗೆದು ಹಾಕುವ ಕೆಲಸ ಆರಂಭಿಸಿದೆ. ಅಲ್ಲದೆ ಕಟ್ಟಡಕ್ಕೆ ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಗಟ್ಟಲು ಬೇಲಿ ಹಾಕುವುದಕ್ಕೆ ಮುಂದಾಗಿದೆ.

ಜಂಟಿ ಸರ್ವೆ ನಡೆಸಿ ಪರಿಣಿತರಿಂದ ಸಲಹೆ ಪಡೆಯಲಾಗುವುದು: ಮೈಸೂರು ನಗರ ಪಾಲಿಕೆ, ನೆನೆಗುದಿಗೆ ಬಿದ್ದಿರುವ ಅಕ್ವೇರಿಯಂ ಕಟ್ಟಡವನ್ನು ಮೃಗಾಲಯಕ್ಕೆ ನೀಡಿದೆ. ಮೊದಲ ಹಂತದಲ್ಲಿ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದೇವೆ. ಕಸ, ನಿರುಪಯುಕ್ತ ವಸ್ತುಗಳನ್ನು ಕಟ್ಟಡದಿಂದ ಹೊರ ಹಾಕಲಾಗುತ್ತಿದೆ. ಶೀಘ್ರದಲ್ಲಿಯೇ ನಗರ ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ನಡೆಸಲಾಗುತ್ತದೆ. ಅಲ್ಲದೆ ಅಕ್ವೇರಿಯಂ ಕ್ಷೇತ್ರದಲ್ಲಿ ಪರಿಣಿತಿ ಪಡೆದಿರುವವರೊಂದಿಗೆ ಸಮಾಲೋಚಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಸಲಹೆ ಪಡೆಯಲಾಗುತ್ತದೆ.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಈಗಾಗಲೇ ಕಟ್ಟಡದ ಬಗ್ಗೆ ರೂಪುರೇಷೆ ಸಿದ್ದಪಡಿಸಿದ್ದಾರೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಮೈಸೂರು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕಣ ್ ತಿಳಿಸಿದ್ದಾರೆ.

Translate »