ಹಾಸನ: ತಾಲೂಕಿನ ಗೊರೂರಿನಲ್ಲಿರುವ ಹೇಮಾ ವತಿ ಜಲಾಶಯ 4 ವರ್ಷಗಳ ಬಳಿಕ ಭರ್ತಿಯಾಗಿದ್ದು, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಪತ್ನಿ ಜಿಪಂ ಸದಸ್ಯೆ ಭವಾನಿ ರೇವಣ್ಣ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸುವ ಮೂಲಕ 15,000ಕ್ಯೂಸೆಕ್ಸ್ ನೀರು ನದಿಗೆ ಬಿಡಲು ಚಾಲನೆ ನೀಡಿದರು. ಜಲಾಶಯ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಜುಲೈ ತಿಂಗಳ ಮಧ್ಯದಲ್ಲೇ ಭರ್ತಿಯಾಗಿರುವುದು ವಿಶೇಷ. ಇಂದು ಹೇಮಾವತಿ ಅಣೆಕಟ್ಟೆಯ 6 ಕ್ರೆಸ್ಟ್‍ಗೇಟ್‍ಗಳಿಂದ ನೀರು ಬಿಡಲಾಯಿತು.
ಜಿಲ್ಲೆಯ ಸಕಲೇಶಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕ ಪ್ರಮಾಣದ ನೀರು ಹೇಮಾವತಿ ಜಲಾಶಯಕ್ಕೆ ಹರಿದು ಬರುತ್ತಿದೆ. ಶನಿವಾರ 24,000 ಕ್ಯೂಸೆಕ್ಸ್ ಒಳಹರಿವು ಇದ್ದು, ಜಲಾಶಯದ ಗರಿಷ್ಠ ಮಟ್ಟ 2922 ಅಡಿ. ಈಗಿನ ಮಟ್ಟ 2919.37 ಅಡಿ. ಜಲಾಶಯ ಸಂಪೂರ್ಣ ಭರ್ತಿಗೆ ಇನ್ನೂ ಕೇವಲ 3 ಅಡಿ ಮಾತ್ರ ಬಾಕಿ ಇದೆ. ಸುರಕ್ಷತೆ ದೃಷ್ಟಿಯಿಂದ ನದಿಗೆ 15,000 ಕ್ಯೂಸೆಕ್ಸ್, ಎಡದಂಡೆ ನಾಲೆಗೆ 2,200 ಕ್ಯೂಸೆಕ್ಸ್, ಬಲದಂಡೆ ನಾಲೆಗೆ 200 ಕ್ಯೂಸೆಕ್ಸ್, ಬಲ ಮೇಲ್ದಂಡೆ ನಾಲೆಗೆ 725 ಕ್ಯೂಸೆಕ್ಸ್, ನದಿ ತೂಬಿಗೆ 1,300 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಹೇಮಾವತಿ ಅಣೆಕಟ್ಟೆನಿಂದ ನೀರು ಬಿಡುವ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಪೂಜೆ ಬಳಿಕ ಜಲಾಶಯದ 6 ಕ್ರೆಸ್ಟ್ ಗೇಟ್ ತೆರೆದು ನೀರನ್ನು ಹೊರ ಬಿಡಲಾಯಿತು. ಈ ದೃಶ್ಯ ಹಾಲಿನ ಹೊಳೆಯಂತೆ ಗೋಚರಿಸಿತು. ನೆರೆದಿದ್ದವರು ಸೌಂದರ್ಯವನ್ನು ಸವಿದರು. ನೀರು ಬಿಡುಗಡೆ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೇರೆ ಹಿಡಿಯುವಲ್ಲಿ ಬಹುತೇಕರು ತಲ್ಲೀನರಾದರು. ಕೆಲವರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಸಕಲೇಶಪುರ- ಆಲೂರು ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಈ ವೇಳೆ ಉಪಸ್ಥಿತರಿದ್ದರು.