ಸ್ಕೂಟರ್ ಸಮೇತ 25 ಲಕ್ಷ  ದೋಚಿದ ದುಷ್ಕರ್ಮಿಗಳು
ಮೈಸೂರು

ಸ್ಕೂಟರ್ ಸಮೇತ 25 ಲಕ್ಷ ದೋಚಿದ ದುಷ್ಕರ್ಮಿಗಳು

September 24, 2018

ಮೈಸೂರು: ಸ್ಕೂಟರ್ ಸಮೇತ 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸೇರಿದಂತೆ 25 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿದ ಘಟನೆ ಶನಿವಾರ ರಾತ್ರಿ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ಮೈಸೂರಿನ ಶಿವರಾಂಪೇಟೆಯಲ್ಲಿ ವಿದೇಶಿ ಕರೆನ್ಸಿ ಬದಲಾವಣೆ ಮಾಡುವ ಮಳಿಗೆಯೊಂದನ್ನು ನಡೆಸುತ್ತಿರುವ ವಿಜಯನಗರದ ನಿವಾಸಿ ಅರುಣ್ ಕುಮಾರ್ ಎಂಬುವರೇ ಕಳ್ಳರ ಕೃತ್ಯಕ್ಕೆ ಒಳಗಾಗಿ 25 ಲಕ್ಷ ರೂ. ಗಳನ್ನು ಕಳೆದುಕೊಂಡವರಾಗಿದ್ದಾರೆ

ಅರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಕೂಟರ್‍ನ ಡಿಕ್ಕಿಯಲ್ಲಿ 19 ಲಕ್ಷ ರೂ. ಭಾರತೀಯ ಹಣ ಹಾಗೂ 6 ಲಕ್ಷ ರೂ. ಮೌಲ್ಯದ ವಿದೇಶಿ ನೋಟುಗಳನ್ನು ಇಟ್ಟುಕೊಂಡು ತಮ್ಮ ಮನೆಗೆ ಹೋಗುತ್ತಿದ್ದಾಗ ವಿಜಯನಗರದ 1ನೇ ಹಂತದ 3ನೇ ಮುಖ್ಯ ರಸ್ತೆಯಲ್ಲಿ ಇಬ್ಬರು ಯುವಕರು ಬೈಕಲ್ಲಿ ಬಂದು ಸ್ಕೂಟರ್ ಅನ್ನು ಅಡ್ಡಗಟ್ಟಿ ಜಗಳ ಆರಂಭಿಸಿದ್ದಾರೆ. ದಾರಿಯಲ್ಲಿ ಬರುವಾಗ ನನ್ನ ಬೈಕ್‍ಗೆ ಅಡ್ಡ ಲಾಗಿ ಬಂದು ಚಮಕ್ ನೀಡುತ್ತೀಯಾ, ನನ್ನನ್ನೇ ಗುರಾಯಿಸುತ್ತೀಯಾ ಎಂದು ಏರು ಧನಿ ಯಲ್ಲಿ ಜಗಳ ಆರಂಭಿಸಿದ್ದಾರೆ. ಈ ನಡುವೆ ಆ ಇಬ್ಬರು ಯುವಕರಲ್ಲಿ ಒಬ್ಬ ಯುವಕ ಸ್ಕೂಟರ್ ಮೇಲೆ ಕುಳಿತ್ತಿದ್ದ ಅರುಣ್ ಕುಮಾರ್‍ನನ್ನು ಮುಂದಕ್ಕೆ ತಳ್ಳಿದ್ದಾನೆ. ಮತ್ತೊಬ್ಬ ಸ್ಕೂಟರ್‍ನ ಬೀಗವನ್ನು ಕಿತ್ತುಕೊಂಡಿದ್ದಾನೆ. ಈ ನಡುವೆ ರಸ್ತೆಯಲ್ಲಿ ಪರಸ್ಪರ ಜಗಳವಾಡುತ್ತಿದ್ದಾಗ ಮತ್ತೊಂದು ಬೈಕ್‍ನಲ್ಲಿ ಇಬ್ಬರು ಯುವಕರು ಬಂದು, ಒಬ್ಬ ಅರುಣ್ ಕುಮಾರ್‍ನ ಸ್ಕೂಟರ್ ನೊಂದಿಗೆ ಪರಾರಿಯಾಗಿದ್ದಾನೆ. ಈ ವೇಳೆ ಜಗಳವಾಡುತ್ತಿದ್ದ ಇನ್ನಿಬ್ಬರು ಯುವಕರು ತಾವು ಬಂದ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಹಣದೊಂದಿಗೆ ಸ್ಕೂಟರ್ ಅನ್ನು ಕಳ್ಳರು ಕದ್ದೊಯ್ದಿದ್ದ ಹಿನ್ನೆಲೆಯಲ್ಲಿ ಕೂಡಲೇ ಅರುಣ್‍ಕುಮಾರ್ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ಹಣದೊಂದಿಗೆ ಸ್ಕೂಟರ್ ಸಮೇತ ಪರಾರಿಯಾಗಿರುವ ಕಳ್ಳರ ಶೋಧಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.

ಈ ಘಟನೆ ಹಲವು ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದ್ದು, ಅರುಣ್ ಕುಮಾರ್ ಅವರ ಚಲನವಲನವನ್ನು ಬಲ್ಲವರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಶಿವರಾಂಪೇಟೆಯಿಂದ ಹಣದೊಂದಿಗೆ ಸ್ಕೂಟರ್‍ನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರನ್ನು ಹಿಂಬಾಲಿಸಿ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಅಲ್ಲದೇ ಜನ ನಿಬಿಡ ಪ್ರದೇಶದಲ್ಲಿಯೇ ಈ ಕೃತ್ಯ ನಡೆದಿರುವುದು ಪೊಲೀಸರಿಗೆ ತಲೆನೋವು ತಂದಿದೆ. ಅಲ್ಲದೇ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

Translate »