ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು
ಮೈಸೂರು

ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು

August 9, 2018

ಮೈಸೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಬೇರೆ ಬೇರೆ ಕಡೆಯಲ್ಲಿ ಕಳವಾಗಿದ್ದ ಇನ್ನೂ ಹಲವು ಬೈಕುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಎಗರಿಸುವ ಚಾಲಾಕಿ ಖದೀಮರು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳನ್ನು ವಶಪಡಿಸಿ ಕೊಳ್ಳುತ್ತಿದ್ದಾರೆ. ಮೈಸೂರಿನ ವಿಜಯನಗರ, ಹೆಬ್ಬಾಳು, ಮೇಟಗಳ್ಳಿ ಸೇರಿದಂತೆ ಮೈಸೂರಿನ ಹಲವು ಠಾಣಾ ವ್ಯಾಪ್ತಿಯಲ್ಲಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬೈಕುಗಳನ್ನು ಕಳವು ಮಾಡುವುದು ಖತರ್ನಾಕ್ ಕಳ್ಳರ ಚಾಳಿಯಾಗಿದ್ದು, ಕಳವು ಮಾಲನ್ನು ಮಾರಾಟ ಮಾಡಲೆತ್ನಿಸುತ್ತಿದ್ದಾಗ ಇಬ್ಬರು ವಿಜಯನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಇದರಿಂದ 10ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದಂತಾಗಿದೆ.

ಡಿಸಿಪಿ ಡಾ.ವಿಕ್ರಂ ವಿ.ಅಮಟೆ, ಎನ್.ಆರ್ ಉಪವಿಭಾಗದ ಎಸಿಪಿ ಸಿ.ಗೋಪಾಲ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಅನಿಲ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ಮಾಡಿದ್ದು, ಲಕ್ಷಾಂತರ ರೂ. ಮೌಲ್ಯದ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಿಂದ ಭಾರೀ ಪ್ರಮಾಣದ ಕಳವು ಪ್ರಕರಣ ಪತ್ತೆಯಾದಂತಾಗಿದ್ದು, ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ್ ರಾವ್ ಅವರು ಪೊಲೀಸರ ಕಾರ್ಯವನ್ನು ಪ್ರಶಂಸಿಸಿದ್ದಾರೆ.

Translate »