ಕೌಟಿಲ್ಯ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಉತ್ತಮ ಪುಸ್ತಕಗಳು ವ್ಯಕ್ತಿತ್ವ ವಿಕಸನದ ಭಂಡಾರ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಉತ್ತಮ ಪುಸ್ತಕಗಳು ವ್ಯಕ್ತಿತ್ವ ವಿಕಸನದ ಭಂಡಾರ

August 9, 2018

ಮೈಸೂರು: ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಸರ್ವತೋಮುಖ ಏಳ್ಗೆ ಸಾಧಿಸಬಲ್ಲ ಒಬ್ಬ ವ್ಯಕ್ತಿಯಾಗಿ ಬೆಳೆಯಬಹುದು. ಅದಕ್ಕೆ ಪುಸ್ತಕದ ಜ್ಞಾನದ ಅರಿವಿನ ಅವಶ್ಯಕತೆ ಬಹಳ ಪ್ರಮುಖವಾದದ್ದು. ಆ ನಿಟ್ಟಿನಲ್ಲಿ ಮೈಸೂರಿನಲ್ಲೇ ರಚಿತವಾದ ಶ್ರೀ ಸ್ವಾಮಿಜಗದಾತ್ಮಾನಂದರ “ಬದುಕಲು ಕಲಿಯಿರಿ” ಪುಸ್ತಕ ಬಹಳಷ್ಟು ಪ್ರಭಾವವನ್ನು ಬೀರುತ್ತದೆ, ಆ ಪುಸ್ತಕ ಕುರಿತು ನೀಡುತ್ತಿರುವ ಉಪನ್ಯಾಸ ಮಕ್ಕಳ ಭವಿಷ್ಯಕ್ಕೆ ಪೂರಕವಾಗಲಿದೆ ಎಂದು ಬದುಕಲು ಕಲಿಯಿರಿ ಬಳಗದ ಅಧ್ಯಕ್ಷರೂ ಆದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡರು ತಿಳಿಸಿದರು. ಅವರು ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಇಂದು ಏರ್ಪಡಿಸಲಾಗಿದ್ದ ‘ಬದುಕಲು ಕಲಿಯಿರಿ’ ಪುಸ್ತಕದ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11 ರಂದು ಅಮೆರಿಕಾದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಚಾರಿತ್ರಿಕ ಭಾಷಣದ 125ನೇ ಸಂವತ್ಸರ ಸ್ಮರಣೋ ತ್ಸವದ ಅಂಗವಾಗಿ ‘ಬದುಕಲು ಕಲಿಯಿರಿ’ ಎಂಬ ಕಾರ್ಯ ಕ್ರಮದಡಿಯಲ್ಲಿ ಸ್ವಾಮಿ ಜಗದಾತ್ಮಾನಂದರ ಸಾಧನೆ ಕುರಿತ ವಿಶೇಷ ಉಪನ್ಯಾಸ ಹಾಗೂ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ಹೆಚ್.ಎಲ್.ಸತೀಶ್‍ರವರು, ಜಗತ್ತಿನಲ್ಲಿ ನಾಲ್ಕು ವರ್ಗದ ಜನರಿದ್ದಾರೆ ಅವರಲ್ಲಿ ಕತ್ತಲಿನಿಂದ ಕತ್ತಲೆಗೆ, ಕತ್ತಲೆಯಿಂದ ಬೆಳಕಿನಕಡೆಗೆ, ಬೆಳಕಿನಿಂದ ಕತ್ತಲೆಕಡೆಗೆ, ಬೆಳಕಿನಿಂದ ಬೆಳಕಿನಕಡೆಗೆ ಸಾಗುವ ಜನರಲ್ಲಿ, ಕತ್ತಲೆಯಿಂದ ಬೆಳಕಿನ ಕಡೆಗೆ, ಬೆಳಕಿನಿಂದ ಬೆಳಕಿನ ಕಡೆಗೆ ಸಾಗುವ ವರ್ಗದ ಜನರಿಗೆ ‘ಬದುಕಲು ಕಲಿಯಿರಿ’ ಒಂದು ದಾರಿದೀಪವಾಗಲಿದೆ ಎಂದರು. ತನ್ನ ಅಂತರಂಗದಲ್ಲಿ ಹುದುಗಿರುವ ವಾಸ್ತವಿಕ ಮೌಲ್ಯಗಳಿಂದ ‘ಬದುಕಲು ಕಲಿಯಿರಿ’ ಇಂದಿಗೂ ಜನಪ್ರಿಯತೆಯ ನಾಗಾಲೋಟ ದಲ್ಲಿದೆ. ಆದರೆ ಧಾವಂತದ ಜೀವನಶೈಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಳೆದು ಹೋಗಿ, ಓದುವ ಅಭ್ಯಾಸವನ್ನೇ ಮರೆತಿರುವ ಯುವ ಜನತೆ ಸೂಕ್ಷ್ಮ ಸಂವೇದನಾಶೀಲ ಪುಸ್ತಕಗಳಿಂದ ದೂರವಾಗಿದೆ. ಇಂತಹ ಸನ್ನಿವೇಶವನ್ನು ಬದಲಾಯಿಸಿ ‘ಬದುಕಲು ಕಲಿಯಿರಿ’ ಪುಸ್ತಕ ಸ್ಫೂರ್ತಿಯುತ ಸಂದೇಶವನ್ನು ತಲುಪಿಸಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಸಾರಿದರು. ಇದೇ ವೇಳೆ ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷ ಆರ್. ರಘು ಮಾತನಾಡಿ ಭವಿಷ್ಯದ ಮಕ್ಕಳು ದೇಶಕ್ಕೆ, ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ, ಸಾಧನೆಯ ಕೀರ್ತಿವಂತ ರಾಗಬೇಕಾದರೆ ವಿದ್ಯಾರ್ಥಿಗಳಿಗೆ ಪ್ರಭಾವ ಬೀರು ವಂತಹ ಈ ರೀತಿಯ ಉಪನ್ಯಾಸ ಅತ್ಯಾವಶಕವಾಗಿದೆ. ಒಳ್ಳೆಯ ಸಂದೇಶದ ಮಾತುಗಳನ್ನು ಆಲಿಸಿದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂಬುದನ್ನು ಒಂದು ಸಾಂದರ್ಭಿಕ ಕಥೆಯೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಬದುಕಲು ಕಲಿಯಿರಿ ಬಳಗದ ಸದಸ್ಯರಾದ ಬಸವಣ್ಣ, ಪ್ರಸನ್ನಕುಮಾರ್, ಪಾಂಡುರಂಗ ವಿಠಲ ಹಾಗೂ ಕೌಟಿಲ್ಯ ವಿದ್ಯಾಲಯದ ಉಪಪ್ರಾಂಶು ಪಾಲರಾದ ಶ್ರೀಮತಿ .ಬಿ.ಬಿ.ರಾಧಿಕ ಹಾಜರಿದ್ದರು.

Translate »