ಮೈಸೂರು, ಆ. 12 (ಆರ್‍ಕೆ)- ಒಂದೇ ರಾತ್ರಿ ಮೈಸೂರಿನ ಅಗ್ರಹಾರದಲ್ಲಿ ಐದು ಅಂಗಡಿಗಳ ಶೆಟರ್ ಮೀಟಿ ನಗದು, ಲಿಕ್ಕರ್ ಹಾಗೂ ಸಿಗರೇಟ್ ಪ್ಯಾಕ್ ದೋಚಿ ಪರಾರಿಯಾಗಿರುವ ಘಟನೆ ಸಂಭವಿಸಿದೆ.ಕೆ.ಆರ್. ಪೊಲೀಸ್ ಠಾಣೆಯ ಅನತಿ ದೂರ ದಲ್ಲೇ ಅಂಗಡಿಗಳ ಸರಣಿ ಕಳವು ಮಾಡಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದ್ದು, ಸಿಸಿ ಕ್ಯಾಮರಾ ಫುಟೇಜಸ್‍ಗಳ ನೆರವಿನಿಂದ ಕಾರ್ಯಾಚರಣೆ ನಡೆಸಿ ಖದೀಮರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಮಧ್ಯರಾತ್ರಿ 12.30 ರಿಂದ 1.30 ಗಂಟೆ ನಡುವೆ ಕಳ್ಳರು, ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಅಂಗಡಿಗಳ ಮುಂದೆ ಇದ್ದ ಸಿಸಿ ಕ್ಯಾಮರಾವನ್ನು ವಿರುದ್ಧ ದಿಕ್ಕಿಗೆ ತಿರುಗಿಸಿ ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.
ಕೆ.ಆರ್. ಮೊಹಲ್ಲಾದ ಅಗ್ರಹಾರ ಸರ್ಕಲ್‍ಗೆ ಹೊಂದಿಕೊಂಡಂತಿರುವ ಅಕ್ಷಯ ಬಾರ್ ಅಂಡ್ ರೆಸ್ಟೋರೆಂಟ್, ಪಕ್ಕದಲ್ಲಿ ಜೆಎಸ್‍ಎಸ್ ಆಸ್ಪತ್ರೆಗೆ ಹೋಗುವ ರಸ್ತೆಯ ಹೋಟೆಲ್ ಉಡುಪಿ ಉಪಚಾರ್, ಅಗ್ರಹಾರ ಸರ್ಕಲ್‍ನ ರಾಮಣ್ಣ ಅಂಡ್ ಸನ್ಸ್ ಬೀಡಾ ಅಂಗಡಿ, ಶ್ರೀ ಡೆಲ್ಲಿ ಮಾರ್ಟ್ ದ್ರಾಕ್ಷಿ ಮತ್ತು ಗೋಡಂಬಿ ಅಂಗಡಿ, ಪಕ್ಕದಲ್ಲಿರುವ ವರಲಕ್ಷ್ಮಿ ಸ್ವೀಟ್ಸ್ ಬೇಕರಿ ಯಲ್ಲಿ ಕಳ್ಳತನ ನಡೆದಿದೆ. ಅಕ್ಷಯ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ 75,000 ರೂ. ನಗದು, ಬೆಲೆ ಬಾಳುವ ಸ್ಕಾಚ್ ಮದ್ಯದ ಬಾಟಲಿಗಳನ್ನು ಕಳವು ಮಾಡಲಾಗಿದೆ. ರಾಮಣ್ಣ ಬೀಡಾ ಅಂಗಡಿಯಲ್ಲಿ ರೂ. 3000 ನಗದು ಹಾಗೂ ಸಿಗರೇಟ್ ಪ್ಯಾಕ್ ಗಳನ್ನು ಕಳ್ಳರು ದೋಚಿದ್ದಾರೆ. ಉಳಿದಂತೆ ಶ್ರೀ ಡೆಲ್ಲಿ ಮಾರ್ಟ್, ವರಲಕ್ಷ್ಮಿ ಸ್ವೀಟ್ಸ್ ಅಂಗಡಿ ಮತ್ತು ಹೋಟೆಲ್ ಉಡುಪಿ ಉಪಚಾರ್‍ನಲ್ಲಿ ಬೀಗ ಮುರಿದು ಶೆಟರ್ ಬೆಂಡ್ ಮಾಡಲು ಯತ್ನಿಸಿದ್ದಾರೆಯಾದರೂ ಒಳಗೆ ನುಸುಳಲು ಸಾಧ್ಯವಾಗದ ಕಾರಣ ಅಲ್ಲಿ ಏನೂ ಸಿಕ್ಕಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಸ್ಥಳಕ್ಕೆ ತೆರಳಿದ ಕೆ.ಆರ್. ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ ಅಂಗಡಿಗಳಲ್ಲಿ ಮಹಜರು ನಡೆಸಿದಾಗ ನಗದು, ಮದ್ಯದ ಬಾಟಲಿ ಗಳು, ಸಿಗರೇಟ್ ಪ್ಯಾಕ್‍ಗಳನ್ನು ಕಳವು ಮಾಡಿರು ವುದು ತಿಳಿಯಿತು. ಮೈಸೂರು ನಗರ ಬೆರಳಚ್ಚು ಮುದ್ರೆ ಘಟಕ ಹಾಗೂ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಕೃತ್ಯ ನಡೆಸುವ ಮುನ್ನ ಅಂಗಡಿಗಳ ಮುಂದೆ ಅಳವಡಿಸಿರುವ ಸಿಸಿ ಕ್ಯಾಮರಾ ಗಳನ್ನು ವಿರುದ್ಧ ದಿಕ್ಕಿಗೆ ತಿರುಗಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಠಾಣೆಯಿಂದ 100 ಮೀಟರ್ ಅಂತರದಲ್ಲಿರುವ ಪ್ರಮುಖ ವಾಣಿಜ್ಯ ಕೇಂದ್ರದಲ್ಲೇ ಅಂಗಡಿಗಳ ಸರಣಿ ಕಳವು ನಡೆದಿರುವುದು ಸುತ್ತಲಿನ ಅಂಗಡಿ ಮಾಲೀಕರು ಹಾಗೂ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ಕೆ.ಆರ್. ಠಾಣೆಯ ಗರುಡ ಮತ್ತು ಪಿಸಿಆರ್ ವಾಹನಗಳು ಇಲ್ಲಿ ಗಸ್ತು ತಿರುಗುತ್ತವೆ. ಓರ್ವ ಎಸಿಪಿ ಮಟ್ಟದ ಅಧಿಕಾರಿ ಹಾಗೂ ಮೂವರು ಪೊಲೀಸ್ ಇನ್ಸ್‍ಪೆಕ್ಟರ್ ಗಳು ರಾತ್ರಿ ಕರ್ತವ್ಯದಲ್ಲಿದ್ದಾಗ್ಯೂ ಈ ಕೃತ್ಯ ನಡೆದಿ ರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.