ಕೊರೊನಾ ಸೋಂಕಿತರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲೂ ಚಿಕಿತ್ಸೆ ಲಭ್ಯ
ಮೈಸೂರು

ಕೊರೊನಾ ಸೋಂಕಿತರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲೂ ಚಿಕಿತ್ಸೆ ಲಭ್ಯ

August 13, 2020

ಮೈಸೂರು, ಆ.12(ಎಂಟಿವೈ)- ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಂಗಳವಾರ (ಆ.18) ದಿಂದ ಕೆಆರ್‍ಎಸ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿರುವ 250 ಹಾಸಿಗೆಗಳ ಟ್ರಾಮಾ ಕೇರ್ ಸೆಂಟರ್ ಕಾರ್ಯಾರಂಭ ಮಾಡ ಲಿದೆ ಕೆ.ಆರ್.ಆಸ್ಪತ್ರೆಯನ್ನು ಕೋವಿಡ್ ಸೋಂಕಿಲ್ಲದ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಸೀಮಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು.

ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿ, ಕೆಆರ್‍ಎಸ್ ರಸ್ತೆಯ ಟ್ರಾಮಾ ಸೆಂಟರ್‍ನಲ್ಲಿ 46 ವೆಂಟಿಲೇಟರ್ ಸೌಲಭ್ಯವಿದೆ. ಆಕ್ಸಿಜನ್ ಸೌಲಭ್ಯ ಇರುವ 200ಕ್ಕೂ ಹೆಚ್ಚು ಹಾಸಿಗೆಗಳಿವೆ. ಉಸಿರಾಟ ಸಮಸ್ಯೆ, ಐಎಲ್‍ಐ ಹಾಗೂ `ಸಾರಿ’ ಪ್ರಕರಣಗಳಂತಹ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಚಿಕಿತ್ಸೆ ನೀಡಲು ಟ್ರಾಮಾ ಕೇರ್ ಸೆಂಟರ್ ಸಹಕಾರಿಯಾಗಲಿದೆ ಎಂದರು. ನೂತನ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಆಮ್ಲಜನಕದ ಪೈಪ್‍ಲೈನ್ ಅಳವಡಿಕೆ ಕೆಲಸ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ನಂತರ ವೆಂಟಿಲೇಟರ್ ಹಾಗೂ ಹಾಸಿಗೆ ಜೋಡಿಸುವುದು ನಡೆಯಲಿದೆ. ಇದೆಲ್ಲಾ ಪೂರ್ಣಗೊಂಡ ಬಳಿಕ ನೂತನ ಕೇಂದ್ರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

ಮರಣ ಕಡಿಮೆಯಾಗಬೇಕು: ಮೈಸೂರಿನಲ್ಲಿ ದಿನದಲ್ಲಿ 1000ದಿಂದ 1200 ಟೆಸ್ಟ್ ಮಾಡಲು ಕಿಟ್ ವ್ಯವಸ್ಥೆ ಇದ್ದರೂ ನಿತ್ಯ 500ರಿಂದ 600 ಮಂದಿಗಷ್ಟೇ ಕೋವಿಡ್-19 ಪರೀಕ್ಷೆ ನಡೆಯುತ್ತಿವೆ. ಹೆಚ್ಚು ಪರೀಕ್ಷೆ ನಡೆಸಿ ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಮಾಡಿ ಸಾವಿನ ಸಂಖ್ಯೆ ಕಡಿಮೆ ಮಾಡಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಸ್ವ್ಯಾಬ್ ಪರೀಕ್ಷೆ ತ್ವರಿತಗತಿಯಲ್ಲಿ ನಡೆಸಿ ಸಾವಿನ ಪ್ರಮಾಣ ತಗ್ಗಿಸುವ ಕೆಲಸಕ್ಕೆ ಅಧಿಕಾರಿಗಳೆಲ್ಲ ಮುಂದಾಗಬೇಕು. ಜಿಲ್ಲೆಯಲ್ಲಿ ಮಂಗಳವಾರದ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ ಗುಣಮುಖರಾದವರ ಸಂಖ್ಯೆ ಶೇ.52ಕ್ಕೆ ಏರಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

Translate »