ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ
ಮಂಡ್ಯ

ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ

June 21, 2021

ಮಳವಳ್ಳಿ, ಜೂ.20-ವೈದ್ಯೆಯಾಗುವ ಕನಸು ಕಂಡಿದ್ದ ಯುವತಿಯೋರ್ವಳು ಆರ್ಥಿಕ ಮುಗ್ಗಟ್ಟಿನಿಂದಾಗಿ ತನ್ನನ್ನು ಖಾಸಗಿ ಕಾಲೇಜಿಗೆ ಸೇರಿಸಲಿಲ್ಲವೆಂದು ಖಿನ್ನತೆಗೊಳಗಾಗಿ ನೇಣಿಗೆ ಶರಣಾಗಿದ್ದು, ಮಗಳ ದುರಂತ ಅಂತ್ಯದಿಂದಾಗಿ ಹೃದಯಾ ಘಾತದಿಂದ ತಂದೆಯೂ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ತಳಗವಾಡಿ ಗ್ರಾಮದಿಂದ ವರದಿಯಾಗಿದೆ.

ಗ್ರಾಮದ ಯುವತಿ ಟಿ.ಆರ್.ಬಾಂಧವ್ಯ(17) ನೇಣಿಗೆ ಶರಣಾ ದವಳಾಗಿದ್ದು, ಆಕೆಯ ತಂದೆ ಕೆ.ರಾಜು ಹೃದಯಾಘಾತ ದಿಂದ ಮೃತಪಟ್ಟವರು. ತಂದೆ-ಮಗಳ ದುರಂತ ಅಂತ್ಯದಿಂ ದಾಗಿ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

ರಾಜು ಅವರಿಗೆ ನಾಲ್ವರು ಪುತ್ರಿಯರು, ಓರ್ವ ಪುತ್ರ ಸೇರಿ ದಂತೆ ಐವರು ಮಕ್ಕಳಿದ್ದು, ಇಂದು ನೇಣಿಗೆ ಶರಣಾದ ಬಾಂಧವ್ಯ ಕೊನೇ ಮಗಳು. ಈಕೆಯ ಅಣ್ಣ ಹಾಗೂ ಮೂವರು ಅಕ್ಕಂ ದಿರು ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪದವೀಧರ ರಾಗಿದ್ದಾರೆ ಎಂದು ಹೇಳಲಾಗಿದೆ. ವೈದ್ಯೆಯಾಗಬೇಕೆಂದು ಕನಸು ಕಂಡಿದ್ದ ಬಾಂಧವ್ಯ, ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಎಸ್‍ಎಸ್‍ಎಲ್‍ಸಿಯಲ್ಲಿ ಶೇ.93ರಷ್ಟು ಅಂಕ ಗಳಿಸಿದ್ದಾಳೆ. ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ರಾಜು, ತನ್ನ ಪುತ್ರಿಯನ್ನು ಖಾಸಗಿ ಕಾಲೇಜಿಗೆ ಸೇರಿಸಲು ಸಾಧ್ಯವಾಗದೆ ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿಸಿದ್ದರು.

ತನ್ನ ಅಕ್ಕಂದಿರೆಲ್ಲಾ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ತಾನು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದೇನೆ ಎಂದು ಬಾಂಧವ್ಯ ಖಿನ್ನತೆಗೆ ಒಳಗಾಗಿದ್ದಳು. ಅಲ್ಲದೇ ಆನ್‍ಲೈನ್ ತರಗತಿ ಎದುರಿ ಸುವುದೂ ಕೂಡ ಆಕೆಗೆ ತ್ರಾಸದಾಯಕವಾಗಿತ್ತು ಎಂದು ಹೇಳ ಲಾಗಿದೆ. ದ್ವಿತೀಯ ಪಿಯುಸಿಗೆ ತನ್ನನ್ನು
ಖಾಸಗಿ ಕಾಲೇಜಿಗೆ ಸೇರಿಸುವಂತೆ ಆಕೆ ತಂದೆಯನ್ನು ಕೇಳಿಕೊಂಡಿದ್ದಳಾದರೂ, ತಂದೆಗೆ ಖಾಸಗಿ ಕಾಲೇಜಿಗೆ ಸೇರಿಸುವಷ್ಟು ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಭಾನುವಾರ ಮುಂಜಾನೆ ವಿದ್ಯಾರ್ಥಿನಿಯು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ತನ್ನ ಆರ್ಥಿಕ ಪರಿಸ್ಥಿತಿಯಿಂದಾಗಿ ಮಗಳನ್ನು ಕಳೆದುಕೊಳ್ಳಬೇಕಾಯಿ ತಲ್ಲಾ ಎಂದು ಚಡಪಡಿಸುತ್ತಿದ್ದ ರಾಜು, ಮಗಳ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯು ತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಮಳವಳ್ಳಿ ಗ್ರಾಮಾಂತರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರವಿಕುಮಾರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »