ಕದ್ದ ಬೈಕ್‍ನಲ್ಲೇ ಸಂಚರಿಸುತ್ತಿದ್ದ ಚೋರನ ಸೆರೆ; 6 ದ್ವಿಚಕ್ರ ವಾಹನ ವಶ
ಮೈಸೂರು

ಕದ್ದ ಬೈಕ್‍ನಲ್ಲೇ ಸಂಚರಿಸುತ್ತಿದ್ದ ಚೋರನ ಸೆರೆ; 6 ದ್ವಿಚಕ್ರ ವಾಹನ ವಶ

September 14, 2020

ಮೈಸೂರು, ಸೆ.13(ಎಂಕೆ)- ಕಳವು ಮಾಡಿದ್ದ ಬೈಕ್‍ನಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿದ್ದ ದ್ವಿಚಕ್ರ ವಾಹನ ಚೋರನನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು, ಬಂಧಿತನಿಂದ 6 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಐಚನಹಳ್ಳಿಯ ಆನಂದ್(35) ಬಂಧಿತ ವ್ಯಕ್ತಿ. ಸೆ.3ರ ಸಂಜೆ 7 ಗಂಟೆಗೆ ಚೆಲುವಾಂಬ ಆಸ್ಪತ್ರೆ ಎದುರು ನಿಲ್ಲಿಸಿದ್ದ ಹುಣಸೂರಿನ ಕಾರ್ತಿಕ್ ಎಂಬವರ ಹೀರೊ ಸ್ಪ್ಲೆಂಡರ್ ಬೈಕ್ ಕಳವಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ಆರಂಭಿಸಿದ್ದ ದೇವರಾಜ ಠಾಣೆ ಪೊಲೀಸರು, ಕಳವು ಮಾಡಿದ್ದ ಬೈಕ್‍ನಲ್ಲಿ ತಿರುಗಾಡುತ್ತಿದ್ದ ಆನಂದನನ್ನು ಭಾನುವಾರ ಹೂಟಗಳ್ಳಿ ವೃತ್ತದ ಬಳಿ ಬಂಧಿಸಿದ್ದಾರೆ.

ವಿಚಾರಣೆಗೆ ಒಳಪಡಿಸಿದಾಗ ನಗರದ ವಿವಿಧೆಡೆ ಬೈಕ್ ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತ ಕಳವು ಮಾಡಿದ್ದ 4 ಹೀರೊ ಸ್ಪ್ಲೆಂಡರ್, 1 ಪ್ಯಾಷನ್ ಮತ್ತು 1 ಹೊಂಡಾ ಆಕ್ಟಿವಾ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ದೇವರಾಜ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್‍ಸ್ಪೆಕ್ಟರ್ ಗಳಾದ ರಾಜು, ಲೀಲಾವತಿ, ಸಿಬ್ಬಂದಿಗಳಾದ ಸೋಮಶೆಟ್ಟಿ, ವೀರೇಶ್, ಪ್ರದೀಪ್, ವೇಣುಗೋಪಾಲ್, ಚಂದ್ರು, ನಂದೀಶ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Translate »