ಕುಟ್ಟ ಬಳಿ ಭಾನುವಾರ ಬಾಲಕನ ಬಲಿ ಪಡೆದ ಹುಲಿ ಸೋಮವಾರ ಅವನ ತಾತನನ್ನೂ ಕೊಂದು ಹಾಕಿತು!
ಕೊಡಗು

ಕುಟ್ಟ ಬಳಿ ಭಾನುವಾರ ಬಾಲಕನ ಬಲಿ ಪಡೆದ ಹುಲಿ ಸೋಮವಾರ ಅವನ ತಾತನನ್ನೂ ಕೊಂದು ಹಾಕಿತು!

February 14, 2023

ಗೋಣಿಕೊಪ್ಪ, ಫೆ.13- ಪೊನ್ನಂಪೇಟೆ ತಾಲೂಕು ಕುಟ್ಟಾ ಸಮೀಪದ ಪಲ್ಲೇರಿ ಬಳಿ ತೋಟದಲ್ಲಿ ಭಾನುವಾರ ಸಂಜೆ ಬಾಲಕನನ್ನು ಬಲಿ ಪಡೆದಿದ್ದ ಹುಲಿ, ಇಂದು ಬೆಳಗ್ಗೆ ಆತನ ತಾತನನ್ನೂ ಬಲಿ ಪಡೆದಿದೆ. ತಮ್ಮ ಕುಟುಂಬದ ಇಬ್ಬರ ಸಾವಿನಿಂದ ಅಘಾತಕ್ಕೊಳಗಾದ ಬಾಲಕನ ಅಜ್ಜಿಯೂ ಸಾವಿಗೀಡಾಗಿದ್ದಾರೆ.
ಭಾನುವಾರ ಸಂಜೆ 4 ಗಂಟೆ ಸುಮಾ ರಿನಲ್ಲಿ ಚೂರಿಕಾಡು ಗ್ರಾಮದ ನೆಲ್ಲೀರ ಪೂಣಚ್ಚ ಎಂಬುವರ ತೋಟದಲ್ಲಿ ಆಡವಾಡುತ್ತಿದ್ದ ಬಾಲಕ ಚೇತನ್ (18) ಮೇಲೆ ದಾಳಿ ಮಾಡಿದ ಹುಲಿ, ದೇಹ ಕಚ್ಚಿಕೊಂಡು ಹೋಗಿ ಒಂದು ಭಾಗವನ್ನು ತಿಂದು ಹಾಕಿತ್ತು. ಅರಣ್ಯ ಅಧಿಕಾರಿಗಳು ಶೋಧನಾ ಕಾರ್ಯ ನಡೆಸಿದಾಗ ಕಾಡಂಚಿನ ಆನೆ ಕಂದಕದಲ್ಲಿ ಬಾಲಕನ ಅರೆಬರೆ ದೇಹ ಪತ್ತೆಯಾಗಿತ್ತು.

ತನ್ನ ಮಗಳು ವೀಣಾಕುಮಾರಿ ಪುತ್ರ ಹುಲಿ ದಾಳಿಗೆ ಬಲಿಯಾದ ವಿಚಾರ ತಿಳಿದು ಚೂರಿಕಾಡು ತೋಟಕ್ಕೆ ಆಗಮಿಸಿದ್ದ ಆತನ ತಾತ ರಾಜು (60) ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಬಹಿರ್ದೆಸೆಗೆಂದು ಲೈನ್‍ಮನೆಯಿಂದ ಹೊರಬಂದಾಗ ಹಠಾತ್ತನೇ ದಾಳಿ ನಡೆಸಿದ ಹುಲಿ, ಆತನನ್ನು ಎಳೆ ದೊಯ್ಯಲು ಆರಂಭಿಸಿದೆ. ಅಕ್ಕಪಕ್ಕದಲ್ಲಿ ದ್ದವರು ಕೂಗಿಕೊಂಡಾಗ ಅಲ್ಲಿಂದ ಓಡಿ ಹೋಗಿದೆ.

ಹುಲಿ ದಾಳಿಯಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ರಾಜು ಸಾವನ್ನಪ್ಪಿದ್ದರು. ತಮ್ಮ ಕುಟುಂಬದ ದುರಂತದಿಂದ ಅಘಾತಕ್ಕೊಳಗಾದ ಬಾಲಕನ ಅಜ್ಜಿ ಜಯಮ್ಮ (55) ಕುಸಿದುಬಿದ್ದು, ಸಾವನ್ನಪ್ಪಿದ್ದಾರೆ.

ಅಧಿಕಾರಿಗಳಿಗೆ ಘೇರಾವ್: ಘಟನಾ ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಹೋದಲ್ಲಿ ದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಡಿಎಫ್‍ಓ ಎ.ಟಿ. ಪೂವಯ್ಯ, ಸಿಸಿಎಫ್ ನಿರಂಜನ್ ಮೂರ್ತಿ, ನಾಗರಹೊಳೆ ಅಭಯಾರಣ್ಯದ ಆರ್‍ಎಫ್‍ಓ ಮೊಹಮದ್ ಜಶಾನ್, ಇತರ ಅರಣ್ಯ ಇಲಾಖೆ ಅಧಿಕಾರಿಗಳು, ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಅಡಿಷನಲ್ ಎಸ್.ಪಿ. ಸುಂದರ್ ರಾಜ್ ಅವರುಗಳು ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅರಣ್ಯ ಅಧಿಕಾರಿಗಳನ್ನು ಸುತ್ತುವರೆದ ಪ್ರತಿಭಟನಾಕಾರರು, ಧಿಕ್ಕಾರದ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ದಿನ ಮಾನವ ಜೀವ ಬಲಿ ನಡೆದ ಸಂದರ್ಭವೇ ಹುಲಿ ಸೆರೆಗೆ ಕಾರ್ಯಾಚರಣೆ ಏಕೆ ನಡೆಸಲಿಲ್ಲ, ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲು ವಿಫಲವಾಗಿದ್ದೇ ಮತ್ತೊಂದು ಜೀವ ಬಲಿಗೆ ಕಾರಣವಾಗಿದೆ. ಈ ಘಟನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ನೇರ ಕಾರಣ. ಎಸಿಎಫ್ ಹಾಗೂ ಆರ್‍ಎಫ್‍ಓ ವಿರುದ್ದ ಎಫ್‍ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಅವರ ವಿರುದ್ದ ಇಲಾಖಾ ವಿಚಾರಣೆ ನಡೆಸಬೇಕು, ತಕ್ಷಣವೇ ಜಾರಿಯಾಗುವಂತೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಪ್ರತಿಭಟನಾಕಾರರು ಆಕ್ರೋಶ ಹೊರಗೆಡವಿದರು.

25 ಹುಲಿ ಸೆರೆಗೆ ಕ್ರಮ: ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಮಿತಿ ಮೀರಿದೆ. 2 ಕಿ.ಮೀ.ಗೆ 1 ರಂತೆ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಒಂದು ಹುಲಿ ಸೆರೆಯಿಂದ ಮೂಲ ಸಮಸ್ಯೆ ಪರಿಹಾರವಾಗಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವ ಬಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಸಿಎಫ್ ನಿರಂಜನ್ ಮೂರ್ತಿ, ನಾಗರಹೊಳೆ ವ್ಯಾಪ್ತಿಯಲ್ಲಿ ಒಟ್ಟು 25 ಹುಲಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಈಗಾಗಲೇ 6 ಹುಲಿಗಳನ್ನು ಗುರುತಿಸಲಾಗಿದೆ. ಮುಂದಿನ 5 ತಿಂಗಳ ಒಳಗೆ ಎಲ್ಲಾ ಹುಲಿಗಳನ್ನು ಗುರುತಿಸಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುತ್ತದೆ. ಈ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಒಂದು ತಿಂಗಳ ಒಳಗೆ ರೇಡಿಯೊ ಕಾಲರ್ ಕೂಡ ವಿತರಣೆಯಾಗಲಿದೆ ಎಂದು ಮಾಹಿತಿ ನೀಡಿದರು. ಹಿರಿಯ ಅರಣ್ಯಾಧಿಕಾರಿಯ ಸಮ ಜಾಯಿಷಿಕೆಗಳಿಗೂ ಬಗ್ಗದ ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರಹಾಕಿದರು.

Translate »