10 ಮಂದಿ ಕುಖ್ಯಾತ ಕ್ರಿಮಿನಲ್‍ಗಳ ಬಂಧನ
ಮೈಸೂರು

10 ಮಂದಿ ಕುಖ್ಯಾತ ಕ್ರಿಮಿನಲ್‍ಗಳ ಬಂಧನ

February 14, 2023

ಮೈಸೂರು, ಫೆ. 13(ಎಂಟಿವೈ)-ಹಾಡಹಗಲೇ ನಂಜನಗೂಡು ತಾಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿ ಹಾಗೂ ಅವರ ಪುತ್ರನನ್ನು ಅಪಹರಿಸಿ, ಒತ್ತೆ ಹಣ ಪಡೆದು ಬಿಡುಗಡೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ನಂಜನಗೂಡು ಉಪವಿಭಾಗದ ಪೊಲೀಸರು, 10 ಮಂದಿ ನಟೋರಿಯಸ್ ಕ್ರಿಮಿನಲ್‍ಗಳನ್ನು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಚಂದಗಾಲುವಿನ ಬಸವಣ್ಣ ಅಲಿಯಾಸ್ ಖಾರದಪುಡಿ ಬಸವ ಈ ಪ್ರಕರಣದ ಪ್ರಮುಖ ಆರೋಪಿಯಾ ಗಿದ್ದು, ಈತನ ಜೊತೆ ಕುಣಿಗಲ್‍ನ ಅಭಿ, ಪ್ರಮೋದ್ ಅಲಿಯಾಸ್ ಕಾಡ, ಶಶಿಧರ್ ಅಲಿಯಾಸ್ ಬಾತು, ರಾಹುಲ್ ಅಲಿಯಾಸ್ ಬಬ್ಲು, ಚಂದ್ರು, ಶ್ರೀಧರ್, ಮಧು, ಸಂಜಯ್ ಮತ್ತು ಉದ್ಯಮಿಯ ಕಾರ್ಖಾನೆಯ ಮಾಜಿ ನೌಕರ ಅಜಯ್ ಬಂಧಿತರಾಗಿದ್ದು, ಇವರಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಸುಜುಕಿ ಝೆನ್ ಕಾರು (ಕೆಎ 03-ಝಡ್ 2313), ಕೆಟಿಎಂ ಡ್ಯೂಕ್ ಬೈಕ್ (ಕೆಎ 01-ಹೆಚ್‍ಎಲ್ 2676), ಯಮಹಾ ಆರ್‍ಎಕ್ಸ್ (ಕೆಎ 01-ಜೆಎಲ್ 7528), ಹೋಂಡಾ ಡಿಯೋ (ಕೆಎ 11-ಇಜಿ 8495), ಐದು ಡ್ರ್ಯಾಗರ್, ಮೂರು ಲಾಂಗ್‍ಗಳು, 11 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಪಹರಣಕಾರರು ವೃತ್ತಿನಿರತ ಕ್ರಿಮಿನಲ್‍ಗಳಾಗಿದ್ದು, ಹಲವಾರು ದುಷ್ಕøತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು. ಬಂಧಿತರಲ್ಲಿ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಚಂದಗಾಲು, ಬಸವಣ್ಣ ಅಲಿಯಾಸ್ ಖಾರದಪುಡಿ ಬಸವ ಕೊಲೆ ಪ್ರಕರಣ ವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, 11 ವರ್ಷ ಜೈಲು ವಾಸ ಅನುಭವಿಸಿ, ಬಿಡುಗಡೆಯಾಗಿದ್ದ. ಆನಂತರವೂ ಆತ ದುಷ್ಕøತ್ಯಗಳಲ್ಲಿ ತೊಡಗಿದ್ದು, ಈತನ ವಿರುದ್ಧ ಮಂಡ್ಯ ಪೂರ್ವ, ಪಶ್ಚಿಮ, ಶಿವಳ್ಳಿ, ಕೆ.ಆರ್. ಪೇಟೆ, ಮೈಸೂರಿನ ಮೇಟಗಳ್ಳಿ, ಮಂಡಿ ಠಾಣೆಗಳಲ್ಲಿ ಕೊಲೆ, ಸಶಸ್ತ್ರ ಕಾಯ್ದೆ ಸೇರಿದಂತೆ ಹಲವಾರು ಕಾಲಂಗಳಡಿ 9 ಪ್ರಕರಣಗಳು ದಾಖಲಾಗಿವೆ. ಕುಣಿಗಲ್ ಅಭಿ ವಿರುದ್ಧ ಮಂಡ್ಯ ಜಿಲ್ಲೆಯ ಶಿವಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಪ್ರಮೋದ್ ಅಲಿಯಾಸ್ ಕಾಡ ವಿರುದ್ಧ ಮಂಡ್ಯ ಪಶ್ಚಿಮ, ಶಿವಳ್ಳಿ, ಪಾಂಡವಪುರ, ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಗಳಲ್ಲಿ 5 ಪ್ರಕರಣಗಳು, ಶಶಿಧರ್ ಅಲಿಯಾಸ್ ಬಾತು ವಿರುದ್ಧ ಮಂಡ್ಯ ಗ್ರಾಮಾಂತರ, ಶಿವಳ್ಳಿ, ಪಾಂಡವಪುರ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ. ರಾಹುಲ್ ಅಲಿಯಾಸ್ ಬಬ್ಲು ಮತ್ತು ಚಂದ್ರು ವಿರುದ್ಧ ಬನ್ನೂರು ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದರು.

ಪ್ರಕರಣದ ವಿವರ: ನಂಜನಗೂಡು ತಾಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಹರ್ಷ ಇಂಪೆಕ್ಸ್ ಕಾರ್ಖಾನೆಯ ಕಾರ್ಮಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಗೋಡೌನ್‍ನಲ್ಲಿ ಕೂಡಿಹಾಕಿ, ಫೆಬ್ರವರಿ 6ರಂದು ಮಧ್ಯಾಹ್ನ 12.50ರ ಸುಮಾರಿನಲ್ಲಿ ಕಾರ್ಖಾನೆಯ ಮಾಲೀಕ ದೀಪಕ್ ಮತ್ತು ಅವರ ಪುತ್ರ ಹರ್ಷನನ್ನು ಅವರದೇ ಕಾರಿನ ಸಮೇತ ದುಷ್ಕರ್ಮಿಗಳು ಅಪಹರಿಸಿದ್ದರು. ಅಪಹರಣಕಾರರು ಒಂದು ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಪಹರಣ ವಿಚಾರ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸರು, ಸಂಪರ್ಕ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಶೋಧನಾ ಕಾರ್ಯಾ ಚರಣೆಯಲ್ಲಿ ತೊಡಗಿದ್ದರು. ಆದರೆ, ಅಪಹರಣಕಾರರು ಮೈಸೂರಿನ ಸುತ್ತೂರು ಮಠದ ಬಳಿ ದೀಪಕ್ ಅವರ ಕಾರನ್ನು ಬಿಟ್ಟು ತಂದೆ ಹಾಗೂ ಮಗನನ್ನು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದರು. ಇತ್ತ ಗಡಿಯಲ್ಲಿ ಪೊಲೀಸರು, ಶೋಧನಾ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ ಅತ್ತ ಅಪಹರಣಕಾರರು ಬುದ್ಧಿವಂತಿಕೆಯಿಂದ ಮೈಸೂರು ನಗರ ವ್ಯಾಪ್ತಿಯಲ್ಲೇ ಸುತ್ತಾಡುತ್ತಾ, ದೀಪಕ್ ಮೊಬೈಲ್ ಮೂಲಕವೇ ಅವರ ಸಂಬಂಧಿಕರನ್ನು ಸಂಪರ್ಕಿಸುವಂತೆ ಮಾಡಿ, ಸಂಜೆ ವೇಳೆಗೆ 35 ಲಕ್ಷ ರೂ. ಒತ್ತೆ ಹಣ ಪಡೆದು ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಜಲಮಹಲ್ ರೆಸಾರ್ಟ್ ಬಳಿ ತಂದೆ ಹಾಗೂ ಮಗನನ್ನು ಅಂದು ಸಂಜೆ 6 ಗಂಟೆ ಸುಮಾರಿನಲ್ಲಿ ಬಿಡುಗಡೆ ಮಾಡಿದ್ದರು.

ಒತ್ತೆಯಾಳುಗಳನ್ನು ಅಪಹರಣಕಾರರು ಜಲಮಹಲ್ ರೆಸಾರ್ಟ್ ಬಳಿ ಕಾರಿನಲ್ಲಿ ಇರಿಸಿಕೊಂಡಿದ್ದರೆ, ಅಪಹರಣಕಾರರ ಮತ್ತೊಂದು ತಂಡ ದ್ವಿಚಕ್ರ ವಾಹನದಲ್ಲಿ ಬೇರೊಂದು ಕಡೆ ದೀಪಕ್‍ರವರ ಸಂಬಂಧಿಕರಿಂದ ಒತ್ತೆ ಹಣ ಪಡೆದು, ಕಾರಿನಲ್ಲಿ ದ್ದವರಿಗೆ ಮೊಬೈಲ್ ಮೂಲಕ ಮಾಹಿತಿ ರವಾನಿಸಿದ ನಂತರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿತ್ತು. ಅಂದು ರಾತ್ರಿ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅಪಹರಣಕಾರರ ಪತ್ತೆಗಾಗಿ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಅವರು, ಎಎಸ್ಪಿ ಡಾ. ನಂದಿನಿ ಮಾರ್ಗದರ್ಶನದಲ್ಲಿ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಶಿವನಂಜ ಶೆಟ್ಟಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದರು.

ವರ್ಷದ ಹಿಂದಿನ ಬೆದರಿಕೆ ಕರೆಯ ಜಾಡು: ವಿಶೇಷ ತಂಡವು ದೀಪಕ್ ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ವರ್ಷದ ಹಿಂದೆ ಅವರಿಗೆ ಅನಾಮಧೇಯ ಸಂಖ್ಯೆಯಿಂದ ವ್ಯಕ್ತಿಯೋರ್ವ ಕರೆಮಾಡಿ, ಒಂದು ಕೋಟಿ ರೂ. ಹಫ್ತಾ ನೀಡಬೇಕೆಂದು ಒತ್ತಡ ಹೇರಿದ್ದ. ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚಿಸುತ್ತಿರುವ ಮಾಹಿತಿಯನ್ನು ಬಹಿರಂಗಪಡಿ ಸುವುದಾಗಿಯೂ ಹೇಳಿದ್ದ ಆತ, ಹಣ ಕೊಡದಿದ್ದರೆ ಕಾರ್ಖಾನೆಯಿಂದಲೇ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬೆದರಿಕೆ ಕರೆಗೆ ಉಡಾಫೆಯಿಂದ ಉತ್ತರಿಸಿದ್ದ ದೀಪಕ್, ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಾಗೂ ಪೊಲೀಸರಿಗೆ ದೂರನ್ನೂ ಸಲ್ಲಿಸಿರಲಿಲ್ಲ. ಆದರೆ, ಅನಾಮಧೇಯ ಕರೆ ಬಂದ ಮೊಬೈಲ್ ಸಂಖ್ಯೆಯನ್ನು ತಮ್ಮ ಮೊಬೈಲ್‍ನಲ್ಲಿ ಸೇವ್ ಮಾಡಿಟ್ಟುಕೊಂಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಈ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆಗಳಿದ ಪೊಲೀಸರು, ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಅದು ಮಾತ್ರವಲ್ಲದೇ ಅಪಹರಣಕಾರರು ಒತ್ತೆ ಹಣ ಪಡೆದ ಸ್ಥಳದ ಮೊಬೈಲ್ ಟವರ್ ಮತ್ತು ಒತ್ತೆಯಾ ಳುಗಳನ್ನು ಬಿಡುಗಡೆ ಮಾಡಿದ ಸ್ಥಳದ ಟವರ್‍ಗಳಲ್ಲಿ ಫೆಬ್ರವರಿ 6ರಂದು ಸಂಜೆ ಕಾರ್ಯನಿರ್ವಹಿಸಿದ ಮೊಬೈಲ್‍ಗಳ ವಿವರಗಳನ್ನು ಕಲೆಹಾಕಿದ್ದ ಒಂದು ತನಿಖಾ ತಂಡ, ಪ್ರಮುಖ ಆರೋಪಿ ಖಾರದ ಪುಡಿ ಬಸವ ಈ ಪ್ರಕರಣ ಹಿಂದೆ ಇರುವುದನ್ನು ಖಚಿತಪಡಿಸಿಕೊಂಡಿದೆ. ಈತ ಜೈಲಿನಲ್ಲಿದ್ದಾಗಲೂ ಶ್ರೀಮಂತರಿಗೆ ಕರೆ ಮಾಡಿ ಬೆದರಿಸಿ ತನ್ನ ಸಹಚರರ ಮೂಲಕ ಹಣ ವಸೂಲಿ ಮಾಡುತ್ತಿದ್ದ ಎಂಬುದನ್ನು ಪತ್ತೆ ಮಾಡಿದ್ದರು. ಆ ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ಮತ್ತೋರ್ವ ಆರೋಪಿ ರವಿ ಎಂಬಾತನಿಗಾಗಿ ಹುಡುಕಾಟ ನಡೆದಿದೆ.

ಈ ಪತ್ತೆ ಕಾರ್ಯದಲ್ಲಿ ನಂಜನಗೂಡಿನ ಡಿವೈಎಸ್‍ಪಿ ಗೋವಿಂದರಾಜು, ಇನ್ಸ್‍ಪೆಕ್ಟರ್ ಶಿವನಂಜಶೆಟ್ಟಿ, ಪಿಎಸ್‍ಐಗಳಾದ ಚೇತನ, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತಕೋಳಿ, ಕಮಲಾಕ್ಷಿ, ಸಿ.ಕೆ.ಮಹೇಶ್, ಪೆÇ್ರಬೆಷನರಿ ಪಿಎಸ್‍ಐ ಚರಣ್‍ಗೌಡ, ಎಎಸ್‍ಐಗಳಾದ ಶಿವಕುಮಾರ್, ವಸಂತಕುಮಾರ್, ಸಿಬ್ಬಂದಿಯಾದ ಸುರೇಶ್, ವಸಂತಕುಮಾರ್, ಸುನೀತಾ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಪ್, ನಿಂಗರಾಜು, ಸುರೇಶ್, ಸುಶೀಲ್‍ಕುಮಾರ್, ರಾಜು, ಚೇತನ್, ವಿಜಯ್‍ಕುಮಾರ್, ಮಂಜು, ಚೆಲುವರಾಜು ಪಾಲ್ಗೊಂಡಿದ್ದರು. ಈ ತಂಡಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

Translate »