ಮಾ.15ರೊಳಗೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಿ
ಮೈಸೂರು

ಮಾ.15ರೊಳಗೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಿ

February 14, 2023

ಮೈಸೂರು, ಫೆ.13(ಆರ್‍ಕೆ)- ಮೈಸೂರು ಮತ್ತು ಕುಶಾಲನಗರ ನಡುವೆ 3,529.76 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇ ಶಿಸಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಮಾರ್ಚ್ 15ರೊಳಗಾಗಿ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಡಿಸಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಐದು ಪ್ಯಾಕೇಜ್ ಗಳಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‍ಹೆಚ್‍ಎಐ)ವು ಮೈಸೂರು-ಕುಶಾಲನಗರ ಹೆದ್ದಾರಿ (92 ಕಿ.ಮೀ.) ನಿರ್ಮಾಣ ಯೋಜನೆಯನ್ನು ಅನು ಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಮಾರ್ಚ್ 5 ರೊಳಗೆ ಭೂಸ್ವಾಧೀನ ಪ್ರಕ್ರಿಯೆ ಅಡಚಣೆಗಳನ್ನು ನಿವಾರಿಸಿ ಎಂದು ತಿಳಿಸಿದರು. ಯೋಜನೆಗೆ 664.897 ಎಕರೆ ಭೂಮಿ ಅಗತ್ಯವಿದ್ದು, ಭೂಸ್ವಾಧೀನ ಪರಿಹಾರಕ್ಕೆ 1,113.18 ಕೋಟಿ ರೂ. ಹಾಗೂ ಚತುಷ್ಪಥ ಹೆದ್ದಾರಿ ನಿರ್ಮಿಸಲು 2,416. 578 ಕೋಟಿ ರೂ. ಒಟ್ಟು 3,529.76 ಕೋಟಿ ರೂ. ಅನುದಾನ ಬೇಕಾಗುತ್ತದೆ. ಕೇಂದ್ರ ಸರ್ಕಾರವು ರಸ್ತೆ ನಿರ್ಮಾಣ ವೆಚ್ಚವನ್ನು ಭರಿಸಿ, ಯೋಜನೆ ಅನುಷ್ಠಾನ ಮಾಡಲಿದೆ ಎಂದು ಪ್ರತಾಪ್ ಸಿಂಹ ನುಡಿದರು.

ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿ, ಮಾಲೀಕರಿಗೆ ಪರಿಹಾರ ನೀಡಲು ಇರುವ ಅಡೆತಡೆಗಳನ್ನು ನಿವಾರಿಸಬೇಕು. ಭೂಮಿಯ ನಿಜವಾದ ಭೂ ಮಾಲೀಕರನ್ನು ಗುರುತಿಸಿ ಪರಿಹಾರ ಕಲ್ಪಿಸಲು ಅನುವು ಮಾಡಿ ಕೊಡಬೇಕು. ಈ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸದಿದ್ದರೆ, ಯೋಜನೆ ಆರಂಭಿಸಲು ವಿಳಂಬವಾಗುತ್ತದೆ ಎಂದು ನುಡಿದರು. ಮೈಸೂರು, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕುಗಳಲ್ಲಿ ಹೆದ್ದಾರಿ ಹಾದು ಹೋಗುವ ಮಾರ್ಗದ ಖಾಸಗಿ ಜಮೀನು ಸ್ವಾಧೀನಪಡಿಸಲು ಆರ್‍ಟಿಸಿ ತಿದ್ದುಪಡಿ, ದುರಸ್ತಿ ಮಾಡಬೇಕು. ಹಂಗಾಮಿ ಸಾಗುವಳಿ ಪತ್ರ ಪಡೆದು ಸ್ವಾಧೀನಾನುಭವದಲ್ಲಿರುವ ರೈತರ ಹೆಸರಿಗೆ ದಾಖಲೆಗಳನ್ನು ಪರಿಶೀಲಿಸಿ ಖಾಯಂ ಸಾಗುವಳಿ ಚೀಟಿ ನೀಡಿ ಪರಿಹಾರ ಮಂಜೂರು ಮಾಡಲು ಹೆದ್ದಾರಿಗಳ ಪ್ರಾಧಿಕಾರದ ಅಧಿ ಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎಂದು ಪ್ರತಾಪ್ ಸಿಂಹ ತಿಳಿಸಿದರು. ಹೆದ್ದಾರಿ ಹಾದು ಹೋಗುವ ಜಮೀನು ಗಳಲ್ಲಿ ಬೆಳೆದಿರುವ ಮರ, ತೋಟಗಾರಿಕೆ ಬೆಳೆ, ನಿರ್ಮಿಸಿರುವ ಕಟ್ಟಡಗಳಿಗೆ ಬೆಲೆ ನಿಗದಿಗೊಳಿಸಬೇಕು. ಅರಣ್ಯ ಪ್ರದೇಶ, ನದಿ, ಕಾಲುವೆ, ಕೆರೆಗಳಿದ್ದರೆ, ವಿದ್ಯುತ್ ಉಪ ಕೇಂದ್ರಗಳು, ಟ್ರಾನ್ಸ್‍ಫಾರ್ಮರ್, ಕಂಬಗಳ ಸ್ಥಳಾಂತರ ಸೇರಿದಂತೆ ಇನ್ನಿತರ ಯಾವುದೇ ತೊಂದರೆಗಳನ್ನು ನಿವಾರಿಸು ವಂತೆಯೂ ಅವರು ತಿಳಿಸಿದರು.

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡುವ ದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲು ಉದ್ದೇಶಿಸಿರುವು ದರಿಂದ ಮೂರೂ ತಾಲೂಕುಗಳ ತಹ ಸೀಲ್ದಾರರು, ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್ಸ್‍ಪೆಕ್ಟರ್‍ಗಳು, ಉಪವಿಭಾಗಾಧಿಕಾರಿ ಗಳು, ಭೂ ದಾಖಲೆಗಳ ಉಪನಿರ್ದೇಶಕರು, ಚೆಸ್ಕಾಂ, ಅರಣ್ಯ ಇಲಾಖೆ, ನೀರಾವರಿ, ತೋಟಗಾರಿಕೆ, ಭೂ ಸ್ವಾಧೀನಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಮನ್ವಯ ಸಾಧಿಸಿ ಭೂ ಸ್ವಾಧೀನಕ್ಕೆ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಸಂಸದರು ಇದೇ ಸಂದರ್ಭ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್, ಭೂ ಸ್ವಾಧೀನಾಧಿಕಾರಿ ಹರ್ಷವರ್ಧನ್, ಉಪವಿಭಾಗಾಧಿಕಾರಿ ಕೆ.ಆರ್. ರಕ್ಷಿತ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »