ಕುಡಿದ ಅಮಲಿನಲ್ಲಿ ಪತ್ನಿಯ ರುಂಡ-ಮುಂಡ ಬೇರ್ಪಡಿಸಿದ ಪತಿ
ಮೈಸೂರು

ಕುಡಿದ ಅಮಲಿನಲ್ಲಿ ಪತ್ನಿಯ ರುಂಡ-ಮುಂಡ ಬೇರ್ಪಡಿಸಿದ ಪತಿ

June 29, 2022

ಮೈಸೂರು, ಜೂ.28(ಆರ್‍ಕೆ)- ಕೌಟುಂಬಿಕ ಕಲಹದಿಂದ ಕುಡಿದ ಅಮಲಿನಲ್ಲಿ ಪತಿ, ಪತ್ನಿಯ ರುಂಡ-ಮುಂಡ ಬೇರ್ಪಡಿಸಿ, ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರು ತಾಲೂಕು ಚೆಟ್ಟನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ವರುಣಾ ಹೋಬಳಿ ಚೆಟ್ಟನಹಳ್ಳಿ ಗ್ರಾಮದ ನಿವಾಸಿ ದೇವರಾಜು, ತನ್ನ ಪತ್ನಿ ಪುಟ್ಟಮ್ಮ (45)ನನ್ನು ಭೀಭತ್ಸವಾಗಿ ಹತ್ಯೆಗೈದಿದ್ದಾನೆ. ಕಂಠಪೂರ್ತಿ ಕುಡಿದು ಬಂದ ದೇವರಾಜು, ಸೋಮವಾರ ಸಂಜೆ 4 ಗಂಟೆ ವೇಳೆಯಲ್ಲಿ ಮಚ್ಚಿನಿಂದ ಪತ್ನಿಯ ಕತ್ತು ಕತ್ತರಿಸಿ ಪರಾರಿಯಾಗಿದ್ದಾನೆ. ಕಾಲೇಜಿಗೆ ಹೋಗಿದ್ದ ಪುತ್ರಿ ಸಂಜೆ 5.30 ಗಂಟೆ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯೊಳಗೆ ತಾಯಿಯ ರುಂಡ-ಮುಂಡ ಬೇರ್ಪಟ್ಟು ರಕ್ತಸಿಕ್ತ ದೇಹ ಕಂಡು, ಆಘಾತದಿಂದ ಚೀರಿಕೊಂಡಿದ್ದಾಳೆ. ಭಯದಿಂದ ಮನೆಯೊಳಗಿಂದ ಹೊರ ಓಡಿ ಬಂದ ಯುವತಿ ಕಂಡು ಸ್ಥಳಕ್ಕೆ ಬಂದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ವರುಣಾ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿ, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡು ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಕೊಲೆ ಆರೋಪಿ ದೇವರಾಜು ಪತ್ತೆಗೆ ಕಾರ್ಯಾ ಚರಣೆ ಆರಂಭಿಸಿದ್ದಾರೆ. ಮೊದಲ ಪತ್ನಿಗೂ ಕಿರುಕುಳ ನೀಡಿ ಆಕೆಯ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ದೇವರಾಜು, ಆನಂತರ ಇವನ ಕಿರುಕುಳ ತಾಳದೇ ಆಕೆ ಪತಿಯಿಂದ ಬೇರ್ಪಟ್ಟಿದ್ದಾಳೆ. ನಂತರ ಆತ ಪುಟ್ಟಮ್ಮರನ್ನು ಮದುವೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ ಆತ, ನಿತ್ಯ ಕುಡಿದು ಬಂದು ಪತ್ನಿ ಮೇಲೆ ಸಂಶಯಗೊಂಡು ಜಗಳ ತೆಗೆದು, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಸೋಮವಾರ ಸಂಜೆ ಕುಡಿದು ಬಂದು ಜಗಳ ತೆಗೆದು ಮಚ್ಚಿನಿಂದ ಪುಟ್ಟಮ್ಮನ ಕತ್ತು ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ಪರಾರಿಯಾಗಿದ್ದಾನೆ ಎಂದು ಇನ್ಸ್‍ಪೆಕ್ಟರ್ ಮಹೇಶ್ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿ ದ್ದಂತೆಯೇ ತಲೆಮರೆಸಿಕೊಂಡಿರುವ ದೇವರಾಜು ಬಂಧನಕ್ಕೆ ಬಲೆ ಬೀಸಿದ್ದಾರೆ.

Translate »