ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳೊಂದಿಗೆ ಗೃಹಿಣಿ ಆತ್ಮಹತ್ಯೆ
ಮೈಸೂರು

ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳೊಂದಿಗೆ ಗೃಹಿಣಿ ಆತ್ಮಹತ್ಯೆ

June 29, 2022

ತಿ.ನರಸೀಪುರ, ಜೂ.28(ಎಸ್‍ಕೆ)- ಪತಿಯ ಅಕ್ರಮ ಸಂಬಂಧದಿಂದ ಮನನೊಂದ ಗೃಹಿಣಿ ತನ್ನೆರಡು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೋಜಾ(30) ತನ್ನ ಪತಿ ನಿಂಗರಾಜು ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾ ನೆಂಬ ಕಾರಣದಿಂದ ಮನನೊಂದು ಮಕ್ಕಳಾದ ಪುಷ್ಪಾಂಜಲಿ(5) ಮತ್ತು ಗೀತಾಂಜಲಿ(3) ಇಬ್ಬರನ್ನು ನೇಣು ಹಾಕಿ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ರೋಜಾಳ ವಿವಾಹ ಮಾವಿನಹಳ್ಳಿಯ ನಿಂಗರಾಜುವಿನೊಂದಿಗೆ ನಡೆದಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದರು. ಆದರೆ, ದಂಪತಿ ನಡುವೆ ಆಗಾಗ ಹಣಕಾಸಿನ ವಿಚಾರವಾಗಿ ಜಗಳವಾಗುತ್ತಿತ್ತು. ಇತ್ತೀಚೆಗೆ ನಿಂಗರಾಜನು ಪತ್ನಿ ರೋಜಾಳಿಗೆ ಮಾನಸಿಕ ಕಿರುಕುಳ ನೀಡುವುದರ ಜೊತೆ ದೈಹಿಕ ಹಲ್ಲೆ ನಡೆಸಿ ತಂದೆ ಮನೆಗೆ ಹೋಗುವಂತೆ ಪೀಡಿಸುತ್ತಿದ್ದನು. ಇದರಿಂದ ಮನನೊಂದ ಮಹಿಳೆ ತನ್ನ ತಂದೆ ಮನೆಗೆ ಬಂದು, ಸೋಮವಾರ ರಾತ್ರಿ ತನ್ನೆರಡು ಮಕ್ಕಳನ್ನು ನೇಣು ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ನಿಂಗರಾಜು ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಡಿವೈಎಸ್‍ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ತಿ.ನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸರ್ಕಲ್ ಇನ್‍ಸ್ಪೆಕ್ಟರ್ ಕೃಷ್ಣಪ್ಪ ತನಿಖೆ ಕೈಗೊಂಡಿದ್ದಾರೆ.

Translate »