ಕೊಡಗಲ್ಲಿ ವಾರದಲ್ಲಿ 3ನೇ ಬಾರಿ ಭೂ ಕಂಪನ
ಕೊಡಗು

ಕೊಡಗಲ್ಲಿ ವಾರದಲ್ಲಿ 3ನೇ ಬಾರಿ ಭೂ ಕಂಪನ

June 29, 2022

ಮಡಿಕೇರಿ, ಜೂ.28- ಕೊಡಗು ಜಿಲ್ಲೆ ಯಲ್ಲಿ ವಾರದಲ್ಲಿ ಮೂರನೇ ಬಾರಿ ಭೂಮಿ ಕಂಪಿಸಿದ್ದು, ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡ್‍ನಲ್ಲಿ ಲಘು ಭೂ ಕಂಪನ ವಾಗಿದ್ದು, ಜನತೆ ಬೆಚ್ಚಿ ಬಿದ್ದಿದ್ದಾರೆ. ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಚೆಂಬು ಗ್ರಾಮದ 5.2 ಕಿ.ಮೀ ದೂರದ ವಾಯುವ್ಯ ದಿಕ್ಕಿನ 15 ಕಿ.ಮೀ ಆಳದಲ್ಲಿ ಭೂ ಕಂಪನದ ಕೇಂದ್ರ ಬಿಂದುವಿತ್ತು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ಮಂಗಳವಾರ ಬೆಳಗ್ಗೆ ಸಂಭವಿಸಿದ ಲಘು ಭೂಕಂಪನ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಅಧಿಕೃತ
ಬುಲೆಟಿನ್ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಂ.ಚೆಂಬು ಗ್ರಾಮ ಸಮೀಪ ಭೂ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3ರಷ್ಟು ಪ್ರಮಾಣದ ಕಂಪನ ದಾಖಲಾಗಿದೆ ಎಂದು ಮಾಹಿತಿ ನೀಡಿದೆ. ಇದರ ಪ್ರಭಾವ 40ರಿಂದ 50 ಕಿ.ಮೀ ವ್ಯಾಪ್ತಿಯಿದ್ದು, ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿರುವುದಾಗಿ ವರದಿ ಯಾಗಿದೆ. ಎರಡು ದಿನಗಳ ಮೊದಲು ಸಂಭವಿಸಿದ ಭೂ ಕಂಪನಗಿಂತ ಅಧಿಕ ತೀವ್ರತೆಯ ಕಂಪನ ಇದಾಗಿದೆ. ಮಡಿಕೇರಿ ನಗರ, ಮಕ್ಕಂದೂರು, ಮುಕ್ಕೋಡ್ಲು, ಗಾಳೀಬೀಡು, ಮೊಣ್ಣಂಗೇರಿ, ಉದಯಗಿರಿ, ಕಾಲೂರು, ದೇವ ಸ್ತೂರು, ಭಾಗಮಂಡಲ, ಕಕ್ಕಬ್ಬೆ, ಕುಂದಚೇರಿ, ನಾಪೋಕ್ಲು ಲಕ್ಕುಂದ ಕಾಡು, ಯವಕಪಾಡಿ, ಮದೆನಾಡು, ಕೊಯನಾಡು, ಕರಿಕೆ, ಸಂಪಾಜೆ, ಚೆಂಬು, ಪೆರಾಜೆ, ವಿರಾಜ ಪೇಟೆ ತಾಲೂಕಿನ ತೋರಾ, ಕೆದ ಮುಳ್ಳೂರು, ಸುಳ್ಯ ತಾಲೂಕಿನ ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರು, ಕಲ್ಮಕಾರು, ದೇವ ಚಳ್ಳ, ಜಾಲ್ಸೂರು, ಆಲೆಟ್ಟಿ, ಐವರ್ನಾಡು, ಅಮರಮುಡ್ನೂರು, ಮತಿತ್ತರ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಮಿ ಒಳಗಿನಿಂದ ವಿಚಿತ್ರ ಶಬ್ದದೊಂದಿಗೆ 4ರಿಂದ 5 ಸೆಕೆಂಡ್‍ಗಳ ಕಾಲ ಕಂಪನದ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. ಕಂಪನಕ್ಕೆ ಮನೆಗಳ ಪಾತ್ರೆಗಳು ಅಲುಗಾಡಿದ್ದು, ಭೂ ಕಂಪನದ ಅನುಭವ ಎಲ್ಲರಿಗೂ ಆಗಿದೆ. ಭಗವತಿ ನಗರ ಹಾಗೂ 2ನೇ ಮೊಣ್ಣಂಗೇರಿ ಹಾಗೂ ಕೊಡಗು-ಸುಳ್ಯ ಭಾಗದ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಜನರು ದಿಗ್ಬ್ರಾಂತಿಗೆ ಒಳಗಾಗಿದ್ದಾರೆ.

Translate »