ಮೈಸೂರು,ಸೆ.30(ಎಂಟಿವೈ, ಹನಗೋಡು ಮಹೇಶ್)- ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಅಭಿಮನ್ಯು ನೇತೃತ್ವದ ಗಜಪಡೆ ನಾಳೆ (ಅ.1) ಮೈಸೂರಿನ ಅರಣ್ಯ ಭವನಕ್ಕೆ ಆಗಮಿ ಸಲಿದ್ದು, ಅ.2ರಂದು ಮಧ್ಯಾಹ್ನ 12.18 ರಿಂದ 12.40ರೊಳಗೆ ಸಲ್ಲುವ ಧನುರ್ ಲಗ್ನದಲ್ಲಿ ಅರಮನೆ ಆವರಣ ಪ್ರವೇಶಿಸಲಿವೆ.
ಕೋವಿಡ್-19 ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಲಾಗಿದ್ದು, ಜಂಬೂಸವಾರಿ ಮೆರವಣಿಗೆ ಅರಮನೆ ಅಂಗಳದಲ್ಲಿ ಮಾತ್ರ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವ ದಲ್ಲಿ ಕೇವಲ 5 ಆನೆಗಳು ಮಾತ್ರ ಪಾಲ್ಗೊ ಳ್ಳಲಿವೆ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ಅಂಬಾರಿ ಜವಾಬ್ದಾರಿ ಹೊರಿಸ ಲಾಗಿದೆ. ಅಲ್ಲದೆ ನಾಳೆ ಬೆಳಗ್ಗೆ ಕೆಲವು ಅಧಿಕಾರಿಗಳ ಸಮ್ಮುಖದಲ್ಲಿ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿಯಿಂದ ಅಂಬಾರಿ ಆನೆ ಅಭಿಮನ್ಯು, ಪಟ್ಟದ ಆನೆ ವಿಕ್ರಮ, ನಿಶಾನೆ ಆನೆ ಗೋಪಿ, ಕುಮ್ಕಿ ಆನೆಗಳಾದ ಕಾವೇರಿ, ವಿಜಯ ಆನೆಗಳಿಗೆ ಸರಳ ಹಾಗೂ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿಗೆ ಬೀಳ್ಕೊಡಲಾಗುತ್ತಿದೆ. ಮಧ್ಯಾ ಹ್ನದ ವೇಳೆ ಲಾರಿಯಲ್ಲಿ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನವನ್ನು ಎಲ್ಲಾ 5 ಆನೆಗಳು ತಲುಪಲಿದ್ದು, ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿವೆ.
ಬಳಿಕ ಅ.2ರಂದು ಬೆಳಗ್ಗೆ ಸಂಪ್ರದಾಯದಂತೆ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಭವನದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ, ಲಾರಿಯಲ್ಲಿ ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಕರೆ ತಂದು, ಅಂದು ಮಧ್ಯಾಹ್ನ 12.18 ರಿಂದ 12.40ರವರೆಗೆ ಸಲ್ಲುವ `ಧನುರ್’ ಶುಭ ಲಗ್ನದಲ್ಲಿ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರಾಮದಾಸ್ ವಹಿಸಲಿದ್ದಾರೆ.
ಕೇವಲ ಮಾವುತ, ಕಾವಾಡಿಗಳಷ್ಟೇ ಆಗಮನ: ನಾಳೆ ಮೈಸೂರಿಗೆ ಬರುತ್ತಿರುವ ಗಜಪಡೆಯೊಂದಿಗೆ ಮಾವುತ, ಕಾವಾಡಿ ಹೊರತುಪಡಿಸಿ ಅವರ ಕುಟುಂಬ ಸದಸ್ಯರು ಬರುತ್ತಿಲ್ಲ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎಚ್ಚರಿಕಾ ಕ್ರಮವಾಗಿ ಗುಂಪುಗೂಡು ವಿಕೆಗೆ ಅವಕಾಶ ನೀಡದಿರಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯುವಿನೊಂದಿಗೆ ಮಾವುತ ವಸಂತ, ಕಾವಾಡಿ ರಾಜಣ್ಣ, ಕುಶಾಲನಗರ ಆನೆಕಾಡು ಕ್ಯಾಂಪ್‍ನಲ್ಲಿರುವ ಪಟ್ಟದ ಆನೆ ವಿಕ್ರಮನೊಂದಿಗೆ ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್, ಕುಮ್ಕಿ ಆನೆ ವಿಜಯಳೊಂದಿಗೆ ಮಾವುತ ಭೋಜಪ್ಪ, ದುಬಾರೆ ಆನೆ ಕ್ಯಾಂಪ್‍ನಿಂದ ನಿಶಾನೆ ಆನೆ ಗೋಪಿಯೊಂದಿಗೆ ಮಾವುತ ನಾಗರಾಜು, ಕಾವಾಡಿ ಶಿವು ಹಾಗೂ ದುಬಾರೆ ಶಿಬಿರದಿಂದ ಕುಮ್ಕಿ ಆನೆ ಕಾವೇರಿಯೊಂದಿಗೆ ಮಾವುತ ಡೋಬಿ, ಅದರ ಕಾವಾಡಿ ಆಗಮಿಸಲಿದ್ದಾರೆ.